ಯಶವಂತಪುರ-ಕಾರವಾರ-ವಾಸ್ಕೋ ನೂತನ ಎಕ್ಸ್‌ಪ್ರೆಸ್ ರೈಲಿಗೆ ಸಿಎಂ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.7- ಕರಾವಳಿ ಜನತೆಯ ಬಹು ದಿನಗಳ ಬೇಡಿಕೆಯಂತೆ ಯಶವಂತಪುರ-ಕಾರವಾರ-ವಾಸ್ಕೋ ಮಾರ್ಗದ ನಡುವೆ ಸಂಚರಿಸುವ ನೂತನ ಎಕ್ಸ್‍ಪ್ರೆಸ್ ರೈಲಿಗೆ ಇಂದು ಚಾಲನೆ ನೀಡಲಾಯಿತು.  ಯಶವಂತಪುರದಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನ ರೈಲಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ, ಸಂಸದೆ ಶೋಭಾ ಕರಂದ್ಲಾಜೆ ಹಾಗೂ ರೈಲ್ವೆ ಅಧಿಕಾರಿಗಳು ಚಾಲನೆ ಕೊಟ್ಟರು.

ಪ್ರತಿದಿನ ಸಂಜೆ 6 ಗಂಟೆಗೆ ಯಶವಂತಪುರದಿಂದ ಹೊರಡಲಿರುವ ರೈಲು ಕುಣಿಗಲ್ ಮೂಲಕವಾಗಿ ಹಾಸನಕ್ಕೆ ರಾತ್ರಿ 9.15ಕ್ಕೆ ತಲುಪಲಿದ್ದು, ಬೆಳಗಿನ ಜಾವ 3 ಗಂಟೆಗೆ ಪಡಿಲ್ ತಲುಪಿ 5 ಗಂಟೆಗೆ ಉಡುಪಿ, 5.30ಕ್ಕೆ ಕುಂದಾಪುರ, 8.30ಕ್ಕೆ ಕಾರವಾರ ಹಾಗೂ 10.30ಕ್ಕೆ ವಾಸ್ಕೋ ತಲುಪಲಿದೆ.  ವಾಸ್ಕೋದಿಂದ ಸಂಜೆ 5.30ಕ್ಕೆ ಹೊರಡಲಿದ್ದು, 7.25ಕ್ಕೆ ಕಾರವಾರ, 9.30ಕ್ಕೆ ಕುಂದಾಪುರ, 10 ಗಂಟೆಗೆ ಉಡುಪಿ ಹಾಗೂ ಬೆಳಗ್ಗೆ 8 ಗಂಟೆಗೆ ಯಶವಂತಪುರ ತಲುಪಲಿದೆ.

ಈ ಹಿಂದೆ ಇದೇ ರೈಲು ಮಂಗಳೂರು ಸಿಟಿ ಮೂಲಕ ವಾಸ್ಕೋ ತಲುಪಬೇಕಿತ್ತು. ಆದರೆ ಹೆಚ್ಚಿನ ಸಮಯ ಅವಕಾಶ ತೆಗೆದುಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ನೂತನ ರೈಲು ನೀಡಬೇಕೆಂಬುದು ಇಲ್ಲಿಯ ಜನತೆಯ ಒತ್ತಾಸೆಯಾಗಿತ್ತು.  ಹೀಗಾಗಿ ಕರಾವಳಿ ಭಾಗದ ಸಂಸದರು, ಶಾಸಕರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ರೈಲು ಆರಂಭಿಸಬೇಕೆಂದು ಮನವಿ ಮಾಡಿದ್ದರು.

ಜನತೆಯ ಬೇಡಿಕೆಗೆ ಸ್ಪಂದಿಸಿದ ಕೇಂದ್ರ ರೈಲ್ವೆ ಸಚಿವ ಸುರೇಶ್ ಅಂಗಡಿ ಯಶವಂತಪುರದಿಂದ ವಾಸ್ಕೋಗೆ ಸಂಚರಿಸಲು ನೂತನ ರೈಲಿಗೆ ಅಸ್ತು ಎಂದಿದ್ದರು.  ರೈಲಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ನಮ್ಮ ಸರ್ಕಾರ ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ. ಕೇಂದ್ರದಿಂದ ಮಂಜೂರಾಗುವ ಎಲ್ಲಾ ಯೋಜನೆಗಳನ್ನು ಕಾಲ ಮಿತಿಯೊಳಗೆ ಅನುಷ್ಠಾನ ಮಾಡುತ್ತಿದ್ದೇವೆ.

ರೈಲ್ವೆ ಯೋಜನೆಗಳಿಗೆ ಅಗತ್ಯವಾದ ಭೂಮಿ, ಹಣಕಾಸಿನ ನೆರವು ಸೇರಿದಂತೆ ಎಲ್ಲ ಅಗತ್ಯ ನೆರವನ್ನು ನೀಡಲಾಗುವುದು. ನಾನು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ರೈಲ್ವೆ ಯೋಜನೆಗಳಿಗೆ ರಾಜ್ಯದಿಂದ ಭೂಮಿ, ಅರ್ಧ ವೆಚ್ಚ ಕೊಡುವ ಆಶ್ವಾಸನೆ ನೀಡಿದ್ದೆ. ಅದರಂತೆ ರೈಲು ಯೋಜನೆಗಳಿಗೆ ನಾವು ಸದಾ ಬೆಂಬಲ ಕೊಡಲಿದ್ದೇವೆ ಎಂದು ಹೇಳಿದರು.
ಬರುವ ದಿನಗಳಲ್ಲಿ ಇನ್ನಷ್ಟು ಹೊಸ ಯೋಜನೆಗಳು ರಾಜ್ಯಕ್ಕೆ ಸಿಗಲಿದೆ.

ಯಶವಂತಪುರ-ಕಾರವಾರ- ವಾಸ್ಕೋ ಮಾರ್ಗದಲ್ಲಿ ಹೊಸ ರೈಲು ಸಂಚರಿಸುವುದರಿಂದ ಶಿರಾಡಿಘಾಟ್ ಮೇಲಿನ ವಾಹನ ಸಂಚಾರ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲಿದೆ. ಅಲ್ಲದೆ ಈ ಮಾರ್ಗದಲ್ಲಿ ರೈಲು ಚಲಿಸುವುದರಿಂದ ಪ್ರಯಾಣಿಕರಿಗೆ ಸಮಯವೂ ಉಳಿಯಲಿದೆ ಎಂದರು.  ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಇದು ಕರಾವಳಿ ಭಾಗದ ಜನತೆಯ ಬಹುದಿನಗಳ ಬೇಡಿಕೆಯಾಗಿತ್ತು. ಇದೀಗ ಈ ಭಾಗದ ಜನತೆಯ ಬೇಡಿಕೆಗೆ ಮುಖ್ಯಮಂತ್ರಿ ಯಡಿಯೂರಪ್ಪ , ರೈಲ್ವೆ ಸಚಿವ ಸುರೇಶ್ ಅಂಗಡಿ ಸೇರಿದಂತೆ ಮತ್ತಿತರರು ಸ್ಪಂದಿಸಿ ರೈಲ್ವೆ ಸಂಚಾರಕ್ಕೆ ಅನುಮತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ಕರಾವಳಿ ಭಾಗದ ಹೆಚ್ಚಿನ ಜನರು ವಾಸ ಮಾಡುತ್ತಿದ್ದಾರೆ. ಹೊಸ ರೈಲು ಸಂಚಾರ ಆರಂಭಿಸಿರುವುದರಿಂದ ಪ್ರಯಾಣಿಕರಿಗೆ ಹೆಚ್ಚಿನ ಸಮಯ ಉಳಿಯಲಿದೆ. ಅಲ್ಲದೆ ನಮ್ಮ ಊರುಗಳಿಗೆ ತೆರಳಲು ರೈಲು ಇರಲಿಲ್ಲ. ಈಗ ಈ ರೈಲು ಸೇವೆ ಇರುವುದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.  ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಮೇಲೆ ರೈಲ್ವೆ ಯೋಜನೆಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರವು ರಾಜ್ಯಕ್ಕೆ ಎಲ್ಲ ರೀತಿಯ ನೆರವು ನೀಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಇದೇ ವೇಳೆ ಯಶವಂತಪುರ-ವಿಜಯಪುರ-ಯಶವಂತಪುರ ರೈಲನ್ನು ಎಲ್‍ಎಚ್‍ಬಿ ಕೋಚ್‍ಗಳಾಗಿ ಪರಿವರ್ತಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ವಿಶ್ವ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಯಶವಂತಪುರದಿಂದ ವಾಸ್ಕೋ ನಡುವೆ ಸಂಚರಿಸುವ ರೈಲನ್ನು ಮಹಿಳಾ ಲೋಕೋ ಪೈಲೆಟ್‍ಗಳಾದ ಅಭಿರಾಮಿ ಮತ್ತು ಬಾಲಾಶಿವ ಪಾವರ್ತಿ ಚಾಲನೆ ಮಾಡಿದರು.

Facebook Comments