ವಿಶಾಖಪಟ್ಟಣ ದುರಂತದಿಂದ ಎಚ್ಛೆತ್ತುಕೊಂಡ ಎನ್‍ಡಿಎಂಎ : ಕೈಗಾರಿಕೆಗಳ ಪುನಾರಂಭಕ್ಕೆ ಹೊಸ ಮಾರ್ಗಸೂಚಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 10-ಸ್ಟೆರೀನ್ ವಿಷಾನಿಲ ಸೋರಿ 12 ಮಂದಿ ಬಲಿಯಾಗಿ, 1,000ಕ್ಕೂ ಹೆಚ್ಚು ಜನರು ಅಸ್ವಸ್ಥರಾದ ದುರಂತದಿಂದ ಎಚ್ಚೆತ್ತುಕೊಂಡಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಿ(ಎನ್‍ಡಿಎಂಎ) ಇಂಥ ದುರ್ಘಟನೆಗಳನ್ನು ತಪ್ಪಿಸುವ ಉದ್ದೇಶದಿಂದ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ.

ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಅನೇಕ ಕಾರ್ಖಾನೆಗಳು ಮತ್ತು ಕೈಗಾರಿಕೆಗಳು ಮರು ಆರಂಭವಾಗುತ್ತಿದ್ದು, ಇಂಥ ಘಟಕಗಳ ಸುರಕ್ಷತೆ ಮತ್ತು ಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಈ ಮಾರ್ಗಸೂಚಿಯಲ್ಲಿವೆ.

ಈ ಸಂಬಂಧ ಎನ್‍ಡಿಎಂಎ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುತ್ತೋಲೆಯೊಂದನ್ನು ಹೊರಡಿಸಿದೆ. ಲಾಕ್‍ಡೌನ್‍ನಿಂದ ಹಲವು ವಾರಗಳ ಕಾಲ ಕೈಗಾರಿಕೆಗಳು ಮುಚ್ಚಲ್ಪಟ್ಟಿದ್ದವು. ಈಗ ಘಟಕಗಳು ಪುನಾರಂಭ ಮಾಡುತ್ತಿರುವುದರಿಂದ ಎಚ್ಚರಿಕೆ ವಹಿಸಬೇಕು.

ಈಗಿರುವ ಕಾರ್ಯನಿರ್ವಹಣಾ ವ್ಯವಸ್ಥೆಯನ್ನು ಅದು ಕಾರ್ಯಾರಂಭ ಮಾಡುವುದಕ್ಕೂ ಮುನ್ನ ಕೂಲಂಕಷವಾಗಿ ಪರಿಶೀಲಿಸಬೇಕೆಂದು ಸೂಚಿಸಿದೆ. ಕಾರ್ಖಾನೆಗಳ ತಯಾರಿಕಾ ಘಟಕಗಳು, ಪೈಪ್‍ಲೈನ್ ಮತ್ತು ಕವಾಟಗಳಲ್ಲಿ ರಾಸಾಯನಿಕಗಳು ಉಳಿದಿರುವ ಸಾಧ್ಯತೆ ಇರುತ್ತದೆ. ಇಂಥ ರಾಸಾಯನಿಕಗಳು ಅಪಾಯಕಾರಿ ಪರಿಣಮಿಸುವ ಸಂಭವ ಇರುತ್ತದೆ.

ಅದೇ ರೀತಿ ಸಂಗ್ರಹಾಗಾರಗಳು ಮತ್ತು ಟ್ಯಾಂಕ್‍ಗಳಲ್ಲಿ ಹಾನಿಕಾರಕ ರಾಸಾಯನಿಕ ಮತ್ತು ದಹನಶೀಲ ವಸ್ತುಗಳು ಹೊರಹೊಮ್ಮುವ ಸಾಧ್ಯತೆ ಇವೆ. ಕೈಗಾರಿಕೆಗಳು/ಕಾರ್ಖಾನೆಗಳು ಮತ್ತು ಘಟಕಗಳನ್ನು ಮತ್ತೆ ಆರಂಭಿಸುವುದಕ್ಕೆ ಮುನ್ನ ಸೂಕ್ತ ಮುನ್ನೆಚ್ಚರಿಕೆಗಳನ್ನು ಕೈಗೊಂಡು ಎಲ್ಲವನ್ನೂ ಸೂಕ್ಷ್ಮವಾಗಿ ಪರಿಶೀಲಿಸಿದ ನಂತರವಷ್ಟೇ ಮುಂದಿನ ಕಾರ್ಯ ಕೈಗೊಳ್ಳಬೇಕೆಂದು ಪ್ರಾಧಿಕಾರ ನಿರ್ದೇಶನ ನೀಡಿದೆ.

Facebook Comments

Sri Raghav

Admin