ಹೊಸ ಮರಳು ನೀತಿಗೆ ಅನುಮೋದನೆ ಸಾಧ್ಯತೆ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.18- ರಾಜ್ಯದಲ್ಲಿ ಮತ್ತೊಂದು ಹೊಸ ಮರಳು ನೀತಿ ಜಾರಿಗೊಳ್ಳ ಲಿದ್ದು, ನಾಳೆ ನಡೆಯುವ ಸಂಪುಟ ಸಭೆಯಲ್ಲಿ ಹೊಸ ಮರಳು ನೀತಿಗೆ ಅನುಮೋದನೆ ಸಿಗುವ ಸಾಧ್ಯತೆ ಇದೆ. ಆದರೆ, ಈ ಹೊಸ ಮರಳು ನೀತಿಯಲ್ಲಿ ಉಚಿತ ಮರಳು ನೀಡುವ ಅಂಶವನ್ನು ಕೈಬಿಡಲು ಸರ್ಕಾರ ನಿರ್ಧರಿಸಿದೆ. ಆಗಿನ ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ್ ಆಣತಿಯಂತೆ ಹೊಸ ಮರಳು ನೀತಿಯನ್ನು ಜಾರಿಗೊಳಿಸಿ ಆದೇಶ ಹೊರಡಿಸಲಾಗಿತ್ತು.

ಬಳಿಕ ಗಣಿ ಮತ್ತು ಭೂ ವಿಜ್ಞಾನ ಖಾತೆ ವಹಿಸಿಕೊಂಡ ಮುರುಗೇಶ್ ಆರ್.ನಿರಾಣಿ ಮತ್ತೊಂದು ಹೊಸ ಮರಳು ನೀತಿ ಜಾರಿಗೆ ತರಲು ನಿರ್ಧರಿಸಿದ್ದರು. ಇನ್ನೇನು ಮರಳು ನೀತಿ ಜಾರಿಗೊಳಿಸುವ ಹಂತದಲ್ಲಿ ದ್ದಾಗಲೇ ಮತ್ತೆ ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವರು ಬದಲಾಗಿದ್ದಾರೆ. ನೂತನ ಸಚಿವರಾಗಿ ಹಾಲಪ್ಪ ಆಚಾರ್ ಇದೀಗ ಮರಳು ನೀತಿಗೆ ಮತ್ತೆ ಹೊಸ ಸ್ವರೂಪ ನೀಡಲಿದ್ದಾರೆ.

ಮುರುಗೇಶ್ ನಿರಾಣಿ ಅವರು ಸಚಿವರಾಗಿದ್ದ ಸಂದರ್ಭ ರೂಪಿಸಲಾಗಿದ್ದ ಹೊಸ ಮರಳು ನೀತಿ ಯಲ್ಲಿ ಬಡವರಿಗೆ ಉಚಿತ ಮರಳು ವಿತರಿಸುವ ಪ್ರಸ್ತಾಪ ಇತ್ತು. ಆದರೆ ಈಗ ಇದನ್ನು ಕೈಬಿಡಲು ನೂತನ ಸಚಿವರು ಮುಂದಾಗಿದ್ದಾರೆ. ನಿರಾಣಿ ಸಚಿವರಾಗಿದ್ದಾಗ ರೂಪಿಸಿದ್ದ ಮರಳು ನೀತಿ ಕರಡುನಲ್ಲಿ 10 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಮನೆ ಕಟ್ಟಿಕೊಳ್ಳುವ ಬಡವರು, ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವಂತೆ ಹೊಸ ಮರಳು ನೀತಿ ಜಾರಿಗೆ ತರಲು ಚಿಂತಿಸಿದ್ದರು. ಬಡವರಿಗೆ ಮನೆ ಕಟ್ಟಿಕೊಳ್ಳಲು ತೊಂದರೆಯಾಗದಂತೆ ಉಚಿತ ವಾಗಿ ಮರಳು ವಿತರಿಸಲು ಯೋಚಿಸಿದ್ದರು.

ಇದೀಗ ಖಾತೆ ಬದಲಾವಣೆಯಾಗಿದ್ದು, ಹಾಲಪ್ಪ ಆಚಾರ್ ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವರಾಗಿ ದ್ದಾರೆ. ನಿರಾಣಿ ಅವರಿದ್ದಾಗ ರೂಪಿಸಲಾಗಿದ್ದ ಮರಳು ನೀತಿಗೆ ಕೆಲ ಬದಲಾವಣೆಗಳನ್ನು ಮಾಡಿ ಜಾರಿಗೆ ತರಲು ಹಾಲಪ್ಪ ಆಚಾರ್ ಮುಂದಾಗಿದ್ದಾರೆ. ನೂತನ ಮರಳು ನೀತಿಯಲ್ಲಿ ಉಚಿತ ಮರಳು ವಿತರಣೆ ಅಂಶವನ್ನು ಕೈಬಿಡುವುದು ಬಹುತೇಕ ಖಚಿತವಾಗಿದೆ. ಜೊತೆಗೆ 50 ಕೆಜಿ,100 ಕೆಜಿ ಬ್ಯಾಗ್‍ನಲ್ಲಿ ಮರಳು ನೀಡುವ ಪ್ರಸ್ತಾಪವನ್ನೂ ಕೈಬಿಡಲಾಗುವುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ಮರಳು ನೀತಿ ಸರಳೀಕೃತವಾಗಲಿದೆ. ಈ ಹಿಂದಿನ ನೀತಿಯಲ್ಲಿದ್ದ ಕಠಿಣ ಅಂಶಗಳನ್ನು ತೆಗೆಯಲು ನಿರ್ಧರಿಸಲಾಗಿದೆ. ಇನ್ನು, ಹೊಸ ನೀತಿಯನ್ವಯ ಗ್ರಾಪಂ ವ್ಯಾಪ್ತಿಯಲ್ಲಿ ಟ್ರ್ಯಾಕ್ಟರ್, ಎತ್ತಿನ ಬಂಡಿ, ಮರಳು ಸಾಗಣೆ ಮಾಡಿದರೆ ಕೇಸ್ ದಾಖಲಿಸಲಾಗುವುದಿಲ್ಲ. ಅನುಮತಿ ಪಡೆದು ಸ್ಥಳೀಯವಾಗಿ ಸಿಗುವ ಮರಳನ್ನು ಸಾಗಾಟ ಮಾಡಲು ಅನುವು ಮಾಡಿ ಕೊಡಲಾಗುವುದು. ಆದರೆ, ಬೇರೆ ಜಿಲ್ಲೆಗಳಿಗೆ ಸಾಗಾಣಿಕೆ ಮಾಡಿದರೆ ಕೇಸ್ ದಾಖಲಿಸುವ ನಿಟ್ಟಿನಲ್ಲಿ ತಿದ್ದುಪಡಿ ತರಲಾಗುತ್ತಿದೆ.

ಅನುಮತಿ ಪಡೆದೇ ಮರಳು ಸಾಗಾಟ ಮಾಡಬೇಕು. ದೊಡ್ಡ ಕಟ್ಟಡ, ಗುತ್ತಿಗೆದಾರರು, ಸರಕಾರಿ ಕಟ್ಟಡ, ಅಪಾರ್ಟ್‍ಮೆಂಟ್, ಬಂಗಲೆ ನಿರ್ಮಾಣ ಮಾಡುವವರಿಗೆ ಬೇರೆ ಮರಳು ಬೆಲೆ ನಿಗದಿಗೊಳಿಸಲಾಗುವುದು ಎನ್ನಲಾಗಿದೆ. ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಮಾನ ರೂಪದ ಮರಳು ಬೆಲೆ ನಿಗದಿಗೊಳಿಸಲು ಚಿಂತನೆ ನಡೆದಿದೆ. ಮರಳು ಸಾಗಾಟ, ನಿರ್ವಹಣೆಗಾಗಿ ನೋಡಲ್ ಏಜೆನ್ಸಿಯನ್ನು ರಚಿಸಲಾಗುತ್ತದೆ. ಆನ್‍ಲೈನ್ ಮೂಲಕ ಗ್ರಾಹಕರೇ ಮರಳನ್ನು ಖರೀದಿ ಮಾಡವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ ಎಂದು ಗಣಿ ಮತ್ತು ಭೂವಿಜ್ಞಾನ ನಿರ್ದೇಶಕರು ತಿಳಿಸಿದ್ದಾರೆ.

ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಮರಳು ಸಾಗಾಟಕ್ಕೆ ಅನುಮತಿ ನೀಡದಿರುವ ಬಗ್ಗೆ ನಿಯಮ ರೂಪಿಸಲಾಗುತ್ತದೆ. ವಾಣಿಜ್ಯ ಉದ್ದೇಶಕ್ಕಾಗಿ ಇತರ ಜಿಲ್ಲೆಗಳಿಗೆ ಮರಳು ಸಾಗಾಟ ಮಾಡಬೇಕಾದರೆ ಅನುಮತಿ ಪಡೆಯುವಂತೆ ನೀತಿ ರೂಪಿಸಲಾಗುತ್ತದೆ.

ಹೊಸ ಮರಳು ನೀತಿ ಹೂಡಿಕೆದಾರರ ಸ್ನೇಹಿಯಾಗಿರಲಿದ್ದು, ನಿರ್ಮಾಣ ಕಾಮಗಾರಿಗಳಿಗೆ ಅನುಕೂಲಕರವಾಗಿರುವ ನೀತಿಯನ್ನು ರೂಪಿಸಲು ಇಲಾಖೆ ಮುಂದಾಗಿದೆ. ಅಕ್ರಮ ಮರಳು ಸಾಗಾಣಿಕೆ, ಅಕ್ರಮ ಮರಳು ಗಣಿಗಾರಿಕೆಗೆ ಅಂಕುಶ ಹಾಕುವ ನಿಟ್ಟಿನಲ್ಲಿ ಕಠಿಣ ನಿಯಮ ಜಾರಿಯಾಗಲಿದೆ ಎನ್ನಲಾಗಿದೆ.

Facebook Comments