ನೀಟ್-ಜೆಇಇ ಪರೀಕ್ಷೆ ಮುಂದೂಡಿಕೆಗೆ ಸಲ್ಲಿಸಿದ್ದ ಅರ್ಜಿ ವಜಾ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಆ.17- ಪ್ರಸಕ್ತ ಸಾಲಿನ ವೃತ್ತಿಪರ ಕೋರ್ಸ್‍ಗಳಿಗೆ ನಡೆಯಲಿರುವ ನೀಟ್(ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ) ಮತ್ತು ಜೆಇಇ(ಜಂಟಿ ಪ್ರವೇಶ ಪರೀಕ್ಷೆ) ಪರೀಕ್ಷೆಗಳನ್ನು ಮುಂದೂಡಬೇಕೆಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ.

ಇದರಿಂದ ನೀಟ್ ಮತ್ತು ಜೆಇಇ ಪರೀಕ್ಷೆಗಳಿಗೆ ಎದುರಾಗಿದ್ದ ಬಹುದೊಡ್ಡ ವಿಘ್ನ ನಿವಾರಣೆಯಾಗಿದ್ದು, ಈಗಾಗಲೇ ನಿಗದಿಯಾಗಿರುವ ವೇಳಾಪಟ್ಟಿಯಂತೆಯೇ ಪರೀಕ್ಷೆಗಳು ಜರುಗಲಿವೆ.

ಕೋವಿಡ್-19 ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಕಾರಣ ತಾತ್ಕಾಲಿಕವಾಗಿ ನೀಟ್ ಮತ್ತು ಜೆಇಇ ಪರೀಕ್ಷೆಯನ್ನು ಮುಂದೂಡಬೇಕೆಂದು ಸುಪ್ರೀಂಕೋರ್ಟ್‍ನಲ್ಲಿ ಅಲೋಕ್ ಶ್ರೀವಾಸ್ತವ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಇಂದು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‍ನ ಅರುಣ್ ಮಿಶ್ರ, ಬಿ.ಆರ್.ಗವಾಯ್ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಕೋವಿಡ್ ಜೊತೆಗೆ ಜೀವನ ನಡೆಯಲೇಬೇಕು ಎಂದಷ್ಟೇ ಒಂದು ಸಾಲಿನ ತೀರ್ಪು ನೀಡಿ ಅರ್ಜಿ ವಜಾಗೊಳಿಸಿತು.

ನಾವು ಅರ್ಜಿಯಲ್ಲಿರುವ ಅಂಶಗಳನ್ನು ಪರಿಗಣಿಸಿದ್ದೇವೆ. ಆದರೆ ಪರೀಕ್ಷೆ ಮುಂದೂಡಲು ಇದು ಸಕಾರಣವಾಗುವುದಿಲ್ಲ. ಹೀಗಾಗಿ ನಿಮ್ಮ ಅರ್ಜಿಯನ್ನು ವಜಾಗೊಳಿಸುತ್ತೇವೆ ಎಂದು ತೀರ್ಪು ನೀಡಿದರು.

ನೀವು ಪರೀಕ್ಷೆಗಳನ್ನು ಮುಂದೂಡಿ ಎಂದು ಅರ್ಜಿಯಲ್ಲಿ ಬೇಡಿಕೆ ಇಟ್ಟಿದ್ದೀರಿ. ಇದರಿಂದ ದೇಶದ ಆರ್ಥಿಕತೆಗೆ ಇನ್ನಷ್ಟು ನಷ್ಟವುಂಟು ಮಾಡಲಿದೆ. ಕೋವಿಡ್ ಮುಂದುವರೆಯುತ್ತಲೇ ಇದೆ. ಹೀಗಾಗಿ ಅರ್ಜಿಯನ್ನು ಪರಿಗಣಿಸುವುದಿಲ್ಲ ಎಂದು ತ್ರಿಸದಸ್ಯ ಪೀಠ ಹೇಳಿದೆ.

ಇದಕ್ಕೂ ಮುನ್ನ ಜೆಇಇ ಮತ್ತು ನೀಟ್ ಪರೀಕ್ಷೆಗಳನ್ನು ಮುಂದೂಡಬೇಕೆಂದು 11 ವಿದ್ಯಾರ್ಥಿಗಳು ಸುಪ್ರೀಂಕೋರ್ಟ್‍ನಲ್ಲಿ ಅರ್ಜಿಯೊಂದನ್ನು ಸಲ್ಲಿಸಿದ್ದರು. ದೇಶದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ಇದರಿಂದ ವಿದ್ಯಾರ್ಥಿಗಳು ಭಯಭೀತರಾಗಿ ಪರೀಕ್ಷೆ ಎದುರಿಸಬೇಕಾಗುತ್ತದೆ. ಹೀಗಾಗಿ ತಾತ್ಕಾಲಿಕವಾಗಿ ಪರೀಕ್ಷೆಯನ್ನು ಮುಂದೂಡುವಂತೆ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.

ಆದರೆ ತ್ರಿಸದಸ್ಯ ಪೀಠ ಈ ಅರ್ಜಿಯನ್ನು ಸಹ ಪರಿಗಣಿಸಿಲ್ಲ. ಈಗಾಗಲೇ ವಿದ್ಯಾರ್ಥಿಗಳೂ ಎರಡೂ ಪರೀಕ್ಷೆಗೆ ಸಿದ್ದತೆ ಮಾಡಿಕೊಂಡಿದ್ದಾರೆ. ಏಕಾಏಕಿ ಪರೀಕ್ಷೆ ಮುಂದೂಡುವುದರಿಂದ ಮತ್ತೆ ತೊಂದರೆಗೆ ಸಿಲುಕುತ್ತಾರೆ.

ಒಂದೆಡೆ ಕೊರೊನಾ ಸಂಕಷ್ಟ ಹಾಗೂ ಪದೇ ಪದೇ ಪರೀಕ್ಷೆಗಳನ್ನು ಮುಂದೂಡುವುದರಿಂದ ವಿದ್ಯಾರ್ಥಿಗಳು ಬೌದ್ಧಿಕ ಬೆಳವಣಿಗೆಗೆ ಹಿನ್ನಡೆಯಾಗುತ್ತದೆ. ಹೀಗಾಗಿ ನ್ಯಾಯಾಲಯ ಯಾವ ಅರ್ಜಿಗಳನ್ನು ಪುರಸ್ಕಾರ ಮಾಡುವುದಿಲ್ಲ ಎಂದು ವಜಾಗೊಳಿಸಿತು.

ಈಗಾಗಲೇ ನಿಗದಿಯಾಗಿರುವಂತೆ ಸೆಪ್ಟೆಂಬರ್ 1ರಿಂದ 6ರವರೆಗೆ ಜೆಇಇ ಮತ್ತು ಸೆ.13ರಂದು ನೀಟ್ ಪರೀಕ್ಷೆ ನಡೆಯಲಿದೆ. ವೈದ್ಯಕೀಯ, ದಂತ ವೈದ್ಯಕೀಯ, ಇಂಜಿನಿಯರಿಂಗ್, ಹೋಮಿಯೋಪತಿ ಸೇರಿದಂತೆ ಮತ್ತಿತರ ವೃತ್ತಿಪರ ಕೋರ್ಸ್‍ಗಳಿಗೆ ದೇಶಾದ್ಯಂತ ನೀಟ್ ಮತ್ತು ಜೆಇಇ ಪರೀಕ್ಷೆ ನಡೆಸಲಾಗುತ್ತಿದೆ.

Facebook Comments

Sri Raghav

Admin