ಡಿಸೆಂಬರ್‌ನಲ್ಲಿ ಹೊಸ ಸಂಸತ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ, ಪ್ರತಿ ಕಚೇರಿಗೂ ಡಿಜಿಟಲ್ ಟಚ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ನ.25- ಹೊಸ ಸಂಸತ್ ಭವನ ಕಟ್ಟಡ ನಿರ್ಮಾಣಕ್ಕೆ ಡಿಸೆಂಬರ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸಂಸತ್ ಭವನದ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿರುವ ಮಹಾತ್ಮ ಗಾಂಧಿ ಹಾಗೂ ಬಿ.ಆರ್.ಅಂಬೇಡ್ಕರ್ ಸೇರಿದಂತೆ ಐವರು ಮಹನೀಯರ ಪ್ರತಿಮೆಗಳನ್ನು ಹೊಸ ಸಂಸತ್ ಭವನದ ಆವರಣದಲ್ಲಿ ಪುನರ್ ಪ್ರತಿಷ್ಠಾಪಿಸಲಾಗುವುದು ಎಂದು ತಿಳಿದು ಬಂದಿದೆ.

ರಾಷ್ಟ್ರಪತಿ ಮತ್ತು ರಾಜ್‍ಪತ್ ಕೂಗಳತೆ ದೂರದಲ್ಲಿ ನಿರ್ಮಿಸಲುದ್ದೇಶಿಸಿರುವ ಹೊಸ ಸಂಸತ್ ಭವನ ಕಟ್ಟಡದ ನಿರ್ಮಾಣ ಕಾರ್ಯ 21 ತಿಂಗಳೊಳಗೆ ಪೂರ್ಣಗೊಳ್ಳಲಿದೆ.  ಹೊಸ ಸಂಸತ್ ಭವನ ಕಟ್ಟಡ ನಿರ್ಮಾಣಕ್ಕೆ ಡಿ.10ರಂದು ಶಂಕುಸ್ಥಾಪನೆ ನೆರವೇರುವ ಸಾಧ್ಯತೆ ಇದೆ.

ಒಂದು ವೇಳೆ ಪ್ರಧಾನಮಂತ್ರಿಗಳ ಸಮಯ ನಿಗದಿಯಾಗದಿದ್ದರೆ ಶಂಕುಸ್ಥಾಪನೆ ದಿನಾಂಕವನ್ನು ಮುಂದೂಡುವ ಸಾಧ್ಯತೆ ಇದೆ. ಹೊಸ ಭವನದಲ್ಲಿ ಎಲ್ಲಾ ಸಂಸದರಿಗೂ ಪ್ರತ್ಯೇಕ ಕಚೇರಿಗಳನ್ನು ನಿರ್ಮಿಸಲಾಗಿದ್ದು , ಪ್ರತಿಯೊಂದು ಕಚೇರಿಗೂ ಡಿಜಿಟಲ್ ಟಚ್ ನೀಡಲಾಗಿದ್ದು , ಎಲ್ಲಾ ಕಚೇರಿಗಳು ಪೇಪರ್‍ಲೆಸ್ ಚಟುವಟಿಕೆಗಳಿಂದ ಕೂಡಿರುತ್ತವೆ.

ಹೊಸ ಭವನದಲ್ಲಿ ದೇಶದ ಪ್ರಜಾಪ್ರಭುತ್ವ ಹಿರಿಮೆಯನ್ನು ಎತ್ತಿ ಸಾರುವ ಉದ್ದೇಶದಿಂದ ಬೃಹತ್ ಸಂವಿಧಾನ ಸಭಾಂಗಣ ನಿರ್ಮಾಣ ಗೊಳ್ಳುತ್ತಿದ್ದು , ಸಭಾಂಗಣದಲ್ಲಿ ಎಲ್ಲಾ ಸಂಸದರಿಗೂ ಪ್ರತ್ಯೇಕ ಲಾಂಜ್, ಗ್ರಂಥಾಲಯ, ಪಾರ್ಕಿಂಗ್ ಸ್ಥಳ, ಊಟದ ಹಾಲ್, ಬಹು ಉದ್ದೇಶಿತ ಸಮಿತಿ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ.

ಭವನದ ಗೇಟ್ ನಂ.1 ಪ್ರವೇಶ ದ್ವಾರದಲ್ಲಿ 16 ಅಡಿ ಎತ್ತರದ ಮಹಾತ್ಮ ಗಾಂಯವರು ಧ್ಯಾನಮಗ್ನರಾಗಿ ಕುಳಿತಿರುವಂತಹ ಪ್ರತಿಮೆ ಪ್ರತಿಷ್ಠಾಪಿಸಲಾಗುತ್ತಿದೆ. ರಾಷ್ಟ್ರಪಿತನ ಪ್ರತಿಮೆ ಸಂಸತ್ ಭವನಕ್ಕೆ ಪ್ರವೇಶಿಸುವವರಿಗೆ ಆಹ್ವಾನ ನೀಡುವಂತೆ ನಿರ್ಮಿಸಲಾಗಿದ್ದು, ಪ್ರತಿಮೆ ಆವರಣದಲ್ಲೇ ಸಂಸದರು ಧರಣಿ ನಡೆಸಲು ಅವಕಾಶ ಕಲ್ಪಿಸಲಾಗುತ್ತಿದೆ.

ಹಾಲಿ ಸಂಸತ್ ಭವನಕ್ಕೆ 1921 ಫೆ.12ರಂದು ಶಂಕುಸ್ಥಾಪನೆ ನೆರವೇರಿಸಿ 83 ಲಕ್ಷ ಖರ್ಚು ಮಾಡಿ ಆರು ವರ್ಷ ಶ್ರಮಿಸಿ ಕಟ್ಟಡ ನಿರ್ಮಾಣ ಪೂರ್ಣಗೊಳಿಸಿ 1927 ಜ.18ರಂದು ಅಂದಿನ ಗೌರ್ನರ್ ಜನರಲ್ ಲಾರ್ಡ್ ಇರ್ವಿನ್ ಸಂಸತ್ ಭವನವನ್ನು ಉದ್ಘಾಟಿಸಿದ್ದರು.

ಹಾಲಿ ಸಂಸತ್ ಭವನ ನಿರ್ಮಾಣಗೊಂಡು ನೂರು ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಹೊಸ ಸಂಸತ್ ಭವನ ನಿರ್ಮಾಣಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮುನ್ನುಡಿ ಬರೆಯಲಿದ್ದಾರೆ.

 

Facebook Comments