ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಚರ್ಚೆಗೆ ಸಿದ್ದ : ಸಿಎಂ ಬೊಮ್ಮಾಯಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.15- ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ರಾಜ್ಯ ಸರ್ಕಾರ ಎಲ್ಲರ ಜೊತೆ ಚರ್ಚಿಸಲು ಸಿದ್ದವಿದೆ. ಇದರ ಬಗ್ಗೆ ಯಾರೊಬ್ಬರು ಆತಂಕಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಯ ನೀಡಿದ್ದಾರೆ.  ಎಂಜಿನಿಯರ್‍ಗಳ ದಿನದ ಅಂಗವಾಗಿ ಕೆ.ಆರ್.ವೃತ್ತದಲ್ಲಿ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಇಂದಿನ ಯುವ ಜನಾಂಗವನ್ನು ಸ್ಪರ್ಧಾತ್ಮಕ ಯುಗಕ್ಕೆ ಸಜ್ಜುಗೊಳಿಸಬೇಕು. ಆ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಿದ್ದಪಡಿಸಲಾಗಿದೆ. ಹಲವಾರು ಶಿಕ್ಷಣ ತಜ್ಞರು ಹಾಗೂ ವಿಶ್ವವಿದ್ಯಾನಿಲಯಗಳ ಕುಲಪತಿಗಳು, ಉಪಕುಲಪತಿಗಳು ಮತ್ತು ತಜ್ಞರು ಸೇರಿದಂತೆ ಮತ್ತಿತರ ಜೊತೆ ಚರ್ಚಿಸಿದ ನಂತರವೇ ಇದನ್ನು ಅನುಷ್ಠಾನ ಮಾಡಲಾಗಿದೆ ಎಂದು ಹೇಳಿದರು.
ಕೆಲವರು ಅನಗತ್ಯವಾಗಿ ಇದರ ಬಗ್ಗೆ ಗೊಂದಲ ಸೃಷ್ಟಿಸುತ್ತಿದ್ದಾರೆ.

ನೂತನ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳು ತಮಗೆ ಬೇಕಾದ ಶಿಕ್ಷಣವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ವಿದ್ಯಾರ್ಥಿಗಳು ಅಥವಾ ಫೋಷಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಯಾರಿಗಾದರೂ ಈ ಬಗ್ಗೆ ಗೊಂದಲವಿದ್ದರೆ ಸರ್ಕಾರ ಮುಕ್ತ ಚರ್ಚೆಗೆ ಸಿದ್ದವಿದೆ. ಬದಲಾದ ಕಾಲಕ್ಕೆ ತಕ್ಕಂತೆ ನಾವು ಶಿಕ್ಷಣವನ್ನು ಸಿದ್ದಪಡಿಸಬೇಕು. ಇವೆಲ್ಲವನ್ನು ಆಲೋಚಿಸಿ ಸರ್ಕಾರ ಶಿಕ್ಷಣ ನೀತಿಯನ್ನು ರೂಪಿಸಿದೆ ಎಂದು ಸಮರ್ಥಿಸಿಕೊಂಡರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದಲ್ಲಿ ನೂತನ ಶಿಕ್ಷಣ ನೀತಿಯನ್ನು ಅಳವಡಿಸುವ ಕುರಿತಾಗಿ ಸಮಿತಿಯನ್ನು ರಚನೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ವಿಶ್ವೇಶ್ವರಯ್ಯ ಅಜರಾಮರ: ಆಧುನಿಕ ಭಾರತದ ಮಹಾಶಿಲ್ಪಿಯಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯನವರು ಶಿಕ್ಷಣ, ನೀರಾವರಿ, ವಿದ್ಯುತ್, ಕೈಗಾರಿಕೆ, ಬ್ಯಾಂಕ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗಣನೀಯವಾದ ಕೊಡುಗೆ ನೀಡಿದ್ದಾರೆ. ಅವರ ಕೊಡುಗೆಗಳು ಎಂದೆಂದಿಗೂ ಅಜರಾಮರ ಎಂದು ಬಣ್ಣಿಸಿದರು.

ದೇಶದ ಆರ್ಥಿಕತೆಯನ್ನು ನಿಜವಾಗಿಯೂ ಶ್ರಮಿಕರೇ ತುಂಬುವರು. ಕಾರ್ಮಿಕರು ಸೇರಿದಂತೆ ಹಲವರು ರಾಷ್ಟ್ರ ಆರ್ಥಿಕತೆಯ ಭದ್ರಬುನಾದಿ. ವಿಶ್ವೇಶ್ವರಯ್ಯನವರು ಕೂಡ ಇದೇ ವರ್ಗಕ್ಕೆ ಸೇರಿದವರು ಎಂದರು. ಕೇವಲ ಹುಟ್ಟುಹಬ್ಬವನ್ನು ಆಚರಣೆ ಮಾಡಿದರೆ ಅರ್ಥ ಬರುವುದಿಲ್ಲ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು. ನಮ್ಮ ಸರ್ಕಾರ ವಿಶ್ವೇಶ್ವರಯ್ಯನವರ ಚಿಂತನೆಗಳನ್ನು ಅಳವಡಿಸಿಕೊಂಡು ಮುನ್ನಡೆಯಲಿದೆ ಎಂದು ಹೇಳಿದರು. ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ್ ಸೇರಿದಂತೆ ಬಿಬಿಎಂಪಿ ಅಧಿಕಾರಿಗಳು ಉಪಸ್ಥಿತರಿದ್ದರು.

Facebook Comments