ಗುಡಿಸಲಿನಲ್ಲಿದ್ದವರಿಗೆ ಸುಸಜ್ಜಿತ ಮನೆ, ಮಲ್ಲೇಶ್ವರ ವಾರ್ಡ್‍ನಲ್ಲಿ ಸರ್ದಾರ್ ವಲ್ಲಭ ಬಾಯ್ ಪಟೇಲ್ ಕುಟೀರ ನಿರ್ಮಾಣ

ಈ ಸುದ್ದಿಯನ್ನು ಶೇರ್ ಮಾಡಿ

ಜನಸೇವೆಗೆ ನಿಸ್ವಾರ್ಥ ಮನಸ್ಸು ಇರಬೇಕು. ಅದೆಷ್ಟೋ ಜನಪ್ರತಿನಿಧಿಗಳು ಜನರ ಮಧ್ಯೆ ಕಾಣಿಸಿಕೊಳ್ಳುವುದು ವಿರಳ. ಅಂತಹದರಲ್ಲಿ ಬೆಂಗಳೂರೆಂಬ ಮಹಾನಗರದ ಕೇಂದ್ರ ಭಾಗ ಮಲ್ಲೇಶ್ವರದ ವಾರ್ಡ್ ನಂ.45ರ ಪಾಲಿಕೆ ಸದಸ್ಯ ಎನ್. ಜೈಪಾಲ್ ಬಡವರಿಗೆ ಸೂರು ಕಲ್ಪಿಸುವುದು, ಹಸಿದ ಹೊಟ್ಟೆಗೆ ಊಟ ನೀಡುವ ಧ್ಯೇಯ ನಂಬಿ ನಡೆಯುತ್ತಿದ್ದಾರೆ.
ತಮ್ಮ ಶಕ್ತಿ ಮೀರಿ ಬಡವರ ಕಲ್ಯಾಣಕ್ಕೆ ಸರ್ಕಾರದಿಂದ ಸಿಗುವ ಅನುದಾನವನ್ನು ಪೂರ್ಣ ಬಳಕೆ ಮಾಡಿ ಸಾರ್ಥಕತೆ ಪಡೆದಿದ್ದಾರೆ.

ಯಶವಂತಪುರದ ಆರ್‍ಟಿಒ ಬಳಿ ಕನ್ನಡ ಹೋರಾಟಗಾರ ದಿವಂಗತ ರೆಹಮಾನ್‍ಖಾನ್ ರಸ್ತೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಗುಡಿಸಲಿನಲ್ಲಿ ವಾಸವಿದ್ದವರಿಗೆ ಈಗ ಸುಸಜ್ಜಿತ ಸ್ವಂತ ಸೂರು ಕಲ್ಪಿಸಿ 30ಕ್ಕೂ ಹೆಚ್ಚು ಕುಟುಂಬಕ್ಕೆ ಬೆಳಕು ನೀಡಿದ್ದಾರೆ.]ಬಿಬಿಎಂಪಿಯ ಎಸ್ಸಿ/ಎಸ್ಟಿ ಅನುದಾನದಡಿ ಒಟ್ಟು 30 ಮನೆಗಳನ್ನು ನಿರ್ಮಿಸಿದ್ದು , ಅದಕ್ಕೆ ಸರ್ದಾರ್‍ವಲ್ಲಭಬಾಯ್ ಪಟೇಲ್ ಕುಟೀರ ಎಂದು ಹೆಸರಿಡಲಾಗಿದೆ.

ಫೆ.2ರಂದು ಇದನ್ನು ಹಸ್ತಾಂತರಿಸಲಾಗುವುದು ಎಂದು ಪಾಲಿಕೆ ಸದಸ್ಯ ಜೈಪಾಲ್ ತಿಳಿಸಿದ್ದಾರೆ.ದಿನಗೂಲಿ ಮಾಡಿ ಜೀವನ ನಡೆಸುತ್ತಿರುವ ಇಲ್ಲಿನ ನಿವಾಸಿಗಳನ್ನು ಗುರುತಿಸಿ ಆರ್ಥಿಕವಾಗಿ ಸಬಲಗೊಳಿಸ ಬೇಕೆಂಬುದು ನನ್ನ ಆಶಯ. ಅದರಂತೆ ನನ್ನ ವಾರ್ಡ್‍ನಲ್ಲಿರುವ ಸ್ಲಂಗಳ ಜನರ ಜೀವನ ಮಟ್ಟ ಸುಧಾರಿಸಲು ಸಾಕಷ್ಟು ಪ್ರಯತ್ನ ಮಾಡಲಾಗಿದೆ. ಪಾಲಿಕೆಯ ಅನುದಾನದಿಂದ ಪ್ರತಿ ಭಾರಿ ಇಂತಿಷ್ಟು ಮನೆಗಳನ್ನು ನಿರ್ಮಿಸಿ ನೆಲೆ ಇಲ್ಲದವರಿಗೆ ಸೂರು ಕಲ್ಪಿಸಿ ಅದರಲ್ಲೇ ತೃಪ್ತಿ ಕಾಣುತ್ತಿದ್ದೇವೆ ಎಂದು ಹೇಳಿದರು.

ಕೇಂದ್ರ, ರಾಜ್ಯ ಸರ್ಕಾರ ಕೂಡ ಪ್ರತಿಯೊಬ್ಬ ಪ್ರಜೆಗೂ ಸೂರು ಕಲ್ಪಿಸುವ ಮಹಾ ಯೋಜನೆಯನ್ನು ಆರಂಭಿಸಿದೆ. ದೇಶದ ಪ್ರಗತಿಗೆ ಎಲ್ಲಾಸರ್ಕಾರದ ಅಂಗಗಳೂ ಜತೆಗೂಡಬೇಕು. ಆಗ ಬೆಂಗಳೂರಿನಲ್ಲಿರುವ ಕೊಳಗೇರಿಗಳೂ ಶೀಘ್ರದಲ್ಲೇ ಹೊಸ ರೂಪ ಸಿಗಲಿದೆ ಎಂದರು. ಇಲ್ಲಿ ನಿರ್ಮಿಸಿರುವ ಮನೆಗಳುಸುಸಜ್ಜಿತವಾಗಿದೆ. ಹಾಲ್, ರೂಂ,ಅಡುಗೆ ಮನೆ, ಟಾಯ್ಲೆಟ್ ಇದ್ದ ಎಲ್ಲಾ ಮನೆಗೂ ಸೋಲಾರ್ ಬಿಸಿ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.

ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಸಹ ಪೂರ್ಣ ಸಹಕಾರ ನೀಡಿದ್ದು , ಫೆ.2ರಂದು ಎಲ್ಲಾ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಿ ಮನೆ ಹಸ್ತಾಂತರ ಮಾಡಲಾಗುವುದು ಎಂದು ಜೈಪಾಲ್ ಹೇಳಿದರು. ಇದರ ಜತೆಗೆ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿಮತ್ತು ನೆರವಾಗುವ ಸಲುವಾಗಿ ಅಂಗನವಾಡಿ ಕೇಂದ್ರವನ್ನು ಕೂಡ ಸ್ಥಾಪಿಸಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಎದುರಾಗಬಾರದೆಂದು ವಾಟರ್ ಪ್ಲ್ಯಾಂಟ್ ಕೂಡ ನಿರ್ಮಿಸಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಕೂಡ ಕಲ್ಪಿಸಿಕೊಡಲಾಗಿದೆ.

ಇಡೀ ಬೆಂಗಳೂರಿನಲ್ಲಿ ವಿನೂತನ ಪ್ರಯತ್ನವಾಗಿದೆ. ಇದನ್ನು ಸದುಪಯೋಗ ಪಡಿಸಿಕೊಂಡು ಇಲ್ಲಿನ ಜನರು ಮನೆ ಪಡೆದ ಜನರು ನೆಮ್ಮದಿಯ ಜೀವನದ ಜತೆಗೆ ಆರ್ಥಿಕವಾಗಿ ಬೆಳೆದರೆ ನಮ್ಮ ಈ ಸೇವೆ ನಿಜಕ್ಕೂ ಸಾರ್ಥಕವಾಗುತ್ತದೆ ಎಂದು ಜೈಪಾಲ್ ತಿಳಿಸಿದರು.

Facebook Comments