ಡೆಡ್ಲಿ ಕೊರೊನಾದಿಂದ ನ್ಯೂಜಿಲೆಂಡ್ ಸಂಪೂರ್ಣ ಮುಕ್ತ..!

ಈ ಸುದ್ದಿಯನ್ನು ಶೇರ್ ಮಾಡಿ

ವೆಲ್ಲಿಂಗ್ಟನ್, ಜೂ. 8-ವಿಶ್ವದ ಬಹುತೇಕ ದೇಶಗಳಲ್ಲಿ ಕಿಲ್ಲರ್ ಕೋವಿಡ್-19 ಸೋಂಕು ಮತ್ತು ಸಾವು ಪ್ರಕರಣಗಳಲ್ಲಿ ತೀವ್ರ ಹೆಚ್ಚಳ ಕಂಡು ಬಂದಿದ್ದರೆ, ನ್ಯೂಜಿಲೆಂಡ್ ಈಗ ಈ ಪಿಡುಗಿನಿಂದ ಸಂಪೂರ್ಣ ಮುಕ್ತವಾಗುವತ್ತ ದಾಪುಗಾಲು ಹಾಕಿದೆ.

ದೇಶದಲ್ಲಿ ಸೋಂಕಿಗೆ ಒಳಗಾಗಿದ್ದ ಕೊನೆಯ ವ್ಯಕ್ತಿ ರೋಗದಿಂದ ಚೇತರಿಸಿಕೊಂಡಿದ್ದು, ಯಾವುದೇ ಹೊಸ ಕೇಸ್‍ಗಳು ಪತ್ತೆಯಾಗಿಲ್ಲ. ನಮ್ಮ ದೇಶದಲ್ಲಿ ಸೋಂಕಿನಿಂದ ಬಳಲುತ್ತಿದ್ದ ಕೊನೆಯ ರೋಗಿ ಸಂಪೂರ್ಣ ಚೇತರಿಸಿಕೊಂಡಿದ್ದಾರೆ.

ನ್ಯೂಜಿಲೆಂಡ್‍ನಲ್ಲಿ ಕೊರೊನಾ ಸೋಂಕು ಹಬ್ಬುವುದನ್ನು ನಾವು ಪರಿಪೂರ್ಣವಾಗಿ ತಡೆಗಟ್ಟಿದ್ದೇವೆ. ಮಹಾಮಾರಿಯನ್ನು ದೇಶದಿಂದ ನಿರ್ಮೂಲನೆ ಮಾಡಲಾಗಿದೆ ಎಂದು ಪ್ರಧಾನಮಂತ್ರಿ ಜಸಿಂಡಾ ಅರ್‍ಡ್ರೆನ್ ಹೇಳಿದ್ದಾರೆ.

ಕಳೆದ 17 ದಿನಗಳಿಂದ ನ್ಯೂಜಿಲೆಂಡ್‍ನ ಯಾವುದೇ ಭಾಗದಲ್ಲಿಯೂ ಹೊಸ ಕೋವಿಡ್ ವೈರಸ್ ಸೋಂಕು ಪ್ರಕರಣ ಪತ್ತೆಯಾಗಿಲ್ಲ. 17 ದಿನಗಳಿಂದ ದೇಶದಲ್ಲಿ 40,000 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಕಳೆದ 12 ದಿನಗಳಿಂದ ಯಾರೊಬ್ಬರು ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿಲ್ಲ ಎಂದು ಪ್ರಧಾನಿ ಜಸಿಂಡಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಐವತ್ತು ಲಕ್ಷ ಜನಸಂಖ್ಯೆ ಇರುವ ನ್ಯೂಜಿಲೆಂಡ್‍ನಲ್ಲಿ ವೈರಸ್ ರೋಗಕ್ಕೆ ಕೇವಲ 22 ಮಂದಿ ಬಲಿಯಾಗಿದ್ದು, 1,500 ಜನರಲ್ಲಿ ಮಾತ್ರ ಸೋಂಕು ಕಾಣಿಸಿಕೊಂಡಿತ್ತು.

Facebook Comments