ಕುತೂಹಲ ಕೆರಳಿಸಿದ ನೆಲಮಂಗಲ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ : ಎಂ.ವಿ ನಾಗರಾಜ್ Vs ಬಿಜೆಪಿ

ಈ ಸುದ್ದಿಯನ್ನು ಶೇರ್ ಮಾಡಿ

ನೆಲಮಂಗಲ, ನ.9- ನಗರಸಭೆ ಅಧ್ಯಕ್ಷ , ಉಪಾಧ್ಯಕ್ಷ ಚುನಾವಣೆಗೆ ಸಂಬಂಸಿದಂತೆ ತಾಲ್ಲೂಕು ಬಿಜೆಪಿ ಘಟಕ ಹಾಗೂ ಮಾಜಿ ಬಿಜೆಪಿ ಶಾಸಕ ಎಂ.ವಿ.ನಾಗರಾಜ್ ನಡುವೆ ಜಟಾಪಟಿ ಆರಂಭವಾಗಿದ್ದು, ಯಾವುದೇ ಸಂದರ್ಭದಲ್ಲಿ ಭಿನ್ನಮತ ಸೋಟಗೊಳ್ಳುವ ಸಾಧ್ಯತೆಗಳಿವೆ.

ಈ ಹಿಂದೆ ಬಿಜೆಪಿಯಿಂದ ಶಾಸಕರಾಗಿದ್ದ ಎಂ.ವಿ.ನಾಗರಾಜ್ ಅವರು ಜೆಡಿಎಸ್ ಅಭ್ಯರ್ಥಿಯನ್ನು ನೆಲಮಂಗಲ ನಗರಸಭೆ ಅಧ್ಯಕ್ಷರನ್ನಾಗಿಸಲು ಮುಂದಾಗಿದ್ದಾರೆ. ಅವರ ಈ ಹುನ್ನಾರಕ್ಕೆ ಮನ್ನಣೆ ನೀಡಬಾರದು ಎಂದು ಸರ್ಕಾರಕ್ಕೆ ಪತ್ರ ಬರೆಯಲು ಬಿಜೆಪಿ ಘಟಕ ತೀರ್ಮಾನಿಸಿದೆ.

ಒಂದು ಪುರಸಭೆ ಹಾಗೂ ನಾಲ್ಕು ಗ್ರಾಮ ಪಂಚಾಯ್ತಿಗಳನ್ನು ವಿಲೀನ ಮಾಡಿ ರಚಿಸಲಾಗಿರುವ ನೆಲಮಂಗಲ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನ.12ರಂದು ಚುನಾವಣೆ ನಡೆಯಲಿದೆ.

ನೆಲಮಂಗಲ ನಗರಸಭೆಗೆ ಚುನಾವಣೆ ನಡೆದಿಲ್ಲ. ಆದರೆ ಹಿಂದಿನ ಪುರಸಭೆಯ 23 ಸದಸ್ಯರನ್ನೇ ಕರ್ನಾಟಕ ಪೌರ ನಿಗಮ ಅ ನಿಯಮ 361/ಬಿ ಪ್ರಕಾರ ನಗರಸಭಾ ಸದಸ್ಯರನ್ನಾಗಿ ಪರಿಗಣಿಸಿದ್ದು ಅವರಲ್ಲೇ ಅಧ್ಯಕ್ಷರು-ಉಪಾಧ್ಯಕ್ಷರನ್ನಾಗಿ ಆರಿಸಲು ನ.12ರಂದು ಚುನಾವಣೆ ನಡೆಸಲು ತೀರ್ಮಾನಿಸಲಾಗಿದೆ.

ಆದರೆ ಕೇವಲ ಪುರಸಭಾ ಸದಸ್ಯರನ್ನೇ ನಗರಸಭಾ ಸದಸ್ಯರನ್ನಾಗಿಸಿದರೆ ಉಳಿದ ನಾಲ್ಕು ಗ್ರಾಮ ಪಂಚಾಯ್ತಿಗಳ ಸದಸ್ಯರ ಸ್ಥಿತಿ ಏನು ಎಂಬುದನ್ನು ಸ್ಪಷ್ಟಪಡಿಸುವಂತೆ ಗ್ರಾಪಂ ಸದಸ್ಯೆ ಕಲ್ಪನಾ ಮಂಜುನಾಥ್ ಅವರು ನ್ಯಾಯಾಲಯದ ಮೆಟ್ಟಿಲು ಏರಿದ್ದರು.

ಕಲ್ಪನಾ ಮಂಜುನಾಥ್ ಅವರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಸರ್ಕಾರಕ್ಕೆ ಚಾಟಿ ಬೀಸಿತ್ತು. ಪುರಸಭಾ ಸದಸ್ಯರನ್ನು ನಗರಸಭಾ ಸದಸ್ಯರನ್ನಾಗಿ ಪರಿವರ್ತಿಸಿದರೆ ಉಳಿದ ನಾಲ್ಕು ಗ್ರಾಮ ಪಂಚಾಯ್ತಿಗಳನ್ನು ನೋಡಿಕೊಳ್ಳುವವರು ಯಾರು ಎಂದು ಖಾರವಾಗಿ ಪ್ರಶ್ನಿಸಿತ್ತು.

ನ್ಯಾಯಾಲಯದಲ್ಲಿ 4 ಗ್ರಾಮ ಪಂಚಾಯ್ತಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿತ್ತು. ಗ್ರಾಮ ಪಂಚಾಯ್ತಿ ಕುರಿತಂತೆ ನೀವು ಯಾವ ನಿರ್ಧಾರ ಕೈಗೊಂಡಿದ್ದೀರಿ ಎಂಬುದನ್ನು ನ.10ರೊಳಗೆ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿತ್ತು.

ಹೀಗಾಗಿ ಗ್ರಾಮ ಪಂಚಾಯ್ತಿಗೆ ಒಬ್ಬ ನಾಮ ನಿರ್ದೇಶಿತ ಸದಸ್ಯರನ್ನು ನಿಯೋಜಿಸಿ ನ.12ರಂದು ನೆಲಮಂಗಲ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಸರ್ಕಾರ ತೀರ್ಮಾನಿಸಿದೆ.

ಆದರೆ ನಾಲ್ಕು ಗ್ರಾಮ ಪಂಚಾಯ್ತಿಗಳು ಸೇರಿ ಒಬ್ಬ ನಾಮ ನಿರ್ದೇಶಿತ ಸದಸ್ಯರನ್ನು ನೇಮಕ ಮಾಡಬೇಕು ಅಥವಾ ಪ್ರತಿ ಗ್ರಾಮ ಪಂಚಾಯ್ತಿಗೆ ಒಬ್ಬೊಬ್ಬ ನಾಮ ನಿರ್ದೇಶಿತ ಸದಸ್ಯರನ್ನು ನೇಮಕ ಮಾಡಬೇಕು ಎಂಬ ಬಗ್ಗೆ ಸ್ಪಷ್ಟ ಉಲ್ಲೇಖವಿಲ್ಲ.

ನಾಳೆ ನ್ಯಾಯಾಲಯದಲ್ಲಿ ಕಲ್ಪನಾ ಮಂಜುನಾಥ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಯಲಿದ್ದು, ನಾಳೆಯೊಳಗೆ ಸರ್ಕಾರ ಗ್ರಾಮ ಪಂಚಾಯ್ತಿಗೆ ನಾಮ ನಿರ್ದೇಶಿತ ಸದಸ್ಯರನ್ನು ನೇಮಕ ಮಾಡಿ ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ.

ಜೆಡಿಎಸ್, ಕಾಂಗ್ರೆಸ್ ಸದಸ್ಯರನ್ನು ಒಳಗೊಂಡಿರುವ 23 ಪುರಸಭಾ ಸದಸ್ಯರಲ್ಲೇ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಿ ಅಧ್ಯಕ್ಷ ಸ್ಥಾನವನ್ನು ಜೆಡಿಎಸ್‍ಗೆ ಬಿಟ್ಟು ಕೊಡಲು ಮಾಜಿ ಶಾಸಕ ಎಂ.ವಿ.ನಾಗರಾಜ್ ತಂತ್ರ ರೂಪಿಸಿದ್ದಾರೆ ಎನ್ನುವುದು ತಾಲ್ಲೂಕು ಬಿಜೆಪಿ ಘಟಕದ ಆರೋಪವಾಗಿದೆ.

ಹೀಗಾಗಿ ಯಾವುದೇ ಕಾರಣಕ್ಕೂ ಅಕಾರವನ್ನು ಜೆಡಿಎಸ್‍ಗೆ ಬಿಟ್ಟು ಕೊಡಬಾರದು. ಗ್ರಾಮ ಪಂಚಾಯ್ತಿಗಳಿಗೆ ನಾಮ ನಿರ್ದೇಶಿತ ಸದಸ್ಯರನ್ನು ಆಯ್ಕೆ ಮಾಡಬಾರದು. 31 ವಾರ್ಡ್‍ಗಳಿಗೆ ಚುನಾವಣೆ ನಡೆಸಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಭರ್ತಿ ಮಾಡಬೇಕು ಎಂದು ತಾಲ್ಲೂಕು ಬಿಜೆಪಿ ಘಟಕ ಪಟ್ಟು ಹಿಡಿದಿದೆ.

ಬಿಜೆಪಿಯಿಂದಲೇ ಅಕಾರ ಅನುಭವಿಸಿ ಇದೀಗ ಪಕ್ಷದ ಬೆನ್ನಿಗೆ ಚೂರಿ ಇರಿದು ಜೆಡಿಎಸ್ ಅಭ್ಯರ್ಥಿಯನ್ನು ನಗರಸಭಾ ಸದಸ್ಯರನ್ನಾಗಿಸಲು ಹುನ್ನಾರ ರೂಪಿಸಿರುವ ಎಂ.ವಿ.ನಾಗರಾಜ್ ಅವರ ಮಾತಿಗೆ ಮನ್ನಣೆ ನೀಡಬಾರದು ಎಂದು ಸ್ಥಳೀಯ ಬಿಜೆಪಿ ಮುಖಂಡರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ನಾಳೆ ಹೈಕೋರ್ಟ್‍ನಲ್ಲಿ ಅರ್ಜಿ ವಿಚಾರಣೆ ನಡೆಯಲಿದ್ದು, ನ.12ರಂದೇ ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಬೇಕಿರುವುದರಿಂದ ನೆಲಮಂಗಲದಲ್ಲಿ ತಾಲ್ಲೂಕು ಬಿಜೆಪಿ ಘಟಕದ ಕೈ ಮೇಲಾಗುವುದೋ ಅಥವಾ ಎಂ.ವಿ.ನಾಗರಾಜ್ ಹುನ್ನಾರಕ್ಕೆ ಮನ್ನಣೆ ದೊರೆಯುವುದೋ ಎಂಬುದು ಇದೀಗ ಭಾರೀ ಕುತೂಹಲ ಕೆರಳಿಸಿದೆ.

Facebook Comments

Sri Raghav

Admin