ಹೊಸ ಮಾದರಿ SSLC ಪರೀಕ್ಷೆಗೆ ಸಕಲ ಸಿದ್ಧತೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.17- ಕೋವಿಡ್ – 19 ಆತಂಕದ ನಡುವೆಯೇ ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟ ಎನಿಸಿದ ಎಸ್ಸೆಸ್ಸೆಲ್ಸಿ ಪರೀಕ್ಷೆಯು ಸೋಮವಾರದಿಂದ ಆರಂಭವಾಗಲಿದೆ. ಈ ವರೆಗೂ 6 ದಿನಗಳ ಕಾಲ ನಡೆಯುತ್ತಿದ್ದ ಪರೀಕ್ಷೆ ಇದೇ ಮೊದಲ ಬಾರಿಗೆ ಕೇವಲ 2 ದಿನ ಮಾತ್ರ ನಡೆಯುತ್ತಿರುವುದು ವಿಶೇಷವಾಗಿದೆ.

ಸೋಮವಾರ ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಮೊದಲ ಪತ್ರಿಕೆ ಹಾಗೂ ಜುಲೈ 22ರಂದು ಭಾಷಾ ವಿಷಯಗಳಾದ ಕನ್ನಡ, ಇಂಗ್ಲೀಷ್, ಹಿಂದಿ ಸೇರಿ ಎರಡನೇ ಪತ್ರಿಕೆಗೆ ಪರೀಕ್ಷೆ ನಡೆಯಲಿದೆ. ಈ ಬಾರಿ ಬಹು ಆಯ್ಕೆ ಮಾದರಿಯ ಪ್ರಶ್ನೆಗಳು ಇರುತ್ತದೆ.

ಪ್ರಸಕ್ತ ಸಾಲಿನಲ್ಲಿ 8,76,581 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಪರೀಕ್ಷೆ ನಡೆಸುವ ಸಂಬಂಧ ಆರೋಗ್ಯ ಇಲಾಖೆ ಈಗಾಗಲೇ ಎಸ್‍ಒಪಿ ನೀಡಿದೆ. ಜಿಲ್ಲಾಧಿಕಾರಿಗಳು, ಸಿಇಒ ಹಾಗೂ ಖಜಾನೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಮಾರ್ಗಸೂಚಿಗಳನ್ನು ಪಾಲನೆ ಮಾಡುವಂತೆ ಸೂಚನೆ ನೀಡಲಾಗಿದೆ. ಈ ಬಾರಿ ಪರೀಕ್ಷಾ ಮೇಲ್ವಿಚಾರಕರು ಎನ್95 ಮಾಸ್ಕ್ ಧರಿಸಬೇಕು, ಜೊತೆಗೆ ಅಗತ್ಯಬಿದ್ದರೆ ಫೇಸ್‍ಶೀಲ್ಡ್ ಕೂಡ ಹಾಕಬೇಕು, ಕೊಠಡಿ ಮೇಲ್ವಿಚಾರಕರು ಕಡ್ಡಾಯವಾಗಿ ಒಂದು ಡೋಸಾದರೂ ಕೋವಿಡ್ ಲಸಿಕೆ ಪಡೆದಿರಬೇಕು.

ಇನ್ನು ಪರೀಕ್ಷಾ ಕೇಂದ್ರದ ಸುತ್ತ 200 ಮೀ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಯಲ್ಲಿರುತ್ತದೆ. ಒಂದು ಕೊಠಡಿಯಲ್ಲಿ 12 ಮಕ್ಕಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ.  ಪ್ರಸ್ತುತ ರಾಜ್ಯಾದ್ಯಂತ 73,066 ಪರೀಕ್ಷಾ ಕೇಂದ್ರಗಳಿರುತ್ತವೆ. ಪ್ರತಿ ಕೇಂದ್ರದಲ್ಲೂ ಆರೋಗ್ಯ ತಪಾಸಣಾ ಕೇಂದ್ರವಿರುತ್ತದೆ. ಪರೀಕ್ಷಾ ವೀಕ್ಷಕರು ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿಯನ್ನು ಅನುಸರಿಸಬೇಕು.

ಸ್ಕೌಟ್ಸ್ ಅಂಡ್ ಗೈಡ್‍ನ ಸಹಕಾರವಿರಲಿದ್ದು, ಆಶಾ ಕಾರ್ಯಕರ್ತೆಯರು, ಅರೆ ವೈದ್ಯಕೀಯ ಸಿಬ್ಬಂದಿ ಇರುತ್ತಾರೆ. ಪೊಲೀಸ್ ಭದ್ರತೆ ಸಹ ಇರಲಿದೆ. ಕೊರೋನಾ ಸೋಂಕಿತ ವಿದ್ಯಾರ್ಥಿಗಳಿಗೂ ಪರೀಕ್ಷೆಯನ್ನು ಕೋವಿಡ್ ಕೇರ್ ಸೆಂಟರ್‍ನಲ್ಲಿ ಬರೆಯಲು ಅವಕಾಶ ಮಾಡಿಕೊಡಲಾಗಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಎನ್-95 ಮಾಸ್ಕ್ ನೀಡಲಾಗುವುದು.

# ಉಚಿತ ಸಾರಿಗೆ ಸೇವೆ:
ಎಸ್‍ಎಸ್‍ಎಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಕ್ಕಾಗಿ ಪರೀಕ್ಷೆಯ ದಿನಗಳಂದು ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.ಎಸ್‍ಎಸ್‍ಎಲ್ಸಿ ವಿದ್ಯಾರ್ಥಿಗಳು ತಮ್ಮ ವಾಸ ಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಉಚಿತ ಪ್ರಯಾಣ ಮಾಡಬಹುದಾಗಿದೆ. ಪರೀಕ್ಷಾ ಪ್ರವೇಶಪತ್ರ ತೋರಿಸುವ ಮೂಲಕ ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಯಾವುದೇ ರೀತಿಯ ಶುಲ್ಕ ತೆರಬೇಕಾಗಿಲ್ಲ. ಸಾಮಾನ್ಯ ಹಾಗೂ ವೇಗಧೂತ ಬಸ್‍ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಪರೀಕ್ಷೆ ಮುಗಿಸಿ ವಾಪಾಸು ಮನೆಗೆ ಬರುವಾಗಲೂ ಇದು ಅನ್ವಯವಾಗಲಿದೆ. ಮನೆಯಿಂದ ಪರೀಕ್ಷಾ ಕೇಂದ್ರಕ್ಕೆ ಹಾಗೂ ಪರೀಕ್ಷಾ ಕೇಂದ್ರದಿಂದ ಮರಳಿ ಮನೆಗೆ ಬರುವಾಗ ಪರೀಕ್ಷಾ ಪ್ರಮಾಣ ಪತ್ರ ತೋರಿಸಿ ಉಚಿತ ಪ್ರಯಾಣ ಸೌಲಭ್ಯ ಪಡೆಯಬಹುದಾಗಿದೆ. ಈ ಸಂದರ್ಭದಲ್ಲಿ ಎಲ್ಲಾ ರೀತಿಯಲ್ಲೂ ಕೊರೊನಾ ನಿಯಮಾವಳಿಗಳನ್ನು ಪಾಲಿಸುವುದು ಅಗತ್ಯವಾಗಿದೆ.

Facebook Comments