ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸರ್ಕಾರದ ಹಸ್ತಕ್ಷೇಪ, ಪ್ರಭಾವ ಸಲ್ಲದು : ಪ್ರಧಾನಿ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.6-ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‍ಇಪಿ)ಯಲ್ಲಿ ಸರ್ಕಾರಗಳ ಹಸ್ತಕ್ಷೇಪ ಮತ್ತು ಪ್ರಭಾವ ಇರಬಾರದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸಲಹೆ ಮಾಡಿದ್ದಾರೆ.  ಭಾರತವು ಪ್ರಾಚೀನ ಕಲಿಕಾ ಕೇಂದ್ರವಾಗಿ ಗುರುತಿಸಿಕೊಂಡಿದೆ. 21ನೇ ಶತಮಾನದಲ್ಲಿ ನಮ್ಮ ದೇಶವನ್ನು ಜ್ಞಾನ ಆರ್ಥಿಕತೆಯ ತಾಣವನ್ನಾಗಿ ಮಾರ್ಪಡಿಸುವ ಗುರಿ ಹೊಂದಲಾಗಿದೆ ಎಂದು ಅವರು ಘೋಷಿಸಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಎನ್‍ಇಪಿ ದೇಶದ ಆಶೋತ್ತರಗಳನ್ನು ಈಡೇರಿಸುವಲ್ಲ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಈ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸರ್ಕಾರಗಳ ಹಸ್ತಕ್ಷೇಪ ಮತ್ತು ಪ್ರಭಾವ ಸಲ್ಲದು ಎಂದು ಅವರು ಹೇಳಿದ್ದಾರೆ.

ವಿದೇಶಾಂಗ ನೀತಿ ಮತ್ತು ರಕ್ಷಣಾ ನೀತಿ ಸರ್ಕಾರಕ್ಕೆ ಸಂಬಂಧಪಟ್ಟಿದ್ದಲ್ಲ. ಇದು ದೇಶಕ್ಕೆ ಸಂಬಂಧಪಟ್ಟಿದ್ದು, ಅದೇ ರೀತಿ ಶಿಕ್ಷಣ ನೀತಿಯು ಸರ್ಕಾರದ ಹಸ್ತಕ್ಷೇಪಕ್ಕೆ ಹೊರತಾಗಿ ಪ್ರತಿಯೊಬ್ಬರಿಗೆ ಸೇರಿದ್ದಾಗಬೇಕೆಂದು ಪ್ರಧಾನಿ ಪ್ರತಿಪಾದಿಸಿದರು. ಎನ್‍ಇಪಿ ಕುರಿತ ರಾಜ್ಯಪಾಲರ ಮಹತ್ವದ ಸಮಾವೇಶ ಸಮಾವೇಶವನ್ನು ವಿಡಿಯೋ ಲಿಂಕ್ ಮೂಲಕ ಉದ್ಘಾಟಿಸಿ ಪ್ರಧಾನಮಂತ್ರಿ ಭಾಷಣ ಮಾಡಿದರು.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ವ್ಯಾಸಂಗಕ್ಕಿಂತ ಕಲಿಕೆ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಲಿದೆ. ಪಠ್ಯಕ್ರಮವನ್ನು ಮೀರಿ ಅದರಾಚೆಗೆ ಇರುವ ಗಂಭೀರ ಚಿಂತನೆಗೆ ಎನ್‍ಇಪಿ ಅನುವು ಮಾಡಿಕೊಡಲಿದೆ ಎಂದು ಮೋದಿ ಹೇಳಿದರು.

ಈ ಹೊಸ ನೀತಿಯಲ್ಲಿ ಹೆಚ್ಚು ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಒಳಪಡುತ್ತಾರೆ. ಇದರಿಂದ ಇದು ಹೆಚ್ಚು ವಾಸ್ತವ ಮತ್ತು ವಿಶಾಲ ತಳಹದಿಯನ್ನು ಹೊಂದಿರುತ್ತದೆ ಎಂದು ಪ್ರಧಾನಿ ವಿಶ್ಲೇಷಿಸಿದರು.  ಎನ್‍ಇಪಿ ಭಾರತದಲ್ಲಿ ಅಂತಾರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‍ಗೆ ಅನುವು ಮಾಡಿಕೊಡುತ್ತದೆ.

ಇದರಿಂದ ತೀರಾ ಸಾಮಾನ್ಯ ಕುಟುಂಬದ ವಿದ್ಯಾರ್ಥಿಗಳೂ ಸಹ ವಿಶ್ವ ಶ್ರೇಷ್ಠ ದರ್ಜೆಯ ಶಿಕ್ಷಣ ಸಂಸ್ಥೆಗಳಿಗೆ ಸೇರಲು ಅವಕಾಶ ಲಭಿಸುತ್ತದೆ ಎಂದು ಅವರು ಹೇಳಿದರು. ಕೇಂದ್ರ ಶಿಕ್ಷಣ ಸಚಿವಾಲಯದಿಂದ ಆಯೋಜಿಸಿರುವ ಈ ಸಮಾವೇಶವು ಉನ್ನತ ಶಿಕ್ಷಣದ ಪರಿವರ್ತನೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‍ಇಪಿ) ಪಾತ್ರ-2020 ಎಂಬ ಶೀರ್ಷಿಕೆ ಹೊಂದಿದೆ.

ರಾಜ್ಯಪಾಲರ ಈ ಸಮಾವೇಶದಲ್ಲಿ ಎಲ್ಲ ರಾಜ್ಯಗಳ ಶಿಕ್ಷಣ ಸಚಿವರು, ರಾಜ್ಯಗಳ ಪ್ರಮುಖ ವಿಶ್ವವಿದ್ಯಾಲಯಗಳ ಉಪ ಕುಲಪತಿಗಳು ಮತ್ತು ಶಿಕ್ಷಣ ಕ್ಷೇತ್ರದ ಉನ್ನತಾಧಿಕಾರಿಗಳು ಭಾಗವಹಿಸಲಿದ್ದಾರೆ. ಕೇಂದ್ರ ಸರ್ಕಾರವು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿದ ನಂತರ ನಡೆಯುತ್ತಿರುವ ಪ್ರಥಮ ರಾಷ್ಟ್ರ ಮಟ್ಟದ ಸಮಾವೇಶ ಇದಾಗಿದೆ.

ಭಾರತದಲ್ಲಿ 1986ರಲ್ಲಿ ಅನುಷ್ಠಾನಗೊಂಡಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು 34 ವರ್ಷಗಳ ಬಳಿಕ ಮಾರ್ಪಡಿಸಿ ಇತ್ತೀಚೆಗೆ ಕೇಂದ್ರ ಸರ್ಕಾರ ನೂತನ ಎನ್‍ಇಪಿ ಜಾರಿಗೊಳಿಸಿದೆ. ಈ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಶಾಲೆ ಮತ್ತು ಉನ್ನತ ಶಿಕ್ಷಣ ಮಟ್ಟ ಇವೆರಡರಲ್ಲೂ ಪ್ರಮುಖ ಸುಧಾರಣೆಗಳತ್ತ ವಿಶೇಷ ಗಮನ ಕೇಂದ್ರೀಕರಿಸಲಾಗಿದೆ.

Facebook Comments