ಭಾನುವಾರದೊಳಗೆ ಸಂಪುಟ ವಿಸ್ತರಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.28- ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೊದಲ ಹಂತದ ಸಚಿವ ಸಂಪುಟ ಸೇರ್ಪಡೆ ಕಾರ್ಯ ಶುಕ್ರವಾರ ಅಥವಾ ಭಾನುವಾರ ನಡೆಯುವ ಸಾಧ್ಯತೆಗಳಿವೆ. ಮುಖ್ಯಮಂತ್ರಿಯವರು ಇಂದು ಸಂಜೆ ದೆಹಲಿಗೆ ತೆರಳುವ ಸಾಧ್ಯತೆಯಿದ್ದು, ಕೇಂದ್ರದ ವರಿಷ್ಠರು ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ತೋರಿದರೆ ಶುಕ್ರವಾರವೇ ಮೊದಲ ಹಂತದ ಸಂಪುಟ ಸೇರ್ಪಡೆ ಕಾರ್ಯ ನಡೆಯಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ನಾಯಕರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆ ಕುರಿತಂತೆ ಸಮಾಲೋಚನೆ ನಡೆಸಲು ಮುಖ್ಯಮಂತ್ರಿ ಇಂದು ಸಂಜೆ ದೆಹಲಿಗೆ ತೆರಳಲಿದ್ದಾರೆ. ಯಾರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು, ಯಾರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ವರಿಷ್ಠರೊಂದಿಗೆ ಸಮಾಲೋಚಿಸಿ ಅವರ ಅನುಮತಿ ಪಡೆದು ಬೆಂಗಳೂರಿಗೆ ಮರಳಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಪಕ್ಷ ಮತ್ತು ಸರ್ಕಾರದ ನಡುವೆ ಯಾವುದೇ ರೀತಿಯ ಗೊಂದಲಕ್ಕೆ ಆಸ್ಪದವಿಲ್ಲದಂತೆ ಸಮನ್ವಯತೆಯಿಂದ ಸಂಪುಟ ಸೇರ್ಪಡೆ ಮಾಡುವ ಉದ್ದೇಶ ಹೊಂದಲಾಗಿದೆ.

ಮೊದಲ ಹಂತದ ಸಂಪುಟ ಸೇರ್ಪಡೆಯಲ್ಲಿ 15ಕ್ಕೂ ಹೆಚ್ಚು ಮಂದಿಗೆ ಅವಕಾಶ ಕಲ್ಪಿಸಲಾಗುತ್ತದೆ. ಹೊಸಬರಿಗೆ ಹಾಗೂ ಯುವಕರಿಗೆ ಹೆಚ್ಚು ಆದ್ಯತೆ ನೀಡಲು ಉದ್ದೇಶಿಸಲಾಗಿದ್ದು, ಈಗಾಗಲೇ ಸಚಿವರಾಗಿ ಕಾರ್ಯನಿರ್ವಹಿಸಿರುವ ಹಿರಿಯರನ್ನು ಪಕ್ಷ ಸಂಘಟನೆ ಕಾರ್ಯಕ್ಕೆ ನಿಯೋಜಿಸುವ ಸಾಧ್ಯತೆ ಇದೆ.

ಮೂರರಿಂದ ನಾಲ್ಕು ಮಂದಿಯನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಲಾಗುತ್ತದೆ. ಮಾಜಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಆರ್.ಅಶೋಕ್, ಶ್ರೀರಾಮುಲು ಅವರ ಹೆಸರು ಉಪಮುಖ್ಯಮಂತ್ರಿ ಸ್ಥಾನದ ಹೆಸರುಗಳಲ್ಲಿ ಮುಂಚೂಣಿಯಲ್ಲಿವೆ.

ಪಂಚಮಸಾಲಿ ಸಮುದಾಯಕ್ಕೂ ಒಂದು ಉಪಮುಖ್ಯಮಂತ್ರಿ ಸ್ಥಾನ ನೀಡುವ ಉದ್ದೇಶವಿದ್ದು, ಯಾರಿಗೆ ಈ ಸ್ಥಾನ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ. ಬೊಮ್ಮಾಯಿ ಅವರ ಸಂಪುಟಕ್ಕೆ ಸೇರ್ಪಡೆಗೊಳ್ಳುವವರ ಪಟ್ಟಿಯಲ್ಲಿ ಮಾಜಿ ಸಚಿವರಾದ ಮಾಧುಸ್ವಾಮಿ, ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ, ಉಮೇಶ್ ಕತ್ತಿ, ಸುಧಾಕರ್ ಮತ್ತಿತರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

Facebook Comments