ರೂಪಾಂತರಗೊಂಡ ಕೊರೊನ ಗುರುತಿಸುವಲ್ಲಿ ಭಾರತ ವಿಫಲ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಡಿ.22- ಇಂಗ್ಲೆಂಡ್‍ನಲ್ಲಿ ಪತ್ತೆಯಾಗಿರುವ ಹೊಸ ಮಾದರಿಯ ಕೊರೊನಾ ಸೋಂಕು ಈಗಾಗಲೇ ದೇಶದಲ್ಲಿ ಹಲವಾರು ಮಂದಿಗೆ ತಗುಲಿದೆ. ಆದರೆ ಅದನ್ನು ಪತ್ತೆ ಹಚ್ಚುವಲ್ಲಿ ನಮ್ಮ ವೈದ್ಯರು ಮತ್ತು ವಿಜ್ಞಾನಿಗಳು ವಿಫಲರಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಎನ್5017 ಎಂದು ಗುರುತಿಸಲಾಗಿರುವ ಹೊಸ ತಳಿಯ ಕೊರೊನಾ ಸೋಂಕು ಇಂಗ್ಲೆಡ್‍ನಲ್ಲಿ ಸೆಪ್ಟೆಂಬರ್‍ನಲ್ಲೇ ಕಾಣಿಸಿಕೊಂಡಿತ್ತು. ಹಂತ ಹಂತವಾಗಿ ಅದು ಹರಡುವಿಕೆಯ ವೇಗವನ್ನು ಹೆಚ್ಚಿಸಿಕೊಂಡಿದ್ದರಿಂದ ಎಚ್ಚೆತ್ತುಕೊಂಡ ಇಂಗ್ಲೆಂಡ್ ವಿಜ್ಞಾನಿಗಳು ಹೊಸ ಪ್ರಬೇಧವನ್ನು ಪತ್ತೆ ಹಚ್ಚಿ ಬಹಿರಂಗಪಡಿಸಿದ್ದಾರೆ.

ಅದರ ಪರಿಣಾಮ ತೀವ್ರವಾದ ಹಿನ್ನೆಲೆಯಲ್ಲಿ ಭಾನುವಾರ ಇಂಗ್ಲೆಂಡ್‍ನ ಕೆಲವು ಭಾಗಗಳನ್ನು ಲಾಕ್‍ಡೌನ್ ಮಾಡಲಾಗಿದೆ. ಅನಂತರ ಜಗತ್ತಿನ ಬೇರೆ ಬೇರೆ ದೇಶಗಳು ಎಚ್ಚೆತ್ತುಕೊಂಡು ಇಂಗ್ಲೆಂಡ್ ನಡುವಿನ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಿವೆ. ಆದರೆ ಇದಕ್ಕೂ ಮೊದಲು ಇಂಗ್ಲೆಂಡ್‍ನಿಂದ ಪ್ರಯಾಣಿಸುವವರ ಮೂಲಕ ಭಾರತಕ್ಕೆ ಸೋಂಕು ಪ್ರವೇಶಿಸಿರುವ ಆತಂಕ ವ್ಯಕ್ತವಾಗಿದೆ.

ವಿಮಾನ ನಿಲ್ದಾಣದಲ್ಲಿ ಸೂಕ್ತ ತಪಾಸಣಾ ವ್ಯವಸ್ಥೆ ಮತ್ತು ವಿದೇಶಿ ಪ್ರಯಾಣಿಕರ ಕ್ವಾರಂಟೈನ್ ಅನ್ನು ಕೈ ಬಿಡಲಾಗಿತ್ತು. ಹೀಗಾಗಿ ಇಂಗ್ಲೆಂಡ್‍ನಿಂದ ಬಂದವರು ಈಗಾಗಲೇ ದೇಶದಲ್ಲಿ ಸಂಚರಿಸಿದ್ದು, ಅವರಿಂದ ಬೇರೆಯವರಿಗೂ ಸೋಂಕು ಹರಡಿರುವ ಆತಂಕ ವ್ಯಕ್ತವಾಗಿದೆ. ರೂಪಾಂತರಗೊಂಡಿರುವ ಸೋಂಕಿನ ಕುರಿತಂತೆ ಕೇಳಿ ಬಂದಿರುವ ಹಲವು ಅನುಮಾನಗಳಿಗೆ ವಿಜ್ಞಾನಿಗಳು ಉತ್ತರ ಹೇಳಿ ಜನರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದಾರೆ.

ಕೊರೊನಾ ರೂಪಾಂತರಗೊಂಡು ಪದೇ ಪದೇ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುವುದು ಹೊಸದೇನಲ್ಲ. ಈ ಮೊದಲು ಮಲೇಷ್ಯಾದಲ್ಲೂ ರೂಪಾಂತರಗೊಂಡಿದ್ದ ವೈರಸ್ ಪತ್ತೆಯಾಗಿತ್ತು. ಅದರ ಗುರುತಿಸುವ ವೇಳೆಗೆ ಸಾಕಷ್ಟು ದೇಶಗಳಿಗೂ ಅದು ಹಬ್ಬಿತ್ತು. ಕೋವಿಡ್ -19 ಹರಡುವಿಕೆಯಲ್ಲಿ ನಿಧಾನವಾಗಿದ್ದರೂ ಸಾವಿನ ಪ್ರಮಾಣದಲ್ಲಿ ತೀವ್ರವಾಗಿದೆ. ಮಲೇಷ್ಯಾದಲ್ಲಿ ಪತ್ತೆಯಾದ ಸೋಂಕು ಸಾಮ್ಯತೆ ಇದ್ದು ಮತ್ತು ಈಗ ಗುರುತಿಸಲಾಗಿರುವ ಎನ್5017ಗೂ ಕೋವಿಡ್-19ನಷ್ಟೇ ಅಪಾಯಕಾರಿ. ಅದಕ್ಕೂ ಮೀರಿ ಹೆಚ್ಚಿನ ಆಘಾತ ಉಂಟು ಮಾಡುವ ಗುಣ ಲಕ್ಷಣಗಳು ಕಂಡು ಬಂದಿಲ್ಲ ಎಂದು ಹೇಳಲಾಗಿದೆ.

ಈಗಾಗಲೇ ಸಂಶೋಧಿಸಿರುವ ಲಸಿಕೆಗಳು ಹೊಸ ಕೊರೊನಾದ ಮೇಲೂ ಪರಿಣಾಮ ಬೀರಬಹುದು. ಅದನ್ನು ನಿಯಂತ್ರಿಸಲು ಸಹಕಾರಿಯಾಗಬಹುದು ಎಂಬ ವಿಶ್ವಾಸವನ್ನು ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ.

Facebook Comments