ಇಕ್ಕಟ್ಟಿಗೆ ಸಿಲುಕಿದ ಸಿಎಂ ಬೊಮ್ಮಾಯಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.11- ಸಚಿವ ಸಂಪುಟ ರಚನೆಯಾಗಿ, ಖಾತೆಗಳು ಹಂಚಿಕೆಯಾದ ಬಳಿಕ ಬಿಜೆಪಿಯಲ್ಲಿ ಹೆಚ್ಚಿರುವ ಅಸಮಾಧಾನ, ಅತೃಪ್ತಿ ಮುಖ್ಯಮಂತ್ರಿಗೆ ಬಸವರಾಜ ಬೊಮ್ಮಾಯಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇತ್ತ ಎಂಟಿಬಿ ನಾಗರಾಜ್ ಹಾಗೂ ಆನಂದ್ ಸಿಂಗ್ ಖಾತೆ ಬಗ್ಗೆ ಕ್ಯಾತೆ ತೆಗೆದಿದ್ದರೆ, ಅತ್ತ ಸಚಿವ ಸ್ಥಾನ ಸಿಗದಿದ್ದಕ್ಕೆ ಮುನಿಸಿಕೊಂಡಿರುವ ಬಿಜೆಪಿ ಶಾಸಕರು ಹೈಕಮಾಂಡ್ ಭೇಟಿಗೆ ತೆರಳಿರುವುದು ತಲೆ ನೋವಾಗಿ ಪರಿಣಮಿಸಿದೆ.

ಸಚಿವ ಸ್ಥಾನ ಕೈ ತಪ್ಪಿದ್ದರಿಂದ ಅಸಮಾಧಾನ ಗೊಂಡಿರುವ ಸಿ.ಪಿ. ಯೋಗೀಶ್ವರ್, ಆರ್. ಶಂಕರ್, ಶ್ರೀಮಂತ ಪಾಟೀಲ್ ಅವರು ದೆಹಲಿ ಯಾತ್ರೆ ಕೈಗೊಂಡಿದ್ದಾರೆ. ಅವರೊಂದಿಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ತೆರಳಿರುವುದು ಕುತೂಹಲ ಕೆರಳಿಸಿದೆ. ಇದರ ಜೊತೆಗೆ ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ಕೈ ತಪ್ಪಿರುವ ಹಿನ್ನೆಲೆಯಲ್ಲಿ ಎಂ.ಪಿ. ರೇಣುಕಾಚಾರ್ಯ ಕೂಡ ನವದೆಹಲಿಗೆ ದೌಡಾಯಿಸಿದ್ದಾರೆ. ಅವರ ಜೊತೆ ಸಚಿವ ಶಂಕರ್ ಪಟೇಲ್ ಮುನೇನಕೊಪ್ಪ ತೆರಳಿರುವುದು ಬಿಜೆಪಿಯಲ್ಲಿ ಎಲ್ಲವೂ ನೆಟ್ಟಗಿಲ್ಲ ಎಂಬುದನ್ನು ಸಾಬೀತುಪಡಿಸಿದೆ.

ಸರ್ಕಾರ ರಚನೆಗೆ ಕಾರಣರಾದ ತಮ್ಮನ್ನು ಸಂಪುಟದಿಂದ ಕೈಬಿಟ್ಟಿದ್ದರಿಂದ ಅಸಮಾಧಾನ ಗೊಂಡಿರುವ ಇವರುಗಳು, ವರಿಷ್ಠರನ್ನು ಭೇಟಿ ಮಾಡಿ ಸಚಿವ ಸ್ಥಾನ ನೀಡುವಂತೆ ಕೋರಲಿದ್ದಾರೆ ಎಂದು ಹೇಳಲಾಗಿದೆ. ಸಚಿವ ಸಂಪುಟ ರಚನೆ ಸಂದರ್ಭದಲ್ಲಿ ತಮ್ಮ ಸಹೋದರ ಬಾಲಚಂದ್ರ ಜಾರಕಿಹೊಳಿಗೆ ಸ್ಥಾನ ನೀಡಿಲ್ಲ. ಜೊತೆಗೆ ತಮಗೆ ಆಪ್ತರಾದ ಶ್ರೀಮಂತ ಪಾಟೀಲ್ ಅವರನ್ನು ಸಂಪುಟದಿಂದ ಕೈಬಿಟ್ಟಿರುವುದಕ್ಕೆ ಆಕ್ರೋಶಗೊಂಡಿರುವ ರಮೇಶ್‍ಜಾರಕಿಹೊಳಿ, ಕೊಟ್ಟ ಮಾತಿನಂತೆ ನಡೆದುಕೊಳ್ಳಿ. ಖಾಲಿ ಇರುವ 4 ಸಚಿವ ಸ್ಥಾನಗಳನ್ನು ತಮ್ಮ ಆಪ್ತರಿಗೆ ನೀಡುವಂತೆ ವರಿಷ್ಠರ ಮೇಲೆ ಒತ್ತಡ ಹೇರಲಿದ್ದಾರೆಂದು ತಿಳಿದು ಬಂದಿದೆ.

ದೆಹಲಿಯಲ್ಲಿರುವ ರಮೇಶ್ ಜಾರಕಿಹೊಳಿ ತಮ್ಮ ಸಹೋದರ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಯಾವ ಕಾರಣಕ್ಕಾಗಿ ಸಂಪುಟಕ್ಕೆ ಸೇರಿಸಿಕೊಂಡಿಲ್ಲ ಎಂಬುದನ್ನು ತಿಳಿದುಕೊಳ್ಳಲು ಬಯಸುತ್ತಿದ್ದಾರೆ. ಸಿಡಿ ಪ್ರಕರಣದಲ್ಲಿ ತಮಗೆ ಕ್ಲೀನ್‍ಚಿಟ್ ದೊರೆಯುವವರೆಗೂ ಬಾಲಚಂದ್ರ ಜಾರಕಿಹೊಳಿ ಅವರನ್ನು ಬೊಮ್ಮಾಯಿ ಸಂಪುಟದಲ್ಲಿ ಇರಿಸಿಕೊಳ್ಳಬೇಕೆಂದು ರಮೇಶ್ ಜಾರಕಿಹೊಳಿ ಆಗ್ರಹಿಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

ಈ ನಡುವೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಕೆಳಗಿಳಿಸಿ ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ತಮ್ಮನ್ನು ಹಾಗೂ ತಮ್ಮ ಕುಟುಂಬವನ್ನು ಈ ಬಾರಿಯ ಸಂಪುಟ ರಚನೆ ವೇಳೆ ಸಂಪೂರ್ಣವಾಗಿ ನಿರ್ಲಕ್ಷ್ಯಿಸಿರುವುದು ರಮೇಶ್ ಜಾರಕಿಹೊಳಿ ಅವರ ಕಣ್ಣು ಕೆಂಪಗಾಗುವಂತೆ ಮಾಡಿದೆ ಎಂದು ಹೇಳಲಾಗುತ್ತಿದೆ. ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಪಕ್ಷದ ವಿದ್ಯಮಾನಗಳ ಬಗ್ಗೆ ಉಸ್ತುವಾರಿ ಅರುಣ್ ಸಿಂಗ್ ಮಾಹಿತಿ ಪಡೆದುಕೊಂಡಿದ್ದಾರೆ.

ಆನಂದ್ ಸಿಂಗ್ ರಾಜೀನಾಮೆ ನಿರ್ಧಾರ ವಿಚಾರ, ಎಂಟಿಬಿ ಒತ್ತಡ, ರಾಮದಾಸ್ ಮುನಿಸು, ಶ್ರೀರಾಮುಲು ಬೇಸರ, ಅಪ್ಪಚ್ಚು ರಂಜನ್ ಬೆಂಬಲಿಗರ ಪ್ರತಿಭಟನೆ ಈ ಎಲ್ಲಾ ವಿದ್ಯಮಾನಗಳ ಮಾಹಿತಿಯನ್ನು ಅರುಣ್‍ಸಿಂಗ್ ಅವರು ಸಿಎಂ, ರಾಜ್ಯ ಬಿಜೆಪಿ ಘಟಕದಿಂದ ಪಡೆದಿದ್ದಾರೆ.

ಈ ಹಿನ್ನೆಲೆಯಲ್ಲಿ ಸದ್ಯ ರಾಜ್ಯ ಬಿಜೆಪಿಯಲ್ಲೀಗ ವರಿಷ್ಠರಿಗೆ 3 ತಲೆನೋವು ಶುರುವಾಗಿದೆ. ಆನಂದ್ ಸಿಂಗ್, ಎಂಟಿಬಿ ನಾಗರಾಜ್, ಶ್ರೀರಾಮುಲು ಈ ಮೂವರು ಬಿಜೆಪಿಯಲ್ಲಿ ಹಲವು ಬೆಳವಣಿಗೆಗಳಿಗೆ ಕಾರಣರಾಗಿದ್ದಾರೆ. ಯಡಿಯೂರಪ್ಪ ರಾಜೀನಾಮೆ ಬಳಿಕ ಪಕ್ಷದಲ್ಲಿ ಹೇಳುವವರಿಲ್ಲ ಕೇಳುವವರಿಲ್ಲ ಎಂಬಂತಾಗಿದೆ. ರಾಜ್ಯ ಬಿಜೆಪಿ ಬಿಕ್ಕಟ್ಟಿನ ಬಗ್ಗೆ ವರಿಷ್ಠರೂ ಮËನವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಇಕ್ಕಟ್ಟಿಗೆ ಸಿಲುಕಿದ್ದಾರೆ.

Facebook Comments