ಚೀನಾದ ಕೈಗೊಂಬೆಯಾಗಿರುವ ನೇಪಾಳ ಪ್ರಧಾನಿ ಸದ್ಯಕ್ಕೆ ಸೇಫ್..!

ಈ ಸುದ್ದಿಯನ್ನು ಶೇರ್ ಮಾಡಿ

ಕಠ್ಮಂಡು, ಜು.6- ಗಡಿ ವಿವಾದ, ಭಾರತದೊಂದಿಗೆ ಭಿನ್ನಾಭಿಪ್ರಾಯ, ಚೀನಾ ಜತೆ ಸಖ್ಯ ಮೊದಲಾದ ವಿಷಯಗಳಲ್ಲಿ ವಿವಾದದ ಸುಳಿಗೆ ಸಿಲುಕಿರುವ ನೇಪಾಳ ಪ್ರಧಾನಮಂತ್ರಿ ಕೆ.ಪಿ.ಶರ್ಮಾ ಓಲಿ ಅವರನ್ನು ದೇಶದ ಉನ್ನತ ಹುದ್ದೆಯಲ್ಲಿ ಮುಂದುವರಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ನಿರ್ಧರಿಸುವ ಮಹತ್ವದ ಸಭೆ ಮೂರು ದಿನಗಳ ಮಟ್ಟಿಗೆ ಮುಂದೂಡಲ್ಪಟ್ಟಿದೆ.

ಇದರಿಂದಾಗಿ ತಮ್ಮ ಅಧಿಕಾರ ಗದ್ದುಗೆ ಮತ್ತೆ ತೂಗಾಡುತ್ತಿದ್ದ ಆತಂಕದ ಕತ್ತಿಯಿಂದ ಹಿಮಾಲಯ ರಾಷ್ಟ್ರದ ಪ್ರಧಾನಿ ಸದ್ಯಕ್ಕೆ ಪಾರಾಗಿದ್ದಾರೆ.  ಓಲಿ ಅವರ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ನಿರ್ಧರಿಸಲು ಇಂದು ನಡೆಯಬೇಕಿದ್ದ ನೇಪಾಳದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಸ್ಥಾಯಿ ಸಮಿತಿಯ ಮಹತ್ವದ ಸಭೆ ಬುಧವಾರದ ತನಕ ಮುಂದೂಡಲ್ಪಟ್ಟಿದೆ.

ಸಭೆಯನ್ನು ಬುಧವಾರಕ್ಕೆ ಮುಂದೂಡಲಾಗಿದೆ ಎಂದು ಪ್ರಧಾನಮಂತ್ರಿ ಅವರ ಪತ್ರಿಕಾ ಸಲಹೆಗಾರ ಸೂರ್ಯ ತಾಪ ತಿಳಿಸಿದ್ದಾರೆ. ಸಭೆ ಮೂದೂಡಿಕೆಗೆ ನಿಖರ ಕಾರಣ ಸದ್ಯಕ್ಕೆ ತಿಳಿದುಬಂದಿಲ್ಲ.

ಇದೇ ವಿಷಯವಾಗಿ ಶನಿವಾರ ನಡೆಯಬೇಕಿದ್ದ ಸಭೆ ಇಂದಿಗೆ ಮುಂದೂಡಲ್ಪಟ್ಟಿತ್ತು. ಇಂದಿನ ಸಭೆ ಮತ್ತೆ ಮೂರು ದಿನ ಮುಂದಕ್ಕೆ ಹೋಗಿದೆ.

ಇತ್ಯರ್ಥಕ್ಕೆ ಬಾಕಿ ಉಳಿದಿರುವ ವಿಷಯಗಳ ಬಗ್ಗೆ ತಿಳುವಳಿಕೆಗೆ ಸಮಯದ ಅಗತ್ಯವಿದೆ ಎಂದು ನೇಪಾಳ ಕಮ್ಯುನಿಸ್ಟ್ ಪಾರ್ಟಿ(ಎನ್‍ಸಿಪಿ) ನಾಯಕರು ತಿಳಿಸಿದ್ದ ಕಾರಣ ಶನಿವಾರದ ಸಭೆಯನ್ನು ಸೋಮವಾರಕ್ಕೆ ಮುಂದೂಡಲಾಗಿತ್ತು.

ಎನ್‍ಸಿಪಿಯ 45 ಸದಸ್ಯರ ಸ್ಥಾಯಿ ಸಮಿತಿ ಪಕ್ಷದ ಅತ್ಯಂಬ ಪ್ರಬಲ ಮತ್ತು ನಿರ್ಣಾಯಕ ಅಂಗವಾಗಿದೆ. ಭಾರತದ ವಿರುದ್ಧ ಹೇಳಿಕೆ ನೀಡಿರುವ ಪ್ರಧಾನಿ ಕೆ.ಪಿ.ಶರ್ಮಾ ಓಲಿ ವಿರುದ್ಧ ಮಾಜಿ ಪ್ರಧಾನಿ ಪುಷ್ಪ ಕಮಲ್ ದಹಾಲ್ ಪ್ರಚಂಡ ಸೇರಿದಂತೆ ಎನ್‍ಸಿಪಿ ಅನೇಕ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಕೂಡಲೇ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದಾರೆ.

Facebook Comments