ನೋಂದಣಿ ಕಚೇರಿಗಳಲ್ಲಿನ ತಾಂತ್ರಿಕ ಸಮಸ್ಯೆ ನಿವಾರಿಸಲು ಹೊಸ ಸಾಫ್ಟವೇರ್ : ಸಚಿವ ಅಶೋಕ
ಬೆಂಗಳೂರು, ಸೆ.21- ರಾಜ್ಯಾಧ್ಯಂತ ನೋಂದಣಿ ಕಚೇರಿಗಳಲ್ಲಿ ಇರುವ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಲು ಹೊಸ ಸಾಫ್ಟವೇರ್ ಅಳವಡಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ವಿಧಾನ ಪರಿಷತ್ ನ ಶೂನ್ಯವೇಳೆಯಲ್ಲಿ ಜೆಡಿಎಸ್ ಧರ್ಮೇಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, 2014ರಲ್ಲೇ ಸಾಫ್ಟವೇರ್ ಮತ್ತು ಹಾರ್ಡ್ ವೇರ್ ಬದಲಾವಣೆ ಮಾಡಬೇಕಿತ್ತು. ಕಾವೇರಿ ತಂತ್ರಾಂಶದಲ್ಲಿ ಸಮಸ್ಯೆಗಳಾಗುತ್ತಿವೆ. ಯುಪಿಎಸ್ ಹಾಗೂ ಇತರ ಸಾಫ್ಟವೇರ್ ಏಳು ವರ್ಷ ಹಳೆಯದಾಗಿವೆ. ಇದರಿಂದ ದತ್ತಾಂಶ ಹಾನಿಗೊಳಗಾಗುತ್ತಿದೆ ಎಂದರು.
ಹೊಸ ಸಾಫ್ಟವೇರ್ ಗೆ 12 ಕೋಟಿ ಬಿಡುಗಡೆ ಮಾಡಲಾಗಿದೆ. ಐಟಿ ಬಿಟಿ ಇಲಾಖೆ ಡಿಸೆಂಬರ್ ವೇಳೆಗೆ ಹೊಸ ಸಾಫ್ಟವೇರ್ ಒದಗಿಸಲಿದೆ. ಇಲಾಖೆಯ ಸಿಬ್ಬಂದಿಗೆ ಹಾರ್ಡ್ ವೇರ್ ಮತ್ತು ಸಾಫ್ಟವೇರ್ ತರಬೇತಿ ನೀಡಲಾಗಿದೆ. ಡಿಸೆಂಬರ್ ನಂತರ ಸಮಸ್ಯೆ ಇಲ್ಲವಾಗುತ್ತದೆ.
ಒಂದು ಸಾವಿರ ರೂಪಾಯಿ ಹಣ ಕಟ್ಟುವ ವ್ಯವಸ್ಥೆಯಲ್ಲಿ ಅಧಿಕಾರಿಗಳು ಹಣವನ್ನು ಬ್ಯಾಂಕ್ ಗೆ ಕಟ್ಟದೆ ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಅದನ್ನು ತಪ್ಪಿಸಲು ಬ್ಯಾಂಕ್ ಮೂಲಕವೇ ಚಲನ್ ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಭರವಸೆ ನೀಡಿದರು.