ಕೊರೋನಾ ಕಂಟ್ರೋಲ್ ಆದಮೇಲೆ ಹೊಸ ಪಡಿತರ ಚೀಟಿ ವಿತರಣೆ : ಗೋಪಾಲಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 26- ಕೊರೊನಾ ಸಾಂಕ್ರಾಮಿಕ ರೋಗ ರಾಜ್ಯದಲ್ಲಿ ನಿಯಂತ್ರಣಕ್ಕೆ ಬಂದ ನಂತರ ಹೊಸದಾಗಿ ಪಡಿತರ ಚೀಟಿ ವಿತರಣೆ ಮಾಡಲಿದ್ದೇವೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.

ಕೆಲವು ತಾಂತ್ರಿಕ ಕಾರಣ ಹಾಗೂ ಕೊರೊನಾ ಸಾಂಕ್ರಾಮಿಕ ರೋಗ ಆವರಿಸಿದ ಹಿನ್ನೆಲೆಯಲ್ಲಿ ಫಲಾನುಭವಿಗಳಿಗೆ ಪಡಿತರ ಚೀಟಿ ವಿತರಣೆ ಮಾಡುವುದು ವಿಳಂಬವಾಗಿತ್ತು. ಇದೀಗ ಕೊರೊನ ನಿಯಂತ್ರಣಕ್ಕೆ ಬಂದ ತಕ್ಷಣವೇ ಯಾರ್ಯಾರಿಗೆ ಪಡಿತರ ಚೀಟಿ ಇಲ್ಲವೂ ಅವರನ್ನು ಗುರುತಿಸಿ ನೀಡಲಾಗುವುದು ಎಂದು ಹೇಳಿದರು.

ಪಡಿತರ ಚೀಟಿ ಇಲ್ಲದವರಿಗೂ ಆಹಾರ ಧಾನಗಳನ್ನು ವಿರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಇಂದು ಮಹಾಲಕ್ಷ್ಮಿ ಲೇಔಟ್‍ನ ಕಾವೇರಿಪುರ, ಜೆ.ಸಿ.ನಗರ, ಮಹಾಲಕ್ಷ್ಮಿಪುರಂ ಸೇರಿದಂತೆ ಕೆಲವು ಪಡಿತರ ಅಂಗಡಿಗಳಿಗೆ ಖುದ್ದು ಭೇಟಿ ನೀಡಿದ ಗೋಪಾಲಯ್ಯ ಅವರು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಪಡಿತರ ಚೀಟಿ ಇಲ್ಲದವರು ಹಸಿವಿನಿಂದ ಬಳಲಬಾರದೆಂಬ ಕಾರಣಕ್ಕಾಗಿ ಹೊರ ರಾಜ್ಯದವರೇ ಇರಲಿ, ಇಲ್ಲವೇ ಇತರೆ ಯಾವುದೇ ಜಿಲ್ಲೆಯವರಾಗಲಿ ಅಂತಹವರು ತಮ್ಮ ಆಧಾರ್‍ಕಾರ್ಡ್‍ಗನ್ನು ತೋರಿಸಿ ಪಡಿತರ ಧಾನ್ಯ ಪಡೆಯಬಹುದಾಗಿದೆ.

ಯಾರೊಬ್ಬರಿಗೂ ಪಡಿತರ ಚೀಟಿ ಇಲ್ಲ ಎಂಬ ಕಾರಣಕ್ಕಾಗಿ ಆಹಾರ ಧಾನ್ಯಗಳನ್ನು ಫಲಾನುಭವಿಗಳಿಗೆ ತಡೆಯಬಾರದು ಎಂದು ಕಟ್ಟು ನಿಟ್ಟಿನ ಸೂಚನೆ ಕೊಟ್ಟರು.ಇಂದಿನಿಂದ 31ರವರೆಗೆ 5 ಕೆಜಿ ಅಕ್ಕಿ ಹಾಗೂ ಒಂದು ಕೇಜಿ ಕಡಲೆಕಾಳು ವಿತರಣೆ ಮಾಡಲಾಗುವುದು.

ಜೂನ್ 1ರಿಂದ 5 ಕೆಜಿ ಅಕ್ಕಿ 2 ಕೆಜಿ ಕಡಲೆಕಾಳನ್ನು ವಿತರಣೆ ಮಾಡಲಿದ್ದೇವೆ. ಫಲಾನುಭವಿಗಳು ಇದರ ಉಪಯೋಗ ಪಡಿಸಿಕೊಳ್ಳಬೇಕೆಂದು ಸಚಿವರು ಮನವಿ ಮಾಡಿದರು.ನಾಳೆಯಿಂದ ಬೇರೆ ಬೇರೆ ಜಿಲ್ಲಾ ಭಾಗಗಳಿಗೆ ನಾನೇ ಖುದ್ದು ಭೇಟಿ ನೀಡಿ ಪರಿಶೀಲಿಸುತ್ತೇನೆ.

ಅಕಾರಿಗಳಿಗೂ ಸಹ ಪಡಿತರ ಕೇಂದ್ರಗಳಿಗೆ ಭೇಟಿ ಕೊಡುವಂತೆ ಸೂಚನೆ ಕೊಟ್ಟಿದ್ದೇನೆ. ಪಡಿತರ ಚೀಟಿ ಹೊಂದಿಲ್ಲ ಎಂಬ ಕಾರಣಕ್ಕಾಗಿ ಆಹಾರ ಧಾನ್ಯಗಳನ್ನು ವಿತರಣೆ ಮಾಡದಿದ್ದರೆ ಅಂತಹವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.

ಈಗಾಗಲೇ ಕೇಂದ್ರ ಸರ್ಕಾರ ಅಕ್ಕಿ ಮತ್ತು ಕಡಲೆಕಾಳನ್ನು ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರದ ವತಿಯಿಂದಲೂ ವಿತರಣೆ ಮಾಡುತ್ತಿದ್ದೇವೆ. ನೀವು ಎಲ್ಲೇ ಇದ್ದರೂ ಮೊದಲು ಪಡಿತರ ಧಾನ್ಯವನ್ನು ಖರೀದಿ ಮಾಡಬೇಕು. ಹಸಿವಿನಿಂದ ಯಾರೊಬ್ಬರೂ ಬಳಲಬಾರದೆಂಬುದೇ ನಮ್ಮ ಸರ್ಕಾರದ ಉದ್ದೇಶವಾಗಿದೆ.

ಕಾರ್ಮಿಕ ಇಲಾಖೆವತಿಯಿಂದಲೂ ವಲಸೆ ಮತ್ತು ಕಾರ್ಮಿಕರಿಗೆ ಪಡಿತರ ಧಾನ್ಯ ವಿತರಣೆ ಮಾಡಿದ್ದೇವೆ. ಸಣ್ಣಪುಟ್ಟ ಗೊಂದಲಗಳಿದ್ದರೂ ಕಟ್ಟಕಡೆಯ ಮನುಷ್ಯನಿಗೂ ಪಡಿತರ ಧಾನ್ಯ ಸಿಗಲಿ ಎಂಬುದು ನಮ್ಮ ಆಶಯವಾಗಿದೆ. ಇದಕ್ಕೆ ಸಾರ್ವಜನಿಕರು ಸಹ ಕೈ ಜೋಡಿಸಬೇಕೆಂದು ಗೋಪಾಲಯ್ಯ ಮನವಿ ಮಾಡಿದರು.

ಇನ್ನು ತಪಾಸಣೆ ವೇಳೆ ಸಚಿವ ಗೋಪಾಲಯ್ಯ ಅವರು ಪಡಿತರ ಧಾನ್ಯ ವಿತರಣೆ ಕೇಂದ್ರಗಳಿಗೆ ಭೇಟಿ ಕೊಟ್ಟು ತೂಕ ಮತ್ತು ಅಳತೆಯಲ್ಲಿ ವ್ಯಾತ್ಯಾಸ ಬಾರದಂತೆ ನೋಡಿಕೊಳ್ಳಬೇಕೆಂದು ಸಂಬಂಧಪಟ್ಟವರಿಗೆ ಸೂಚನೆ ಕೊಟ್ಟರು.

ಕೆಲವು ವಿತರಣಾ ಕೇಂದ್ರಗಳಿಗೆ ಸ್ವತಃ ಸಚಿವರೇ ಭೇಟಿ ನೀಡಿ ಫಲಾನುಭವಿಗಳ ಆಧಾರ್‍ಕಾರ್ಡ್ ಪರಿಶೀಲಿಸಿ ಅವರಿಗೆ ನೀಡಿರುವ ಪಡಿತರ ಧಾನ್ಯಗಳನ್ನು ತಪಾಸಣೆ ನಡೆಸಿದರು.

ಇದೊಂದು ಅತ್ಯಂತ ಪವಿತ್ರ ಕಾರ್ಯವಾಗಿದ್ದು, ವಲಸಿಗರು ಮತ್ತು ಕಾರ್ಮಿಕರಿಗೆ ತೂಕದಲ್ಲಿ ವ್ಯತ್ಯಾಸವಿಲ್ಲದಂತೆ ವಿತರಣೆ ಮಾಡಬೇಕು ಎಂದು ಸಚಿವರು ಕಿವಿಮಾತು ಹೇಳಿದರು.

Facebook Comments

Sri Raghav

Admin