ಹಲವು ರಾಜ್ಯಗಳಲ್ಲಿ ಭಾರೀ ಮಳೆ-ಪ್ರವಾಹ : 90 NDRF ತಂಡಗಳ ನಿಯೋಜನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜು.4-ದೇಶಾದ್ಯಂತ ಮುಂಗಾರು ಋತು ಚುರುಕಾಗಿದ್ದು ಹಲವು ರಾಜ್ಯಗಳಲ್ಲಿ ಭಾರೀ ಮಳೆ ಮತ್ತು ಪ್ರವಾಹ ಪರಿಸ್ಥಿತಿ ತಲೆದೋರಿದೆ. ಪ್ರಕೃತಿ ವಿಕೋಪವನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ದೇಶಾದ್ಯಂತ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳಿಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ(ಎನ್‍ಡಿಆರ್‍ಎಫ್)ದ 90 ತ0ಡಗಳನ್ನು ನಿಯೋಜಿಸಿದೆ.

ಈ ತಂಡಗಳು ಭಾರೀ ಮಳೆ ಮತ್ತು ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸುವ ಜೊತೆಗೆ ಕೊರೊನಾ ವೈರಸ್‍ನಿಂದ ಸೃಷ್ಟಿಯಾಗಿರುವ ಆತಂಕಕಾರಿ ಪರಿಸ್ಥಿತಿಯನ್ನು ನಿರ್ವಹಣೆ ಮಾಡಲು ಸಹ ನೆರವಾಗಲಿದೆ.

ನಿನ್ನೆ ಸಂಜೆ ಕೇಂದ್ರ ಗೃಹ ಸಚಿವ ಅಮಿತ್ ಷಾ ದೆಹಲಿಯಲ್ಲಿ ಎನ್‍ಡಿಆರ್‍ಎಫ್ ಮತ್ತು ಇತರ ರಕ್ಷಣಾ ಪಡೆಗಳ ಮಹತ್ವದ ಸಭೆ ನಡೆಸಿ ಪ್ರಕೃತಿ ವಿಕೋಪ ನಿಭಾಯಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿ ಕೆಲವು ಸೂಚನೆಗಳನ್ನು ನೀಡಿದ್ದಾರೆ.

ದೇಶದ ವಿವಿಧ ರಾಜ್ಯಗಳಲ್ಲಿ ಮಳೆ ಮತ್ತು ನೆರೆ ಹಾವಳಿ ನಿಭಾಯಿಸುವ ನಿಟ್ಟಿನಲ್ಲಿ ಎನ್‍ಡಿಆರ್‍ಎಫ್‍ನ 9 ತಂಡಗಳನ್ನು ನಿಯೋಜಿಸಲು ಕೇಂದ್ರ ಸರ್ಕಾರ ಸೂಚನೆ ನೀಡುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಪಡೆಗಳು ಇಂದಿನಿಂದಲೇ ಕಾರ್ಯೋನ್ಮುಖವಾಗಿದೆ ಎಂದು ರಾಷ್ಟ್ರೀಯ ವಿಪ್ಪತ್ತು ನಿರ್ವಹಣಾ ದಳದ ಮಹಾನಿರ್ದೇಶಕ(ಡಿಜಿ) ಎಸ್.ಎನ್.ಪ್ರಧಾನ್ ತಿಳಿಸಿದ್ದಾರೆ.

ಒಂದು ಎನ್‍ಡಿಆರ್‍ಎಫ್ ತಂಡದಲ್ಲಿ 45 ಸಿಬ್ಬಂದಿ ಅತ್ಯಾಧುನಿಕ ಸಂಪರ್ಕ ಸಾಧನಗಳು ಮತ್ತು ತ್ವರಿತವಾಗಿ ಸಿದ್ದವಾಗುವ ದೋಣಿಗಳನ್ನು ಹೊಂದಿರುತ್ತದೆ ಎಂದು ಪ್ರಧಾನ್ ಮಾಹಿತಿ ನೀಡಿದ್ದಾರೆ. ಮುಂಬೈನಲ್ಲಿ ನಿನ್ನೆಯಿಂದ ಭಾರೀ ಮಳೆ ಸುರಿಯುತ್ತಿದ್ದು, ಎದುರಾಗಬಹುದಾದ ಯಾವುದೇ ಪರಿಸ್ಥಿತಿ ನಿಭಾಯಿಸಲು ಈಗಾಗಲೇ ಎನ್‍ಡಿಆರ್‍ಎಫ್ ತಂಡಗಳನ್ನು ನಿಯೋಜಿಸಲಾಗಿದೆ.

ಇಂದು ಮತ್ತು ನಾಳೆ ಮುಂಬೈ ಸೇರಿದಂತೆ ಮಹಾರಾಷ್ಟ್ರದ ವಿವಿಧೆಡೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ರಾಜ್ಯಸರ್ಕಾರ ರೆಡ್ ಅಲರ್ಟ್ ಘೋಷಿಸಿದ್ದು, ಕೇಂದ್ರದ ಎನ್‍ಡಿಆರ್‍ಎಫ್ ಸಿಬ್ಬಂದಿಯೊಂದಿಗೆ ರಾಜ್ಯದ ಎಸ್‍ಡಿಆರ್‍ಎಫ್ ಸಿಬ್ಬಂದಿ ಪರಿಸ್ಥಿತಿ ನಿಭಾಯಿಸಲಿದೆ.

ಎನ್‍ಡಿಆರ್‍ಎಫ್ ಸಿಬ್ಬಂದಿ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸುವ ಜೊತೆಗೆ ಕೊರೊನಾ ವೈರಾಣು ಸ್ಫೋಟದಿಂದಾಗಿ ತಲೆದೋರಿರುವ ಪರಿಸ್ಥಿತಿಯನ್ನು ಸಹ ನಿಭಾಯಿಸಲು ನೆರವಾಗಲಿದೆ.

Facebook Comments