ನ್ಯೂಜಿಲ್ಯಾಂಡ್ಗೆ 4 ರನ್ಗಳ ರೋಚಕ ಜಯ
ಡುನೆಡಿನ್, ಫೆ.25- ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ ವಿರುದ್ಧ ನಡೆಯುತ್ತಿರುವ 5 ಟ್ವೆಂಟಿ-20 ಪಂದ್ಯಗಳ ಸರಣಿಯ 2ನೇ ಪಂದ್ಯದಲ್ಲಿ ಆಸೀಸ್ ವಿರುದ್ಧ ಕಿವೀಸ್ 4 ರನ್ಗಳ ರೋಚಕ ಗೆಲುವು ಸಾಧಿಸಿದೆ. ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ನ್ಯೂಜಿಲ್ಯಾಂಡ್ ಈಗ ಸರಣಿಯಲ್ಲಿ 2-0 ಯಿಂದ ಮುನ್ನಡೆ ಹೊಂದಿದ್ದು ಸರಣಿ ವಶಪಡಿಸಿಕೊಳ್ಳುವತ್ತ ಚಿತ್ತ ಹರಿಸಿದೆ.
ಆರಂಭಿಕ ಆಘಾತ:
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನ್ಯೂಜಿಲ್ಯಾಂಡ್ ಪರ ಆರಂಭಿಕರಾಗಿ ಕ್ರೀಸ್ಗಿಳಿದ ಅನುಭವಿ ಆಟಗಾರ ಮಾರ್ಟಿನ್ ಗುಪ್ಟಿಲ್ ಹಾಗೂ ವಿಕೆಟ್ಕೀಪರ್ ಟಿಮ್ ಸೆಲ್ಫರ್ಟ್ ಅವರು ಉತ್ತಮ ರನ್ ಕಲೆಹಾಕುವತ್ತ ಗಮನ ಹರಿಸಿದ್ದಾಗಲೇ ವೇಗಿ ಕೇನ್ ರಿಚರ್ಡ್ಸನ್ ಬೌಲಿಂಗ್ನಲ್ಲಿ ಸೆಲ್ಫರ್ಟ್ ಬಾರಿಸಿದ ಚೆಂಡು ಆಸೀಸ್ ನಾಯಕ ಆರೋನ್ ಫಿಂಚ್ ಕೈಯಲಲಿ ಸೆರೆಯಾಗುವ ಮೂಲಕ ಕಿವೀಸ್ ಆರಂಭಿಕ ಆಘಾತ ಅನುಭವಿಸಿತು.
ಶತಕ ವಂಚಿತ ಗುಪ್ಟಿಲ್:
ಸೆಲ್ಫರ್ಟ್ ಔಟಾದರೂ ಎರಡನೇ ವಿಕೆಟ್ಗೆ ಜೊತೆಗೂಡಿದ ಗುಪ್ಟಿಲ್ ಹಾಗೂ ನಾಯಕ ಕೇನ್ ವಿಲಿಯಮ್ಸ್ ಉತ್ತಮ ಜೊತೆಯಾಟ ನೀಡುವ ಮೂಲಕ ಆಸೀಸ್ಗೆ ತಿರುಗೇಟು ನೀಡಿದರು. 50 ಎಸೆತಗಳಲ್ಲಿ 6 ಬೌಂಡರಿ ಹಾಗೂ 8 ಸಿಕ್ಸರ್ಗಳನ್ನು ಸಿಡಿಸುವ ಮೂಲಕ 97 ರನ್ ಗಳಿಸಿದ್ದ ಗುಪ್ಟಿನ್ ಶತಕ ಗಳಿಸುವ ರಭಸದಲ್ಲಿ ಡೇಲ್ ಸ್ಯಾಮ್ಸ್ ಎಸೆತ ಚೆಂಡನ್ನು ಭಾರೀ ಹೊಡೆತವಾಗಿ ಪರಿವರ್ತಿಸಲು ವಿಫಲವಾಗಿ ಸ್ಟೋನಿಸ್ಗೆ ಕ್ಯಾಚ್ ನೀಡುವ ಮೂಲಕ ಶತಕ ವಂಚಿತರಾದರು.
ಈ ನಡುವೆ ನಾಯಕ ಕೇನ್ ವಿಲಿಯಮ್ಸ್ ಕೂಡ 2 ಬೌಂಡರಿ ಹಾಗೂ 3 ಸಿಕ್ಸರ್ಗಳ ನೆರವಿನಿಂದ 53 ರನ್ ಗಳಿಸಿ ಜಂಪಾ ಬೌಲಿಂಗ್ನಲ್ಲಿ ಬೋಲ್ಡಾದಾಗ ತಂಡದ ಮೊತ್ತ 173 ರನ್ಗಳಾಗಿತ್ತು. ಈ ನಡುವೆ ಗ್ಲೇನ್ ಫಿಲಿಪ್ಸ್ (8ರನ್), ಡೋವೆನ್ ಕೋನ್ವೇರಿ(2ರನ್) ವಿಫಲರಾದರು.
ಮಿಂಚಿದ ನೀಶೀಮ್:
ಒಂದೆಡೆ ವಿಕೆಟ್ ಉರುಳುತ್ತಿದ್ದರೂ ದಿಟ್ಟವಾಗಿ ಬ್ಯಾಟಿಂಗ್ ಮಾಡಿದ ಅಲೌಂಡರ್ ಜೇಮ್ಸ್ ನೀಸೀಮ್ (45ರನ್, 1 ಬೌಂಡರಿ ಹಾಗೂ 6 ಸಿಕ್ಸರ್)ರ ರೋಚಕ ಆಟದ ನೆರವಿನಿಂದಾಗಿ ನ್ಯೂಜಿಲ್ಯಾಂಡ್ ನಿಗಧಿತ 20 ಓವರ್ಗಳಲ್ಲಿ 7 ವಿಕೆಟ್ಗಳನ್ನು ಕಳೆದುಕೊಂಡು 219 ರನ್ ಗಳಿಸಿತು. ಆಸ್ಟ್ರೇಲಿಯಾ ಪರ ಕೇನ್ ರಿಚರ್ಡ್ಸನ್ 3 ವಿಕೆಟ್ ಕಬಳಿಸಿದರೆ, ಡೇನಿಯಲ್ ಸ್ಯಾಮ್ಸ್, ಜೇಲ್ ರಿಚರ್ಡ್ಸನ್, ಆ್ಯಡಂ ಜಂಪಾ ತಲಾ 1 ವಿಕೆಟ್ ಕೆಡವಿದರು.
ನ್ಯೂಜಿಲ್ಯಾಂಡ್ ನೀಡಿದ 220 ಗೆಲುವಿನ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ಜೋಶ್ ಫಿಲಿಪ್ (45 ರನ್, 2 ಬೌಂಡರಿ, 3 ಸಿಕ್ಸರ್), ಮಾರ್ಕಸ್ ಸ್ಟೋನಿಸ್ (78 ರನ್, 7 ಬೌಂಡರಿ, 5 ಸಿಕ್ಸರ್), ಡೇನಿಯಲ್ ಸ್ಯಾಮ್ಸ್(41 ರನ್, 2 ಬೌಂಡರಿ, 4 ಸಿಕ್ಸರ್)ಗಳ ಸಮಯೋಚಿತ ಆಟದಿಂದಾಗಿ ನಿಗಧಿತ 20 ಓವರ್ಗಳಲ್ಲಿ 8ವಿಕೆಟ್ಗಳನ್ನು ಕಳೆದುಕೊಂಡು 215 ರನ್ ಗಳಿಸುವ ಮೂಲಕ 4 ರನ್ಗಳಿಂದ ಸೋಲನ್ನಪ್ಪಿತು.
ನ್ಯೂಜಿಲ್ಯಾಂಡ್ ಪರ ಮಿಚಲ್ ಸ್ಯಾನೇಟರ್ 4 ವಿಕೆಟ್ ಕಬಳಿಸಿದರೆ, ಜೇಮ್ಸ್ ನಿಶಾಮ್ 2, ಟಿಮ್ ಸೋಥಿ, ಇಶ್ ಸೋಧಿ ತಲಾ 1 ವಿಕೆಟ್ ಕಬಳಿಸಿದರು. ಮಾರ್ಟಿಲ್ ಗುಪ್ಟಿಲ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.