ಡ್ರಗ್ಸ್ ಜಾಲ : ಎನ್‍ಸಿಬಿಯಿಂದ ದೀಪಿಕಾ, ಶ್ರದ್ಧಾ, ಸಾರಾ ವಿಚಾರಣೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.26-ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣ ಮತ್ತು ಮಾದಕ ವಸ್ತು ಜಾಲಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿರುವ ಮಾದಕವಸ್ತು ನಿಯಂತ್ರಣ ಮಂಡಳಿ (ಎನ್‍ಸಿಬಿ) ಇಂದು ಬಿ-ಟೌನ್ ಖ್ಯಾತ ನಟಿಮಣಿಯರಾದ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್ ಮತ್ತು ಸಾರಾ ಅಲಿ ಖಾನ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿತು.

ಸುದೀರ್ಘ ವಿಚಾರಣೆ ವೇಳೆ ಕೆಲವು ಮಹತ್ವದ ಸಂಗತಿಗಳು ಬೆಳಕಿಗೆ ಬಂದಿವೆ ಎಂದು ಎನ್‍ಸಿಪಿ ಉನ್ನತ ಮೂಲಗಳು ತಿಳಿಸಿವೆ.  ದೀಪಿಕಾ ಪಡುಕೋಣೆ ವಾಟ್ಸಾಪ್ ಮೂಲಕ ಡ್ರಗ್ಸ್‍ಗೆ ಸಂಬಂಧಿಸಿದಂತೆ ಗೌಪ್ಯವಾಗಿ ನಡೆಸಿದರೆಂದು ಹೇಳಲಾದ ಸಂದೇಶಗಳು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಇಂದಿನ ತನಿಖೆ ಭಾರೀ ಪ್ರಾಮುಖ್ಯತೆ ಪಡೆದುಕೊಂಡಿದೆ.

ಪದ್ಮಾವತ್ ಖ್ಯಾತಿಯ ನಟಿ ದೀಪಿಕಾ ಪಡುಕೋಣೆ ಇಂದು ಬೆಳಗ್ಗೆ 10 ಗಂಟೆಗೆ ಮುಂಬೈನ ಎನ್‍ಸಿಬಿ ಕಚೇರಿಗೆ ಆಗಮಿಸಿದರು. ಶ್ರದ್ಧಾ ಕಪೂರ್ ಮತ್ತು ಸಾರಾ ಅಲಿಖಾನ್ ಬೆಳಗ್ಗೆ 10.30ಕ್ಕೆ ವಿಚಾರಣೆಗೆ ಹಾಜರಾದರು. ಖ್ಯಾತ ತಾರೆಯರ ವಿಚಾರಣೆ ಹಿನ್ನೆಲೆಯಲ್ಲಿ ಕಚೇರಿ ಸುತ್ತಮುತ್ತ ವ್ಯಾಪಕ ಬಂದೋಬಸ್ತ್ ಮಾಡಲಾಗಿತ್ತು.

ಈ ಮೂವರು ನಟಿಯರನ್ನು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಲಾಗಿದೆ. ನಿನ್ನೆ ಬಹುಭಾಷಾ ನಟಿ ರಾಕುಲ್ ಪ್ರೀತ್ ಮತ್ತು ದೀಪಿಕಾ ಪಡುಕೋಣೆ ಅವರ ವ್ಯವಸ್ಥಾಪಕಿ ಕರಿಷ್ಮಾ ಪ್ರಕಾಶ್ ಅವರು ಎನ್‍ಸಿಬಿ ಅಧಿಕಾರಗಳ ಮುಂದೆ ಬಾಯ್ಬಿಟ್ಟ ಕೆಲವು ಮಾಹಿತಿಗಳು ಮತ್ತು ವಾಟ್ಸಾಪ್ ಸಂಪರ್ಕ ಜಾಲದ ಹಿನ್ನೆಲೆಯಲ್ಲಿ ಈ ನಟಿಯರನ್ನು ಎನ್‍ಸಿಬಿ ಉನ್ನತಾಧಿಕಾರಿಗಳು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಿ ಕೆಲವು ಮಹತ್ವದ ಸಂಗತಿಗಳನ್ನು ಕೆಲ ಹಾಕಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ವಿಚಾರಣೆ ನಂತರ ಈ ನಟಿಯರ ಮೇಲಿನ ಆರೋಪಗಳು ಸಾಬೀತಾದರೆ ಅವರನ್ನು ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆಯೂ ಇದೆ ಎಂದು ಉನ್ನತ ಮೂಲಗಳು ಹೇಳಿವೆ.  ಬಹುಭಾಷಾ ನಟಿ ರಾಕುಲ್ ಪ್ರೀತ್ ಅವರನ್ನು ನಿನ್ನೆ ಎನ್‍ಸಿಬಿ ಅಧಿಕಾರಿಗಳು ನಾಲ್ಕು ತಾಸುಗಳಿಗೂ ಹೆಚ್ಚು ಕಾಲ ವಿಚಾರಣೆಗೆ ಒಳಪಡಿಸಿ ಕೆಲವು ಹೊಸ ಮಾಹಿತಿಗಳನ್ನು ಕಲೆ ಹಾಕಿದೆ.
ಮುಂಬೈನಲ್ಲಿರುವ ಎನ್‍ಸಿಬಿ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳು ನಿನ್ನೆ ಬೆಳಗ್ಗೆಯಿಂದ ರಾಕುಲ್ ಪ್ರೀತ್ ಮತ್ತು ಕರಿಷ್ಮಾ ಪ್ರಕಾಶ್ ಅವರನ್ನು ಸುದೀರ್ಘ ವಿಚಾರಣೆ ನಡೆಸಿದೆ.

ಬಾಲಿವುಡ್ ಸೂಪರ್‍ಸ್ಟಾರ್ ನಟಿಯರಾದ ದೀಪಿಕಾ ಪಡುಕೋಣೆ ಮತ್ತು ಶ್ರದ್ಧಾ ಕಪೂರ್ ಅವರನ್ನು ಇಂದು ಎನ್‍ಸಿಬಿ ತೀವ್ರ ವಿಚಾರಣೆಗೆ ಗುರಿಪಡಿಸಿರುವುದರಿಂದ ಬಿ-ಟೌನ್‍ನ ಇತರ ನಟ-ನಟಿಯರಿಗೂ ಆತಂಕ ಶುರುವಾಗಿದೆ.

ಸುಶಾಂತ್ ಸಾವು ಪ್ರಕರಣದಲ್ಲಿ ಡ್ರಗ್ಸ್ ಜಾಲದ ಸಂಪರ್ಕ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮತ್ತು ಮಾದಕವಸ್ತು ಬಳಕೆ ಸಂಬಂಧ ದೀಪಿಕಾ, ಶ್ರದ್ಧಾ, ರಾಕುಲ್, ಸಾರಾ ಅಲಿ ಖಾನ್, ಕರಿಷ್ಮಾ ಪ್ರಕಾಶ್ ಮತ್ತು ಫ್ಯಾಷನ್ ಡಿಸೈನರ್ ಸೈಮೊನೆ ಕಂಬಾಟಾ ಅವರಿಗೆ ಎನ್‍ಸಿಬಿ ಬುಧವಾರ ನೋಟಿಸ್ ಮತ್ತು ಸಮನ್ಸ್‍ಗಳನ್ನು ಜಾರಿಗೊಳಿಸಿತ್ತು.

ಈ ನಟಿ ಮಣಿಯರು ಹೆಸರನ್ನು ಸುಶಾಂತ್ ಮಾಜಿ ಗೆಳತಿ ಮತ್ತು ನಟಿ ರಿಯಾ ಚಕ್ರವರ್ತಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದು, ಇವರು ವಾಟ್ಸಾಪ್‍ಗಳಲ್ಲಿ ಡ್ರಗ್ಸ್ ಬಗ್ಗೆ ರಹಸ್ಯ ಸಂಕೇತದಲ್ಲಿ ಸಂದೇಶ ರವಾನಿಸಿದ ಪ್ರಕರಣದ ಸಂಬಂಧ ಎನ್‍ಸಿಬಿ ತನಿಖೆ ತೀವ್ರಗೊಳಿಸಿದೆ.

ಈ ಪ್ರಕರಣದಲ್ಲಿ ರಿಯಾ, ಆಕೆಯ ಸಹೋದರ ಸೌವಿಕ್ ಸೇರಿದಂತೆ ಈವರೆಗೆ 20ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದ್ದು, ವಿಚಾರಣೆ ಮತ್ತಷ್ಟು ತೀವ್ರಗೊಂಡಿದೆ. ಸುಶಾಂತ್‍ಗೆ ಡ್ರಗ್ಸ್ ಪೂರೈಸುತ್ತಿದ್ದ ಆರೋಪದ ಸಂಬಂಧ ಬಂಧಿತರಾದ ನಟಿ ರಿಯಾ ಚಕ್ರವರ್ತಿ ವಿಚಾರಣೆ ವೇಳೆ ಮಾದಕ ವಸ್ತು ನಿಯಂತ್ರಣ ಮಂಡಳಿ (ಎನ್‍ಸಿಬಿ) ಅಧಿಕಾರಿಗಳ ಮುಂದೆ ಮತ್ತಷ್ಟು ಸಂಗತಿಗಳನ್ನು ಈಗಾಗಲೇ ಬಹಿರಂಗಗೊಳಿಸಿದ್ದಾರೆ.

ಈ ಬಗ್ಗೆ ತನಿಖೆ ತೀವ್ರಗೊಳಿಸಿರುವ ತನಿಖಾ ಸಂಸ್ಥೆ ಪ್ರಕರಣದಲ್ಲಿ ಹೆಸರಿಸಲ್ಪಟ್ಟಿರುವವರ ಜಾಡು ಹಿಡಿದು ತನಿಖೆ ನಡೆಸುತ್ತಿದ್ದು, ಇನ್ನೂ ಕೆಲವರು ಬಂಧನಕ್ಕೆ ಒಳಗಾಗುವ ನಿರೀಕ್ಷೆ ಇದೆ. ಸುಶಾಂತ್ ಸಾವು ಪ್ರಕರಣದಲ್ಲಿ ಡಗ್ಸ್ ಜಾಲದ ನಂಟು ಕೇಳಿ ಬಂದ ನಂತರ ತನಿಖೆಯ ಆಳ ಅಗೆದಷ್ಟು ಹೊಸ ಸಂಗತಿಗಳು ಬೆಳಕಿಗೆ ಬರುತ್ತಿವೆ.

Facebook Comments