ನೇಪಾಳ ಪ್ರಧಾನಿ ಓಲಿ ಪದಚ್ಯುತಿ ಮತ್ತೆ ಮುಂದೂಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಕಠ್ಮಂಡು, ಜು.8- ಭಾರತ ವಿರೋಧಿ ನೇಪಾಳ ಪ್ರಧಾನಿ ಪದಚ್ಯುತಿ ಮತ್ತೆ ಮುಂದೂಡಲ್ಪಟ್ಟಿದೆ.  ತಮ್ಮ ಭಾರತ ವಿರೋಧಿ ಹೇಳಿಕೆಗಳಿಂದ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದ ನೇಪಾಳ ಪ್ರಧಾನಿ ಕೆ.ಪಿ.ಶರ್ಮ ಓಲಿ ಅವರ ಭವಿಷ್ಯ ಕುರಿತಂತೆ ಇಂದು ಕಮ್ಯುನಿಸ್ಟ್ ಪಾರ್ಟಿಯ ಸ್ಥಾಯಿ ಸಮಿತಿ ಸಭೆ ನಡೆಯಬೇಕಿತ್ತು.

ಈ ಹಿಂದೆಯೂ ಕಾರಣಾಂತರಗಳಿಂದ ಮುಂದೂಡಲ್ಪಟ್ಟಿದ್ದ ಸಭೆಯನ್ನು ಇಂದು ಏಕಾಏಕಿ ರದ್ದುಗೊಳಿಸಿ ಮತ್ತೆ ಮುಂದಿನ ಶುಕ್ರವಾರಕ್ಕೆ ನಿಗದಿಗೊಳಿಸಲಾಗಿದೆ. ಈ ಸಭೆ ಮುಂದೂಡಿಕೆಗೆ ಯಾವುದೇ ನಿಖರ ಕಾರಣ ನೀಡದೆ ಸಭೆಯನ್ನು ಶುಕ್ರವಾರದವರೆಗೂ ಮುಂದೂಡಲಾಗಿದೆ ಎಂದು ನೇಪಾಳ ಪ್ರಧಾನಮಂತ್ರಿಗಳ ಪತ್ರಿಕಾ ಸಲಹೆಗಾರ ಸೂರ್ಯತಾಪ ಹೇಳಿಕೆ ನೀಡಿದ್ದಾರೆ.

ಎನ್‍ಸಿಪಿ ನಾಯಕರು, ನೇಪಾಳದ ಪ್ರಚಂಡ ಎಂದೇ ಪ್ರಚಲಿತದಲ್ಲಿರುವ ಮಾಜಿ ಪ್ರಧಾನಿ ಪುಷ್ಪಕಮಾಲ್ ದಹಾಲ್ ಮತ್ತಿತರರು ಭಾರತ ವಿರೋಧಿ ಧೋರಣೆ ತಳೆದಿರುವ ಪ್ರಧಾನಮಂತ್ರಿ ಓಲಿ ಅವರನ್ನು ಪದಚ್ಯುತಗೊಳಿಸುವಂತೆ ಪಟ್ಟು ಹಿಡಿದಿದ್ದರು.

ಎನ್‍ಸಿಪಿ ಪಕ್ಷದಲ್ಲೇ ಓಲಿ ಬಣ ಹಾಗೂ ಪ್ರಚಂಡ ಬಣ ಎಂಬ ಎರಡು ಗುಂಪುಗಳಿರುವುದರಿಂದ ಈ ಪಕ್ಷದ ನಾಯಕರ ನಡುವಿನ ತಿಕ್ಕಾಟದ ಹಿನ್ನೆಲೆಯಲ್ಲಿ ಕಮ್ಯುನಿಸ್ಟ್ ಪಕ್ಷದ ಸ್ಥಾಯಿ ಸಮಿತಿ ಸಭೆಯನ್ನು ಮುಂದೂಡಲಾಗಿದೆ.

Facebook Comments