ಭಾರಿ ದಂಡದಿಂದ ಬೇಸತ್ತಿದ್ದ ವಾಹನ ಸವಾರರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್..!?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.11- ಸಾರ್ವಜನಿಕರು ಸೇರಿದಂತೆ ಎಲ್ಲೆಡೆ ಭಾರೀ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರಿಗೆ ವಿಧಿಸುತ್ತಿರುವ ಶಿಕ್ಷೆಯ ಪ್ರಮಾಣವನ್ನು ಕಡಿತಗೊಳಿಸಲು ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರದ ನೂತನ ಕಾಯ್ದೆಗೆ ಎಲ್ಲೆಡೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೇ ನೂತನ ನಿಯಮವನ್ನು ಅನುಷ್ಠಾನಗೊಳಿಸಲು ಹಿಂದೇಟು ಹಾಕಿವೆ.

ಈಗಾಗಲೇ ನೆರೆಯ ಗೋವಾದಲ್ಲಿ ಮೊದಲು ರಸ್ತೆಗಳನ್ನು ದುರಸ್ತಿಗೊಳಿಸಿ ನಂತರವೇ ನಿಯಮವನ್ನು ಅನುಷ್ಠಾನ ಮಾಡುತ್ತೇವೆಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸ್ಪಷ್ಟಪಡಿಸಿದ್ದಾರೆ. ಇದರ ಜೊತೆಗೆ ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿಯವರ ತವರೂರು ಗುಜರಾತ್‍ನಲ್ಲಿ ಕೇಂದ್ರ ಸರ್ಕಾರದ ಕಾಯ್ದೆಯನ್ನು ಅನುಷ್ಠಾನ ಮಾಡುತ್ತೇವೆ ಆದರೆ ದಂಡದ ಪ್ರಮಾಣವನ್ನು ಗಣನೀಯ ಪ್ರಮಾಣದಲ್ಲಿ ಇಳಿಕೆ ಮಾಡುವುದಾಗಿ ಮುಖ್ಯಮಂತ್ರಿ ವಿಜಯ್ ರುಪಾನಿ ಪ್ರಕಟಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದವರಿಗೆ ವಿಧಿಸಲಾಗುತ್ತಿರುವ ಕಡಿತಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದವರಿಗೆ ವಿಧಿಸಲಾಗುತ್ತಿರುವ ದಂಡ ಪ್ರಮಾಣಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ. ಸಾರ್ವಜನಿಕರು, ಮಧ್ಯಮ ವರ್ಗದವರು, ಗಾರ್ಮೆಂಟ್ಸ್ ನೌಕರರು, ಖಾಸಗಿ ಕ್ಷೇತ್ರದ ನೌಕರರು ಸೇರಿದಂತೆ ಎಲ್ಲೆಡೆ ಸರ್ಕಾರದ ತೀರ್ಮಾನಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ಅದರಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಸಾಗಾಣಿಕೆ ಮಾಡುವ ಲಾರಿ ಮಾಲೀಕರ ಸಂಘ ದಂಡದ ಪ್ರಮಾಣವನ್ನು ಕಡಿಮೆ ಮಾಡದಿದ್ದರೆ ಡೀಸೆಲ್ ಮತ್ತು ಪೆಟ್ರೋಲ್ ಸಾಗಾಣೆ ಮಾಡದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ದಂಡದ ಪ್ರಮಾಣವನ್ನು ಎಷ್ಟು ಪ್ರಮಾಣದಲ್ಲಿ ಇಳಿಕೆ ಮಾಡಬಹುದು ಎಂಬುದರ ಕುರಿತು ವರದಿ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸಾರಿಗೆ ಸಚಿವರಾಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ್‍ಸವದಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಕೂಡ ದಂಡದ ಪ್ರಮಾಣವನ್ನು ಇಳಿಕೆ ಮಾಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪನವರು ಸಾರಿಗೆ ಇಲಾಖೆ ಅಧಿಕಾರಿಗಳು, ಗೃಹ ಇಲಾಖೆಯ ಉನ್ನತ ಅಧಿಕಾರೊಗಳೊಂದಿಗೆ ಸಭೆ ನಡೆಸಿ ದಂಡದ ಪ್ರಮಾಣವನ್ನು ಇಳಿಕೆ ಮಾಡುವ ಬಗ್ಗೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಕಡೆ ರಸ್ತೆಗಳು ಹಾಳಾಗಿದ್ದು, ವಾಹನಗಳು ಸಂಚರಿಸಲು ಅಷ್ಟು ಯೋಗ್ಯವಾಗಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಬೆಂಗಳೂರಿನಲ್ಲೇ ಪ್ರಮುಖ ರಸ್ತೆಗಳು ಬಿರುಕು ಬಿಟ್ಟಿದ್ದು, ಎಲ್ಲೆಂದರಲ್ಲಿ ಗುಂಡಿಗಳಿವೆ. ಮೊದಲು ಅವುಗಳನ್ನು ದುರಸ್ತಿ ಮಾಡಿ ನಂತರ ನಿಯಮವನ್ನು ಜಾರಿ ಮಾಡಬೇಕಿತ್ತು ಎಂಬ ಅಭಿಪ್ರಾಯ ಸಾರ್ವಜನಿಕರಿಂದ ಕೇಳಿಬರುತ್ತಿದೆ.

# ಕಾಯ್ದೆ ದುರುಪಯೋಗ:
ಇನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೋಟಾರು ವಾಹನ(ತಿದ್ದುಪಡಿ) ಕಾಯ್ದೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಿರುವುದು ಪೊಲೀಸರಿಗೆ ವರವಾಗಿ ಪರಿಣಮಿಸಿದೆ. ಮೊದಲು ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರಿಗೆ 100 ರೂ.ನಿಂದ 500 ಒಳಗೆ ದಂಡ ವಿಧಿಸಲಾಗುತ್ತಿತ್ತು.

ಈಗ ಹೊಸ ಕಾಯ್ದೆ ಪ್ರಕಾರ ಸಿಗ್ನಲ್ ಜಂಪ್ ಮಾಡಿದರೆ 1000 ರೂ. ಹೆಲ್ಮೆಟ್ ಇಲ್ಲದಿದ್ದರೆ 2000 ರೂ. ಚಾಲನಾ ಪರಾವನಗಿ ಇಲ್ಲದಿದ್ದರೆ 5000 ಸೇರಿದಂತೆ ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತಿದೆ. ಇದು ಒಂದೆಡೆ ಸಂಚಾರಿ ನಿಯಮವನ್ನು ಬಿಗಿಗೊಳಿಸುತ್ತೇವೆ ಎಂದು ಹೇಳುತ್ತಿರುವ ಸರ್ಕಾರ ಮತ್ತೊಂದೆಡೆ ಪೊಲೀಸರ ಜೇಬು ತುಂಬಿಸಿಕೊಳ್ಳುವುದಕ್ಕೆ ದಾರಿ ಮಾಡಿಕೊಟ್ಟಿದೆ.

ಬಹುತೇಕ ಕಡೆ ಸಂಚಾರಿ ಪೊಲೀಸರು ದಂಡ ವಿಧಿಸುವ ಬದಲು ಸವಾರರ ಬಳಿ ಕೈಗೆ ಸಿಕ್ಕಷ್ಟು ಪಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿಬಂದಿದೆ.

Facebook Comments

Sri Raghav

Admin