ಹೊಸ ನರ್ಸಿಂಗ್‍ಗಳಲ್ಲಿ ಕೌನ್ಸಿಲ್ ಮಾನದಂಡ ಲೋಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.19- ರಾಜ್ಯದಲ್ಲಿ ಹೊಸದಾಗಿ ಅನುಮತಿ ನೀಡಿರುವ ನರ್ಸಿಂಗ್ ಕಾಲೇಜುಗಳು ಭಾರತೀಯ ನರ್ಸಿಂಗ್ ಕೌನ್ಸಿಲ್‍ನ ಮಾನದಂಡದ ಅನುಸಾರ ಮೂಲಸೌಲಭ್ಯ, ಗುಣಮಟ್ಟ ಹೊಂದಿದ್ದರೆ ನಾನು ವಿಧಾಪರಿಷತ್‍ನ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಮರಿತಿಬ್ಬೇಗೌಡ ಅವರು ಸವಾಲು ಹಾಕಿದರು. ವಿಧಾನಪರಿಷತ್‍ನಲ್ಲಿ ನಿನ್ನೆಯಿಂದ ಜೆಡಿಎಸ್ ನಡೆಸುತ್ತಿರುವ ಧರಣಿಯ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ನೀಡಿದ ಉತ್ತರಕ್ಕೆ, ಧರಣಿಯಿಂದ ತಾವೊಬ್ಬರೇ ವಾಪಸ್ ಬಂದು ಪ್ರತ್ಯುತ್ತರ ನೀಡಿದ ಅವರು, ಸಚಿವರು ಉನ್ನತಾಧಿಕಾರ ಸಮಿತಿ ಶಿಫಾರಸು ಮಾಡಿದ 47 ಕಾಲೇಜುಗಳಿಗೆ ಅನುಮತಿ ನೀಡಿದ್ದೇನೆ.

ಅವುಗಳನ್ನಷ್ಟೇ ಅಲ್ಲದೆ ರಾಜ್ಯದಲ್ಲಿರುವ ಎಲ್ಲಾ 600 ನರ್ಸಿಂಗ್ ಕಾಲೇಜುಗಳ ಗುಣಮಟ್ಟದ ಬಗ್ಗೆ ಕೂಡ ತನಿಖೆ ಮಾಡಿಸೋಣ ಎಂದು ಹೇಳಿ ನಮ್ಮನ್ನು ಹೆದರಿಸುವ ಪ್ರಯತ್ನ ಮಾಡಿದ್ದಾರೆ. ಆ 600 ಕಾಲೇಜುಗಳಲ್ಲಿ ನಮ್ಮ ಸಂಸ್ಥೆಗಳು ಇರಬಹುದು ಎಂಬ ಅನುಮಾನ ಇರುವಂತಿದೆ. ಆದರೆ ನಾವು ಇದಕ್ಕೆಲ್ಲ ಹೆದರುವುದಿಲ್ಲ ಎಂದು ಪ್ರತಿ ಹೇಳಿದರು.

ನರ್ಸಿಂಗ ಕಾಲೇಜು ಆರಂಭಕ್ಕೆ 120 ಅರ್ಜಿಗಳು ಬಂದಿದ್ದವು. ಅದರಲ್ಲಿ ಸಿಂಡಿಕೇಟ್ ಸಮಿತಿ 62 ಕಾಲೇಜುಗಳಿಗೆ ಅನುಮತಿ ನೀಡಲು ಶಿಫಾರಸು ಮಾಡಿತ್ತು. ಅವುಗಳ ಪೈಕಿ ಶಕ್ಯರಾದ 47 ಕಾಲೇಜುಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಉಳಿದ ಅರ್ಜಿಗಳನ್ನು ರದ್ದುಪಡಿಸ ಲಾಗಿದೆ. ಸಿಂಡಿಕೇಟ್ ಮತ್ತು ಸೆನಟ್ ಸಮಿತಿ ಸ್ಥಳ ಪರಿಶೀಲನೆ ಮಾಡುತ್ತವೆ. ಉನ್ನಾಧಿಕಾರ ಸಮಿತಿ ಕೇವಲ ದಾಖಲೆಗಳನ್ನು ಮಾತ್ರ ಪರಿಶೀಲನೆ ಮಾಡುತ್ತದೆ ಎಂದರು.

ಈ ಹಿಂದೆ ಡಾಕ್ಟರ್ ಪದವಿ ಇಲ್ಲದವರು ಸಚಿವರಾಗಿ ಸಾಕಷ್ಟು ಅದ್ವಾನ ಮಾಡಿದ್ದಾರೆ. ನಾನು ತಜ್ಞನಿದ್ದೇನೆ. ಹಾಗಾಗಿ ವೈದ್ಯಕೀಯ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆಗೆ ಕ್ರಮ ತೆಗೆದುಕೊಂಡಿದ್ದೇನೆ ಎಂದು ಒಂದಿಷ್ಟು ಪಟ್ಟಿಗಳನ್ನು ಸಚಿವರು ಓದಿದ್ದಾರೆ. ಆದರೆ ಒಂದೂ ಜಾರಿಯಾಗಿಲ್ಲ. ಅದೆಲ್ಲ ಹಣ ವಸೂಲಿ ಮಾಡಲಿಕ್ಕೆ ಮಾಡಿದ ಪಟ್ಟಿ ಎಂದು ಮರಿತಿಬ್ಬೇಗೌಡ ಗಂಭೀರ ಆರೋಪ ಮಾಡಿದರು.

ಈ ವೇಳೆ ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿ ಸದಸ್ಯರ ಮಾತನ್ನು ತೀವ್ರವಾಗಿ ವಿರೋಧಿಸಿದರು. ಸದಸ್ಯರಾದ ಸುನೀಲ್ ವಲ್ಲಾಪುರೆ, ಸಭಾನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಮತ್ತಿತರರು ಸಚಿವರ ನೆರವಿಗೆ ಬಂದರು. ಆದರೆ ಮರಿತಿಬ್ಬೇಗೌಡರು ತಮ್ಮ ಆರೋಪವನ್ನು ಮತ್ತಷ್ಟು ತೀವ್ರಗೊಳಿಸಿ, ನಾವು ಅಕ್ರಮಗಳ ತನಿಖೆಗೆ ಸದನ ಸಮಿತಿ ರಚಿಸಲು ಕೇಳುತ್ತಿದ್ದೇವೆ. ಶಾಸಕ ಸಮಿತಿ ಮೇಲೆ ಸಚಿವರಿಗೆ ನಂಬಿಕೆ ಇಲ್ಲ. ಅಧಿಕಾರಿಗಳ ಮತ್ತು ತಜ್ಞರ ಸಮಿತಿ ಮೇಲೆ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಇವರು ಹೇಳುವ ತಜ್ಞರೇ ಈ ಎಲ್ಲಾ ಅಕ್ರಮಗಳಿಗೆ ಮೂಲ ಕಾರಣಕರ್ತರು ಮತ್ತು ಅವರ ನೇತೃತ್ವದಲ್ಲಿ ತನಿಖೆ ಮಾಡಿಸುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಸಚಿವ ಸುಧಾಕರ್ ಅವರನ್ನು ಮಾತಿನ ಮಧ್ಯೆ ಮರಿತಿಬ್ಬೇ ಗೌಡರು ಭ್ರಷ್ಟ ಎಂದು ಕರೆದಿದ್ದಕ್ಕೆ ಕೋಲಾಹಲ ಉಂಟಾಯಿತು.ಸ ತ್ಯ ಹರಿಶ್ಚಂದ್ರರು ತಮ್ಮ ಮನೆಯಲ್ಲಿಯೇ ಇದ್ದಾರೆ ಎಂಬಂತೆ ಮಾತನಾಡುತ್ತಾರೆ. ಹಾಗಾದರೆ ಸಮಿತಿ ರಚನೆ ಮಾಡಲಿ ಇವರು ಅನುಮತಿ ನೀಡಿರುವ ಕಾಲೇಜುಗಳಲ್ಲಿ ಮೂಲಸೌಲಭ್ಯ ಮತ್ತು ಗುಣಮಟ್ಟದ ಶಿಕ್ಷಣ ಸಿಗುವುದಾದರೆ ನಾನು ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದರು.

Facebook Comments