ಸಿಎಂ ಕುಮಾರಸ್ವಾಮಿಗೆ ಹೊಸ ಡೆಡ್ ಲೈನ್ ನೀಡಿದ ರಾಜ್ಯಪಾಲರು
ಸಿಎಂ ಕುಮಾರಸ್ವಾಮಿಗೆ ಹೊಸ ಡೆಡ್ ಲೈನ್ ನೀಡಿದ ರಾಜ್ಯಪಾಲರು
ಬೆಂಗಳೂರು, ಜು.19-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯವರು ಇಂದು ಸಂಜೆ 6 ಗಂಟೆಯೊಳಗೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕೆಂದು ರಾಜ್ಯಪಾಲ ವಜೂಭಾಯಿ ವಾಲಾ ಅವರು ಎರಡನೇ ಬಾರಿ ಸಮಯ ನಿಗದಿಪಡಿಸಿದ್ದಾರೆ.
ಈ ಹಿಂದೆ ಇಂದು ಮಧ್ಯಾಹ್ನ 1.30ರೊಳಗೆ ಬಹುಮತ ಸಾಬೀತುಪಡಿಸಬೇಕೆಂದು ಸೂಚಿಸಿದ್ದರು. ಆದರೆ ಸಮಯ ಮೀರಿ ಹೋಗಿದ್ದರಿಂದ ವಿಧಾನಸಭೆ ಸ್ಪೀಕರ್ ರಮೇಶ್ಕುಮಾರ್ ರಾಜಭವನಕ್ಕೆ ತೆರಳಿ ಮಾಹಿತಿ ನೀಡಿದರು.
ಸದನದಲ್ಲಿ ಅನೇಕ ವಿಷಯಗಳ ಬಗ್ಗೆ ಚರ್ಚಿಸಬೇಕೆಂದು ಸದಸ್ಯರು ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಇನ್ನಷ್ಟು ಸಮಯಾವಕಾಶ ನೀಡಬೇಕೆಂದು ಮನವಿ ಮಾಡಿದರು. ಆ ವೇಳೆಗೆ ರಾಜ್ಯಪಾಲರು ಕೇಂದ್ರ ಗೃಹ ಕಾರ್ಯದರ್ಶಿಗೆ ಮಧ್ಯಂತರ ವರದಿ ಸಲ್ಲಿಸಿದ್ದರು.
ಸಂಜೆ 6 ಗಂಟೆಯೊಳಗೆ ಬಹುಮತ ಸಾಬೀತುಪಡಿಸಲು ಸಮಯವನ್ನು ನಿಗದಿಪಡಿಸಿದ್ದಾರೆ. ಈ ಮಧ್ಯೆ ಭೋಜನ ವಿರಾಮದ ಬಳಿಕ ವಿಧಾನಸಭೆ ಕಲಾಪ ಪುನಾರಂಭವಾಗಿದ್ದು, ಚರ್ಚೆ ಮುಂದುವರೆದಿದೆ.
ಇಡೀ ದೇಶದ ಕುತೂಹಲ ಕೆರಳಿಸಿರುವ ಕರ್ನಾಟಕ ರಾಜಕೀಯ ವಿಚಾರ ಇದೀಗ ನಿರ್ಣಾಯಕ ಘಟ್ಟ ತಲುಪಿದ್ದು, ಇಂದು ಸಂಜೆ 6 ಗಂಟೆಯೊಳಗಾದರೂ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಸಾಬೀತುಪಡಿಸುತ್ತಾರೆ ಎಂಬುದು ಕಾದು ನೋಡಬೇಕು.