ನ್ಯೂಜಿಲೆಂಡ್ ಪ್ರಧಾನಿಗೆ ಕೊರೊನಾ ಪಾಸಿಟಿವ್

ಈ ಸುದ್ದಿಯನ್ನು ಶೇರ್ ಮಾಡಿ

ವೆಲ್ಲಿಂಗ್ಟನ್, ಮೇ 14- ಅಮೆರಿಕಾದ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ವಾಣಿಜ್ಯ ಹಾಗೂ ವ್ಯಾಪಾರ ಸಂಬಂಧಗಳ ಶೃಂಗದಲ್ಲಿ ಭಾಗವಹಿಸಲು ತಯಾರಿ ನಡೆಸಿದ್ದ ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ಅವರಿಗೆ ಕೋವಿಡ್ ಸೋಂಕು ತಗುಲಿದೆ.

ಅರ್ಡೆರ್ನ್ ಶನಿವಾರ ತನ್ನ ಸಕಾರಾತ್ಮಕ ಪರೀಕ್ಷಾ ಫಲಿತಾಂಶದ ಫೋಟೋವನ್ನು ಇನ್ಸ್‍ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಸರ್ಕಾರದ ವಾರ್ಷಿಕ ಬಜೆಟ್, ಅನಿಲ ಹೊರಸೂಸುವಿಕೆ ಕಡಿಮೆ ಮಾಡುವ ಹಸಿರು ಮನೆ ಯೋಜನೆ ಸೇರಿದಂತೆ ಹಲವಾರು ಪ್ರಮುಖ ರಾಜಕೀಯ ಚಟುವಟಿಕೆಗಳಿಂದ ದೂರವಾಗಿರುವುದು ನಿರಾಸೆ ತಂದಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಈ ತಿಂಗಳಾಂತ್ಯದಲ್ಲಿ ಮತ್ತೆ ಅಮೆರಿಕಾ ಪ್ರವಾಸ ಸಾಧ್ಯತೆಗಳ ಬಗ್ಗೆ ಸಕಾರಾತ್ಮಕ ನಿಲುವು ಪ್ರಕಟಿಸಿದ್ದಾರೆ.

ತಮ್ಮ ಸರ್ಕಾರದ ಕಾರ್ಯ ಚಟುವಟಿಕೆಗಳಲ್ಲಿ ವೈಯಕ್ತಿಕವಾಗಿ ಭಾಗಿಯಾಗಲು ಆಗುತ್ತಿಲ್ಲ. ಆದರೆ ನನ್ನ ತಂಡದ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಅವರಿಗೆ ನನ್ನ ಆಲೋಚನೆಗಳನ್ನು ಹಂಚಿಕೊಂಡು ಮಾರ್ಗದರ್ಶನ ಮಾಡುತ್ತೇನೆ ಎಂದಿದ್ದಾರೆ.

ವೆಲ್ಲಿಂಗ್ಟನ್ ನಿವಾಸದ ಸಿಬ್ಬಂದಿಯೊಬ್ಬರಿಗೆ ಭಾನುವಾರ ಸೋಂಕು ತಗುಲಿರುವುದು ಖಚಿತವಾಗಿತ್ತು. ನ್ಯೂಜಿಲೆಂಡ್ನ ಆರೋಗ್ಯ ನಿಯಮಗಳ ಅಡಿಯಲ್ಲಿ, ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದವರು ಏಳು ದಿನಗಳವರೆಗೆ ಪ್ರತ್ಯೇಕವಾಗಿರಬೇಕಿದೆ, ಅದರಂತೆ ಅರ್ಡೆರ್ನ್ ಪ್ರತ್ಯೇಕವಾಗಿದ್ದು ಪರೀಕ್ಷೆಗೆ ಒಳಗಾಗಿದ್ದರು. ಯಾವುದೇ ರೋಗ ಲಕ್ಷಣಗಳು ಇಲ್ಲದೆ ಇದ್ದರೂ ಸೋಂಕು ಖಚಿತವಾಗಿದೆ. ಸಂಪೂರ್ಣ ಲಸಿಕೆಯನ್ನು ಪಡೆದಿರುವ ಅರ್ಡೆರ್ನ್ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋವಿಡ್ ಸೋಂಕಿಗೆ ಸಿಲುಕಿದ ವಿಶ್ವದ ಪ್ರಮುಖ ನಾಯಕರ ಪಟ್ಟಿಗೆ ಅರ್ಡೆರ್ನ್ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಲಸಿಕೆಗಳು ಲಭ್ಯವಾಗುವ ಮೊದಲು ಏಪ್ರಿಲ್ 2020 ರಲ್ಲಿ ಸೋಂಕಿನಿಂದ ಒಂದು ವಾರ ಆಸ್ಪತ್ರೆಗೆ ದಾಖಲಾಗಿದ್ದರು. ಅನಂತರ ಬಹುತೇಕ ಅಗ್ರ ಗಣ್ಯ ನಾಯಕರು ಸೋಂಕಿನಿಂದ ಹೊರಗುಳಿದಿದ್ದರು. ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ನ್ಯೂಜಿಲೆಂಡ್ ತನ್ನ ಗಡಿಗಳನ್ನು ಮುಚ್ಚಿ, ಕಟ್ಟುನಿಟ್ಟಾದ ಲಾಕ್‍ಡೌನ್ ಜಾರಿ ಮಾಡಿದೆ.

Facebook Comments