ನೂತನ ಉದ್ಯಮ ನೀತಿಯಿಂದ ರಾಜ್ಯ ಮೊದಲನೇ ಸ್ಥಾನಕ್ಕೆ : ಸಚಿವ ಸೋಮಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ದೇಶದಲ್ಲಿ ರಫ್ತು ಮಾಡುವ ರಾಜ್ಯಗಳ ಪೈಕಿ ಕರ್ನಾಟಕ ಪ್ರಸ್ತುತ ನಾಲ್ಕನೇ ಸ್ಥಾನದಲ್ಲಿದ್ದು, ನೂತನ ಉದ್ಯಮ ನೀತಿಯು ರಾಜ್ಯವನ್ನು ಮೊದಲನೇ ಸ್ಥಾನಕ್ಕೆ ಕೊಂಡೊಯ್ಯುವ ಗುರಿ ಹೊಂದಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ವಾಣಿಜ್ಯ, ಕೈಗಾರಿಕೆ ಉತ್ತೇಜನ ಮತ್ತು ಆಂತರಿಕ ವ್ಯವಹಾರಗಳ ಇಲಾಖೆ ಆಯೋಜಿಸಿದ್ದ ಪ್ರಧಾನಮಂತ್ರಿಗಳ ಗತಿಶಕ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗತಿಶಕ್ತಿ-ಇದೊಂದು ವಿದ್ಯುನ್ಮಾನ ವೇದಿಕೆಯಾಗಿದ್ದು, ರೈಲ್ವೆ ಮತ್ತು ರಸ್ತೆ ಸಾರಿಗೆ ಸೇರಿದಂತೆ 16 ಮಂತ್ರಾ ಲಯಗಳನ್ನು ಒಗ್ಗೂಡಿಸಿ, ರಾಷ್ಟ್ರದಲ್ಲಿ ಮೂಲಸೌಕರ್ಯ ಸಂಪರ್ಕ ಯೋಜನೆಗಳ ಸಮಗ್ರ ಯೋಜನೆಯನ್ನು ಸಿದ್ಧಪಡಿಸುತ್ತದೆ ಮತ್ತು ಅವುಗಳ ಸಹಭಾಗಿತ್ವದಲ್ಲಿ ಅನುಷ್ಠಾನವನ್ನು ಕೈಗೊಳ್ಳಲು ಅನುವು ಮಾಡಿಕೊಡುತ್ತದೆ ಎಂದರು.

ಬೆಂಗಳೂರಿನ ದಾಬಸ್‍ಪೇಟೆಯಲ್ಲಿ ಬಹು ಮಾದರಿಯ ಸಾಗಣೆ ಪಾರ್ಕ್‍ನ್ನು ಅಭಿವೃದ್ಧಿಪಡಿಸಲು 400 ಎಕರೆ ಭೂಮಿ ಯನ್ನು ಗುರುತಿಸಲಾಗಿದೆ. ಬಂದರುಗಳ ನಿರ್ಮಾಣ ಹಾಗೂ ಅಭಿವೃದ್ಧಿ ಜೊತೆಗೆ ಅಂತರ ಜಲ ಸಾರಿಗೆ ಮೂಲಕ ವಿವಿಧ ಆರ್ಥಿಕ ವಲಯಗಳನ್ನು ಬೆಸೆಯುತ್ತಿರುವ ರಾಜ್ಯ ಸರ್ಕಾರ ಪೂರ್ಣ ಪ್ರಮಾಣದ ಆರ್ಥಿಕ ಪ್ರಗತಿಯನ್ನು ಸಾಸುತ್ತಿದೆ ಎಂದರು.

ಕರ್ನಾಟಕವು ಪ್ರಮುಖ ಬಂದರು ಪ್ರದೇಶ ಹೊಂದಿದ್ದು, ಹೊಸ ಮಂಗಳೂರು ಬಂದರು ಟ್ರಸ್ಟ್ (ಎನ್‍ಎಂಪಿಟಿ) ಮತ್ತು 300 ಕಿ.ಮೀ ಕರಾವಳಿ ತೀರದುದ್ದಕ್ಕೂ ಸುಮಾರು 10 ಇತರ ಚಿಕ್ಕ ಚಿಕ್ಕ ಬಂದರುಗಳಿವೆ ಎಂದು ತಿಳಿಸಿದರು.

ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣಗಳಲ್ಲಿ ವಿಮಾನ ಸರಕು ಸಾಗಣೆ ಸೌಲಭ್ಯಗಳ ಜೊತಗೆ ಕರ್ನಾಟಕವು ಉತ್ತಮ ಸಂಪರ್ಕ ವ್ಯವಸ್ಥೆಯನ್ನು ಹೊಂದಿದ್ದು, 6,572 ಕಿ.ಮೀ ರಾಷ್ಟ್ರೀಯ ಹೆದ್ದಾರಿಗಳು, 19,578 ಕಿ.ಮೀ ರಾಜ್ಯ ಹೆದ್ದಾರಿಗಳು ಮತ್ತು 3,250 ಕಿ.ಮೀ ರೈಲ್ವೆ ಮಾರ್ಗ ಹೊಂದಿದೆ ಎಂದು ವಿವರಿಸಿದರು.

ಕರ್ನಾಟಕ ರಾಜ್ಯದಲ್ಲಿ ಕೈಗಾರಿಕಾ-ಸ್ನೇಹಿ ವಾತಾವರಣವನ್ನು ನಿರ್ಮಿಸಲು ಮತ್ತು ವಾಣಿಜ್ಯ ವಹಿವಾಟನ್ನು ಸುಗಮಗೊಳಿಸಲು ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ರಾಜ್ಯ ಸರ್ಕಾರವು ಕೈಗೊಳ್ಳುತ್ತಿದೆ ಮತ್ತು ರಾಷ್ಟೀಯ ಯೋಜನೆಯ ಅನುಸಾರವಾಗಿಯೇ ರಾಜ್ಯದಲ್ಲಿನ ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಉತ್ತಮಗೊಳಿಸಲು ಕೇಂದ್ರ ಸರ್ಕಾರದೊಂದಿಗೆ ಕೈಜೋಡಿಸುತ್ತಿದೆ ಎಂದು ಹೇಳಿದರು.

ರಾಜ್ಯ ಸರ್ಕಾರವು ಈಗಾಗಲೇ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಮೂಲಕ ರಾಜ್ಯದಲ್ಲಿನ ವಿವಿಧ ಭಾಗಗಳಲ್ಲಿ ವಿಮಾನ ನಿಲ್ಧಾಣಗಳನ್ನು ನಿರ್ಮಿಸುತ್ತಿದೆ. ಪೂರ್ವ, ಪಶ್ಚಿಮ, ಉತ್ತರ ಹಾಗೂ ದಕ್ಷಿಣ ವಲಯಗಳಲ್ಲಿ ವಿಮಾನ ನಿಲ್ದಾಣಗಳನ್ನು ನಿರ್ಮಿಸುವುದರಿಂದ ವಿವಿಧ ಆರ್ಥಿಕ ವಲಯಗಳಿಗೆ ತ್ವರಿತಗತಿಯ ಸಂಪರ್ಕ ಸಿಗುವುದಲ್ಲದೇ ಆಯಾ ವಲಯಗಳಲ್ಲಿನ ಆರ್ಥಿಕ ಹಾಗೂ ಔದ್ಯಮಿಕ ಪ್ರಗತಿ ಹೆಚ್ಚುತ್ತದೆ ಎಂದರು.

ರಾಜ್ಯದಲ್ಲಿನ ಹಾಗೂ ಅಂತಾರಾಜ್ಯ ರೈಲು ಮಾರ್ಗಗಳ ನಿರ್ಮಾಣ ಮತ್ತು ರೈಲ್ವೆ ಕೆಳಸೇತುವೆ/ಮೇಲುಸೇತುವೆಗಳ ನಿರ್ಮಾಣ ದಲ್ಲಿ ರಾಜ್ಯ ಸರ್ಕಾರದ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಪಾತ್ರ ಅತ್ಯಂತ ಮಹತ್ವದ್ದು. ರೈಲು ಮಾರ್ಗಗಳ ನಿರ್ಮಾಣ ವೆಚ್ಚದಲ್ಲಿ ಶೇ.50 ರಷ್ಟನ್ನು ರಾಜ್ಯ ಸರ್ಕಾರ ಭರಿಸುವುದಲ್ಲದೇ ಈ ಮಾರ್ಗಗಳ ನಿರ್ಮಾಣಕ್ಕೆ ಅಗತ್ಯವಾದ ಭೂಮಿಯನ್ನು ರಾಜ್ಯ ಸರ್ಕಾರ ಉಚಿತವಾಗಿ ನೀಡುತ್ತದೆ.

ರಾಜ್ಯದಲ್ಲಿನ ರೈಲು ಮಾರ್ಗಗಳ ಸಾಂದ್ರತೆಯನ್ನು ಹೆಚ್ಚಿಸುವ ದೃಷ್ಠಿಯಿಂದ ಈಗಾಗಲೇ 9 ನೂತನ ರೈಲು ಮಾರ್ಗಗಳ ನಿರ್ಮಾಣ ಯೋಜನೆಯನ್ನು ಕೇಂದ್ರ ಸರ್ಕಾ ರದ ಸಹಭಾಗಿತ್ವದಲ್ಲಿ ಕೈಗೊಳ್ಳಲಾಗಿದೆ.

ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಮೂಲಕವೇ ಲಾಜಿಸ್ಟಿಕ್ಸ್ ಪಾರ್ಕ್ ಅನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡುವುದರ ಮೂಲಕ ರಾಜ್ಯದಲ್ಲಿನ ವಾಣಿಜ್ಯ ವಹಿವಾಟು ಸುಗಮವಾಗಿ ಸಾಗಲು ಅನುವು ಮಾಡಿಕೊಡುತ್ತದೆ ಎಂದರು.

Facebook Comments