18 ದಿನ ಕಳೆದರೂ ಮುಗಿಯದ ‘ಮಹಾ’ಸರ್ಕಸ್, ಏನಾಗುತ್ತೆ ಕ್ಲೈಮ್ಯಾಕ್ಸ್..?

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ/ನವದೆಹಲಿ, ನ.12- ಮಹಾರಾಷ್ಟ್ರದ ಚುನಾವಣಾ ಫಲಿತಾಂಶ ಪ್ರಕಟವಾಗಿ 18 ದಿನಗಳು ಕಳೆದರೂ ಮುಂದುವರಿದಿರುವ ರಾಜಕೀಯ ದೊಂಬರಾಟ ಇಂದು ಕಟ್ಟಕಡೆಯ ಕ್ಲೈಮ್ಯಾಕ್ಸ್ ಹಂತ ತಲುಪಿದೆ.  ನಿನ್ನೆ ರಾತ್ರಿ ಕಡೆ ಕ್ಷಣದ ತಿರುವಿನಲ್ಲಿ ಸರ್ಕಾರ ರಚಿಸಲು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ(ಎನ್‍ಸಿಪಿ)ಕ್ಕೆ ರಾಜ್ಯಪಾಲ ಭಗತ್‍ಸಿಂಗ್ ಕೊಶಿಯಾರಿ ಆಹ್ವಾನ ನೀಡಿದ ನಂತರ ಬಿಜೆಪಿಯೇತರ ಸರ್ಕಾರ ರಚನೆಗಾಗಿ ಇಂದು ಬೆಳಗ್ಗೆಯಿಂದಲೇ ಬಿರುಸಿನ ಚಟುವಟಿಕೆಗಳು ನಡೆದಿವೆ.

ಇಂದು ಸಂಜೆಯೊಳಗೆ ಹೊಸ ಸರ್ಕಾರ ರಚನೆ ಬಗ್ಗೆ ಸ್ಪಷ್ಟ ಚಿತ್ರಣ ಗೋಚರಿಲಿದೆ. ಇದೇ ವೇಳೆ ಎನ್‍ಸಿಪಿ-ಕಾಂಗ್ರೆಸ್ ಮತ್ತು ಶಿವಸೇನೆ ನಡುವೆ ಸರ್ಕಾರ ರಚನೆಗೆ ಒಮ್ಮತ ಮೂಡದಿದ್ದಲ್ಲಿ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಅನಿವಾರ್ಯ ಎಂಬ ಮಾತುಗಳೂ ಸಹ ಕೇಳಿಬಂದಿವೆ.

ರಾಜಕೀಯ ಥ್ರಿಲ್ಲರ್‍ಗೆ ಕಾರಣವಾಗಿರುವ ಮಹಾರಾಷ್ಟ್ರದಲ್ಲಿ ಎನ್‍ಸಿಪಿ ಮತ್ತು ಕಾಂಗ್ರೆಸ್, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬೆಂಬಲ ಪಡೆದು ಸರ್ಕಾರ ರಚಿಸುವ ಸಾಧ್ಯತೆಗಳು ದಟ್ಟವಾಗಿದೆ. ಆದಾಗ್ಯೂ ಎನ್‍ಸಿಪಿ ಭವಿಷ್ಯವು ಕಾಂಗ್ರೆಸ್ ಕೈಗೊಳ್ಳಲಿರುವ ನಿರ್ಧಾರದ ಮೇಲೆ ಅವಲಂಬಿಸಿದೆ. ಈಗ ಸರ್ಕಾರ ರಚನೆಯ ಸಾಧ್ಯತೆಯ ಚೆಂಡು ಕಾಂಗ್ರೆಸ್ ಅಂಗಳದಲ್ಲಿದೆ.

ರಾಜ್ಯಪಾಲರನ್ನು ಭೇಟಿ ಮಾಡಲು ರಾಜಭವನಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್, ರಾಜ್ಯದ ಉಭಯ ಪಕ್ಷಗಳ ಉನ್ನತ ನಾಯಕರ ಸಭೆಯಲ್ಲಿ ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಬಳಿಕ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ಸಮಾಲೋಚಿಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಕಾಂಗ್ರೆಸ್‍ನ ಹಿರಿಯ ಧುರೀಣರಾದ ಡಾ.ಎಂ.ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಸಿ.ವೇಣುಗೋಪಾಲ್ ಅವರು ಇಂದು ಬೆಳಗ್ಗೆ ಮುಂಬೈಗೆ ಆಗಮಿಸುವ ಕಾರ್ಯಕ್ರಮವಿತ್ತು. ಆದರೆ, ರಾಜ್ಯದ ಎನ್‍ಸಿಪಿ ಮತ್ತು ಕೈ ನಾಯಕರ ಜತೆ ಚರ್ಚಿಸಿ ತೀರ್ಮಾನ ಕೈಗೊಂಡ ನಂತರ ಆಗಮಿಸುವಂತೆ ಶರದ್‍ಪವರ್ ಮನವಿ ಮಾಡಿದ್ದರಿಂದ ಖರ್ಗೆ ಮತ್ತು ವೇಣುಗೋಪಾಲ್ ಅವರ ಮುಂಬೈ ಭೇಟಿ ಮುಂದೂಡಲ್ಪಟ್ಟಿದೆ. ಶರದ್‍ಪವಾರ್ ರಾಜ್ಯಪಾಲರನ್ನು ಭೇಟಿ ಮಾಡಿ ಹಕ್ಕು ಮಂಡನೆಗೆ ಕೆಲಕಾಲ ಸಮಯಾವಕಾಶ ನೀಡುವಂತೆ ಕೋರಲಿದ್ದಾರೆ.

ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಎನ್‍ಸಿಪಿ ನಾಯಕ ಅಜಿತ್‍ಪವಾರ್ ನಾವು (ಎನ್‍ಸಿಪಿ-ಕಾಂಗ್ರೆಸ್) ಸಾಮೂಹಿಕವಾಗಿ ನಿರ್ಧಾರ ಕೈಗೊಳ್ಳುತ್ತೇವೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಎನ್‍ಸಿಪಿ ಏಕಾಂಗಿಯಾಗಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದರು. ಮಹಾರಾಷ್ಟ್ರದಲ್ಲಿ ಎನ್‍ಸಿಪಿ-ಕಾಂಗ್ರೆಸ್ ಮೈತ್ರಿಕೂಟವು ಶಿವಸೇನೆ ಬೆಂಬಲದೊಂದಿಗೆ ಸರ್ಕಾರ ರಚಿಸುವ ಸಾಧ್ಯತೆ ಇದೆ ಎಂದು ಅಜಿತ್‍ಪವಾರ್ ತಿಳಿಸಿದರು.

ಮಾತುಕತೆ ಎಲ್ಲವೂ ನಿಕ್ಕಿಯಾದಲ್ಲಿ ಶಿವಸೇನೆಗೆ ಮುಖ್ಯಮಂತ್ರಿ ಹುದ್ದೆ ಮತ್ತು ಎನ್‍ಸಿಪಿಗೆ ಉಪಮುಖ್ಯಮಂತ್ರಿ ಹುದ್ದೆ ಲಭಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಈ ಮಧ್ಯೆ ಕಾಂಗ್ರೆಸ್ ನಾಯಕ ಕಾಡ್ಗ ಖಾಂಡ್ಯ ಫಡ್ನವೀಸ್ ತಿಳಿಸಿದ್ದಾರೆ. ಈ ಮಧ್ಯೆ ಎದೆನೋವಿನಿಂದ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗುವುದಕ್ಕೆ ಮುನ್ನ ಶಿವಸೇನೆಯ ನಾಯಕ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಇಂದು ಸಂಜೆಯೊಳಗೆ ಶುಭ ಸಂದೇಶ ಲಭಿಸಲಿದೆ. ಸರ್ಕಾರ ರಚನೆ ಆಹ್ವಾನದಲ್ಲಿ ನಮಗೆ ಹಿನ್ನಡೆಯಾಗಿದ್ದರೂ ನಾವು ಅಂದುಕೊಂಡಂತೆ ಯಶಸ್ಸು ಸಾಧಿಸಿದ್ದೇವೆ ಎಂದರು.

ಅವರು ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ತಂದೆ, ಖ್ಯಾತ ಕವಿ ಹರಿವಂಶರಾಯ್ ಬಚ್ಚನ್ ಅವರ ಕವಿತೆಯೊಂದನ್ನು ಉಲ್ಲೇಖಿಸಿದ್ದಾರೆ.  ದೋಣಿಯು ದೈತ್ಯಾಕಾರದ ಅಲೆಗೆ ಹೆದರಿದ ಕಾರಣ ಮುಂದೆ ಹೋಗಲು ಆಗಲಿಲ್ಲ. ಆದರೆ, ಧೈರ್ಯವಂತರು ತಮ್ಮ ಛಲದಿಂದ ಯಶಸ್ವಿಯಾಗಿ ಅಲೆಯನ್ನು ದಾಟಿದರು ಎಂದು ಅವರು ಉಲ್ಲೇಖಿಸಿದ್ದಾರೆ.
ಹಮ್ ಹೋಂಗೆ ಕಾಮ್‍ಯಾಬ್ (ನಾವು ಖಂಡಿತಾ ಯಶಸ್ವಿಯಾಗುತ್ತೇವೆ) ಎಂದು ಅವರು ತಿಳಿಸಿದರು.

Facebook Comments