ವೀರ ಸೇನಾನಿ ನೇತಾಜಿಗೆ 124ನೇ ಜನ್ಮದಿನ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.23- ವೀರ ಸೇನಾನಿ ನೇತಾಜಿ ಸುಭಾಷ್‍ಚಂದ್ರ ಬೋಸ್ ಅವರ 124ನೆ ಜನ್ಮದಿನವಿಂದು. ಈ ಸಂದರ್ಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಬೋಸ್ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಮಾಜಿ ರಾಷ್ಟ್ರಪತಿ ಡಾ.ಪ್ರಣಬ್ ಮುಖರ್ಜಿ, ಮಾಜಿ ಪ್ರಧಾನಮಂತ್ರಿಗಳಾದ ಎಚ್.ಡಿ.ದೇವೇಗೌಡರು, ಡಾ.ಮನಮೋಹನ್‍ಸಿಂಗ್, ಕಾಂಗ್ರೆಸ್ ಮುಖಂಡರಾದ ಸೋನಿಯಾಗಾಂಧಿ, ರಾಹುಲ್‍ಗಾಂಧಿ, ಗುಲಾಮ್‍ನಬಿ ಆಜಾದ್, ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವರಾದ ಅಮಿತ್ ಷಾ, ರಾಜನಾಥ್‍ಸಿಂಗ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಅನೇಕ ರಾಜ್ಯಗಳ ಸಿಎಂಗಳು ಮತ್ತು ಅನೇಕ ಗಣ್ಯರು ನೇತಾಜಿಗೆ ಗೌರವ ಸಮರ್ಪಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ನೇತಾಜಿ ಅವರ ಶೌರ್ಯ ಮತ್ತು ವಸಾಹತುಶಾಹಿಗಳ ವಿರುದ್ಧ ಹೋರಾಟ ಅವಿಸ್ಮರಣೀಯ. ಅವರನ್ನು ಇಡೀ ದೇಶ ಸದಾ ಸ್ಮರಿಸುತ್ತದೆ. ಆಗಿನ ಪಶ್ಚಿಮ ಬಂಗಾಳ ಪ್ರಾಂತ್ಯದ ಒಡಿಶಾದ ಕಟಕ್‍ನಲ್ಲಿ 23ನೆ ಜನವರಿ 1897ರಲ್ಲಿ ಜನಿಸಿದ ಬೋಸ್ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದ್ದರು.

ನಿಮ್ಮ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ದೊರಕಿಸಿಕೊಡುತ್ತೇನೆ ಎಂಬ ವೀರ ಸೇನಾನಿ ಸುಭಾಷ್‍ಚಂದ್ರ ಬೋಸ್ ಅವರ ವಾಕ್ಯ ಅಮರವಾಣಿಯಾಗಿದೆ. ಇಡೀ ದೇಶ ಅವರನ್ನು ನೇತಾಜಿ ಎಂದು ಗೌರವಿಸುತ್ತಿದೆ.

Facebook Comments