ಶಾಸಕರೊಬ್ಬರ ಪರಮಾಪ್ತ, ಡ್ರಗ್ ಡೀಲ್ ಕಿಂಗ್‍ಪಿನ್ ಶೇಖ್ ಫಜೀಲ್’ಗಾಗಿ ಇಡಿ ಅಧಿಕಾರಿಗಳ ಹುಡುಕಾಟ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.11- ಕರ್ನಾಟಕವನ್ನೇ ಬೆಚ್ಚಿಬೀಳಿಸಿರುವ ಡ್ರಗ್ಸ್ ಪ್ರಕರಣದ ಕಿಂಗ್‍ಪಿನ್ ಎಂದು ಹೇಳಲಾಗುತ್ತಿರುವ ಹಾಗೂ ಪ್ರಭಾವಿ ಶಾಸಕರೊಬ್ಬರ ಪರಮಾಪ್ತ ಶೇಖ್ ಫಜೀಲ್ ಬಂಧನಕ್ಕೆ ಜಾರಿ ನಿರ್ದೇಶನಾಲಯ(ಇ.ಡಿ) ಸಜ್ಜಾಗಿದೆ.

ಮಾಜಿ ಸಚಿವ ಹಾಗೂ ಬೆಂಗಳೂರು ನಗರದ ಪ್ರಭಾವಿ ಶಾಸಕರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಬಿಟಿಎಂ ಲೇಔಟ್‍ನ ನಿವಾಸಿಯಾಗಿರುವ ಶೇಖ್ ಫಜೀಲ್ ಡ್ರಗ್ಸ್ ಮಾಫಿಯಾದ ಕಿಂಗ್‍ಪಿನ್ ಎಂದೇ ಇ.ಡಿ ಶಂಕೆ ವ್ಯಕ್ತಪಡಿಸಿದೆ.

ಸದ್ಯ ಸಿಸಿಬಿ ಪೊಲೀಸರ ಬಂಧನದ ಭೀತಿಯಿಂದ ತಲೆಮರೆಸಿಕೊಂಡಿರುವ ಈತನ ಶೋಧಕ್ಕಾಗಿ ಈಗಾಗಲೇ ಇ.ಡಿಯ ವಿಶೇಷ ತಂಡ ಹೊರರಾಜ್ಯಗಳಲ್ಲಿ ಕಾರ್ಯಾಚರಣೆಗೆ ಇಳಿದಿದೆ.

ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಮಾಡಿರುವ ವಿಚಾರ ಸದ್ಯ ತನಿಖೆಯಿಂದ ಬಯಲಾಗಿದೆ. ಪ್ರಕರಣದಲ್ಲಿ ರಾಗಿಣಿ ದ್ವಿವೇದಿ, ನಟಿ ಸಂಜನಾ, ಕಿಂಗ್ಪಿನ್ ವಿರೇನ್ ಖನ್ನಾ, ರವಿಶಂಕರ್, ರಾಹುಲ್, ಲೂಮ್ ಪೆಪ್ಪರ್, ನಿಯಾಜ್ ಅವರುಗಳ ಬಗ್ಗೆ ಇ.ಡಿ ಪ್ರಮುಖ ದಾಖಲೆಯನ್ನು ಕಲೆಹಾಕಿದೆ.

ಡ್ರಗ್ಸ್ ಪ್ರಕರಣದಲ್ಲಿ ವಿದೇಶಿ ಹಣ, ಅಕ್ರಮ ಹಣ, ಹವಾಲ ದಂಧೆ ನಡೆದಿರುವ ಸಾಧ್ಯತೆ ಮೇರೆಗೆ ಇಡಿ ಅಕಾರಿಗಳು ತನಿಖೆ ನಡೆಸಿ ಇಸಿಐಆರ್ ದಾಖಲಿಸಲಿದೆ. ಒಂದು ವೇಳೆ ಡ್ರಗ್ಸ್ ಮಾಫಿಯಾ ಆರೋಪದಿಂದ ಹೊರಗಡೆ ಬಂದರೂ ಸಹ ಆರೋಪಿಗಳು ಇಡಿ ತನಿಖೆ ಎದುರಿಸುವುದು ಅನಿವಾರ್ಯವಾಗಿದೆ.

ತನ್ನನ್ನು ಬಂಸಬಹುದೆಂಬ ಭೀತಿಯಿಂದಾಗಿ ಫಜೀಲ್ ಹೊರ ರಾಜ್ಯದಲ್ಲಿ ತಲೆಮರೆಸಿಕೊಂಡಿದ್ದು, ಸದ್ಯ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಇದೀಗ ಇಡಿ ಅಧಿಕಾರಿಗಳು ಟವರ್ ಲೋಕೇಷನ್ ಮೂಲಕ ಖೆಡ್ಡಾ ತೋಡಲು ಮುಂದಾಗಿದ್ದಾರೆ.

ಬಿಟಿಎಂ ಲೇಔಟ್‍ನ ನಿವಾಸಿಯಾಗಿರುವ ಈತ ಶ್ರೀಲಂಕಾ ರಾಜಧಾನಿ ಕೊಲೋಂಬೊ ಹೊರವಲಯದಲ್ಲಿರುವ ಬ್ಯಾಲಿಸ್ ಕ್ಯಾಸಿನೋದಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗುತ್ತಿದೆ.

ಸ್ಯಾಂಡಲ್‍ವುಡ್ ಮಾತ್ರವಲ್ಲದೆ ಬಾಲಿವುಡ್‍ನಲ್ಲೂ ನಟನಟಿಯರು, ಕಲಾವಿದರು ಸೇರಿದಂತೆ ಗಣ್ಯರನ್ನು ಕೊಲೋಂಬೊ ಬ್ಯಾಸಿಲ್ ಕ್ಯಾಸಿನೋಗೆ ಕರೆದೊಯ್ಯುತ್ತಿದ್ದ. ಹೀಗೆ ಗ್ರಾಹಕರನ್ನು ಕ್ಯಾಸಿನೋ ಕರೆದೊಯ್ಯುತ್ತಿದ್ದರೆ ಈತನಿಗೆ ಒಂದು ಲಕ್ಷಕ್ಕೆ ಶೇ.30ರಷ್ಟು ಕಮೀಷನ್ ಬರುತ್ತಿತ್ತು.

ಈಗಾಗಲೇ ಸಿಸಿಬಿ ವಶದಲ್ಲಿರುವ ಚಿತ್ರನಟಿ ಸಂಜನಾ ಗಲ್ರಾನಿ ಆಪ್ತ ರಾಹುಲ್ ಜೊತೆ ಒಡನಾಟವಿಟ್ಟುಕೊಂಡಿದ್ದ ಶೇಖ್ ಫಜೀಲ್‍ಗೆ ಬೆಂಗಳೂರಿನ ಪ್ರಭಾವಿ ಶಾಸಕರೊಬ್ಬರ ಪರಿಚಯವಾದ ನಂತರ ಆತನ ಸಂಪರ್ಕಗಳು ಇನ್ನು ಹೆಚ್ಚಾದವು.

ಹುಟ್ಟುಹಬ್ಬ ಆಚರಣೆಗಾಗಿ ಬಾಲಿವುಡ್‍ನ ನಟರೊಬ್ಬರನ್ನು ಕರೆತಂದಿದ್ದು ಈತನೆ ಶಾಸಕರ ರಕ್ಷಣೆ ಪಡೆದುಕೊಂಡೇ ಡ್ರಗ್ಸ್ ದಂಧೆ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.

ಸಿಸಿಬಿ ವಶದಲ್ಲಿರುವ ರಾಗಿಣಿ, ಸಂಜನಾ, ರಾಹುಲ್, ರವಿಶಂಕರ್, ಅಶ್ವಿನ್, ಶಿವಪ್ರಕಾಶ್ ಸೇರಿದಂತೆ ಹಲವರ ಮೂಲಕ ಮಾದಕ ವಸ್ತುಗಳನ್ನು ಸ್ಯಾಂಡಲ್‍ವುಡ್‍ಗೆ ಪೂರೈಕೆ ಮಾಡುತ್ತಿದುದೇ ಇದೇ ಫಜೀಲ್.

ಬೆಂಗಳೂರಿನಿಂದ ನಟನಟಿಯರು, ನಿರ್ಮಾಪಕರು, ನಿರ್ದೇಶಕರು, ಸಂಗೀತ ನಿರ್ದೇಶಕರು ಸೇರಿದಂತೆ ಗಣ್ಯರಿಗೆ ಕೊಲೊಂಬೊದಲ್ಲಿ ದೊಡ್ಡ ದೊಡ್ಡ ಪಾರ್ಟಿಗಳನ್ನು ಆಯೋಜಿಸುತ್ತಿದುದ್ದನ್ನು ಇ.ಡಿ ಪತ್ತೆ ಹಚ್ಚಿದೆ.

ಈ ಡ್ರಗ್ಸ್ ಜಾಲದ ಆರೋಪಿಗಳು ಕೇವಲ ಮಾದಕ ವಸ್ತು ಸಾಗಾಟ ಮಾತ್ರವಲ್ಲದೆ, ಅಕ್ರಮ ಹಣ ವರ್ಗಾವಣೆ, ವಿದೇಶದಲ್ಲಿ ಹಣಕಾಸು ವ್ಯವಹಾರ ಹಾಗೂ ಹವಾಲಾ ಚಟುವಟಿಕೆಯಲ್ಲೂ ಭಾಗಿಯಾದ ಶಂಕೆಗಳು ಮೂಡಿರುವ ಹಿನ್ನಲೆಯಲ್ಲಿ ಜಾರಿ ನಿರ್ದೇಶನಾಲಯದ ಅಕಾರಿಗಳು ಹಾಲಿ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ತನಿಖಾಕಾರಿಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಈ ಮೂಲಕ ಮಾದಕ ವಸ್ತು ಮಾರಾಟ ಜಾಲ ಆರೋಪದ ಹಿನ್ನೆಲೆಯಲ್ಲಿ ಸಿಸಿಬಿ ಬಲೆಗೆ ಬಿದ್ದಿರುವ ಕನ್ನಡ ಸಿನಿಮಾ ರಂಗದ ತಾರೆಯರು ಹಾಗೂ ಪೇಜ್ ತ್ರಿ ಪಾರ್ಟಿಗಳ ಆಯೋಜಕರಿಗೆ ಮತ್ತೊಂದು ಕಂಟಕ ಶುರುವಾದಂತಾಗಿದೆ. ಇಡಿ ಅಕಾರಿಗಳು ಸಿಸಿಬಿ ಕಚೇರಿಗೆ ಬುಧವಾರ ತೆರಳಿ ತನಿಖಾಕಾರಿಗಳಿಂದ ಮಾಹಿತಿ ಸಂಗ್ರಹಿಸಿದ್ದರು.

ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ, ವೀರೇನ್ ಖನ್ನಾ, ರಾಹುಲ್, ಪ್ರಶಾಂತ್ ರಂಕಾ, ನಿಯಾಜ್, ಸಾರಿಗೆ ಇಲಾಖೆ ನೌಕರ ರವಿಶಂಕರ್ ಅವರನ್ನು ವಿಚಾರಣೆಗೊಳಪಡಿಸುವ ಉದ್ದೇಶವನ್ನು ಇಡಿ ಅಕಾರಿಗಳು ಹೊಂದಿದ್ದಾರೆ ಎನ್ನಲಾಗಿದೆ.

ಸಿಸಿಬಿ ಬಂಸಿರುವ ಆರೋಪಿಗಳಿಂದ ಪ್ರಾಥಮಿಕ ಹಂತದಲ್ಲಿ ತನಿಖಾಕಾರಿಗಳಿಂದ ಇ.ಡಿ ಮಾಹಿತಿ ಪಡೆದಿದೆ. ಮಾದಕ ವಸ್ತು ಜಾಲ ಪ್ರಕರಣದ ಸಿಸಿಬಿ ವಿಚಾರಣೆ ಮುಗಿದ ನಂತರ ಇಡಿ ಅಕಾರಿಗಳು ಅಕ್ರಮ ಹಣಕಾಸು ವ್ಯವಹಾರ ಸಂಬಂಧ ಪ್ರತ್ಯೇಕವಾಗಿ ಎಫ್‍ಐಆರ್ ದಾಖಲಿಸಿ ತನಿಖೆ ಆರಂಭಿಸಲಿದ್ದಾರೆ.

ಚಿಕಿತ್ಸೆ ಪೂರ್ಣಗೊಂಡ ಬಳಿಕ ಇಬ್ಬರು ನಟಿಯರನ್ನು ಇ.ಡಿ ಮತ್ತೊಮ್ಮೆ ವಿಚಾರಣೆಗೊಳಪಡಿಸುವ ಸಾಧ್ಯತೆಗಳಿವೆ. ಕಾಂಗ್ರೆಸ್ ಶಾಸಕರೊಬ್ಬರಿಗೆ ಶ್ರೀಲಂಕಾದ ಕ್ಯಾಸಿನೋ ಜೊತೆ ನಂಟು ಇದೆ ಎಂಬ ಆರೋಪ ಕೇಳಿ ಬಂದ ಬಳಿಕ ಈಗ ರಾಜ್ಯದ ಮಾಜಿ ವಿಧಾನಪರಿಷತ್ ಸದಸ್ಯರೊಬ್ಬರಿಗೂ ಸಂಪರ್ಕವಿದೆ ಎಂಬ ಮಾತು ಕೇಳಿಬಂದಿದೆ.

ರಾಜಕಾರಣಿಗಳಿಗೆ ಶ್ರೀಲಂಕಾದ ಕ್ಯಾಸಿನೋ ನಂಟು ಇದೆ. ಈಗಾಗಲೇ ಪ್ರಶಾಂತ್ ಸಂಬರಗಿ ಆ ಶಾಸಕನ ಹೆಸರನ್ನು ತೇಲಿಬಿಟ್ಟಿದ್ದಾರೆ. ಆದರೆ ಹಲವು ರಾಜಕಾರಣಿಗಳಿಗೆ ಲಂಕಾ ಕ್ಯಾಸಿನೋ ನಂಟು ಇದ್ದು ಅದರಲ್ಲೂ ಉದ್ಯಮಿಯಾಗಿರುವ ಪರಿಷತ್ ಮಾಜಿ ಸದಸ್ಯರ ಹೆಸರು ಈಗ ಮುನ್ನೆಲೆಗೆ ಬಂದಿದೆ.

ಈ ನಾಯಕ ಹಲವು ಬಾರಿ ಲಂಕಾಗೆ ಹೋಗಿದ್ದಾರೆ. ಈಗ ಡ್ರಗ್ಸ್ ಪ್ರಕರಣದಲ್ಲಿ ಅಕ್ರಮ ಹಣಕಾಸು ವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಪ್ರವೇಶಿಸಿದೆ. ಒಂದು ವೇಳೆ ತನಿಖೆಗೆ ಮುಂದಾದರೆ ಈ ನಾಯಕನಿಗೂ ಕಷ್ಟ ಎದುರಾಗುವ ಸಾಧ್ಯತೆಯಿದೆ.

ವಿಶೇಷ ಏನೆಂದರೆ ಈ ವ್ಯಕ್ತಿ ಒಬ್ಬರೇ ಹೋಗುತ್ತಿರಲಿಲ್ಲ. ಇವರ ಜೊತೆ ಹಲವು ರಾಜಕೀಯ ವ್ಯಕ್ತಿಗಳು ಹೋಗುತ್ತಿದ್ದರು. ಒಂದು ವೇಳೆ ಡ್ರಗ್ಸ್ ಪ್ರಕರಣದ ಆರೋಪಿಗಳಿಗೂ ಈ ರಾಜಕೀಯ ವ್ಯಕ್ತಿಗೂ ನಂಟು ಇದೆ ಎಂಬ ಸುಳಿವು ಸಿಕ್ಕರೆ ಈ ವ್ಯಕ್ತಿಯ ಸುತ್ತ ತನಿಖೆ ತಿರುಗಲಿದೆ. ಒಂದು ವೇಳೆ ಈ ವ್ಯಕ್ತಿಯನ್ನು ವಿಚಾರಣೆಗೆ ಒಳ ಪಡಿಸಿದರೆ ರಾಜ್ಯದ ಹಲವು ರಾಜಕೀಯ ನಾಯಕರಿಗೂ ಬಿಸಿ ತಟ್ಟಲಿದೆ.

Facebook Comments

Sri Raghav

Admin