ಮೃತ್ಯು ಕೋಟೆಯಾದ ಹೆಬೀ ಪ್ರಾಂತ್ಯ: ಒಂದೇ ದಿನ 2,420 ಜನರಿಗೆ ಕೊರೋನಾ ದೃಢ

ಈ ಸುದ್ದಿಯನ್ನು ಶೇರ್ ಮಾಡಿ

ಬೀಜಿಂಗ್, ಫೆ.15-ಮಾರಕ ಕೊರೋನಾ ವೈರಾಣು (ಕೋವಿಡ್-19) ಸೋಂಕಿನ ಕೇಂದ್ರ ಬಿಂದುವಾದ ಹೆಬೀ ಪ್ರಾಂತ್ಯ ಮೃತ್ಯುಕೋಟೆಯಾಗಿ ಪರಿಣಮಿಸಿದ್ದು, ಸಾವಿನ ಸಂಖ್ಯೆ 1660ಕ್ಕೂ ಮೀರಿದೆ.  ಮತ್ತೊಂದು ಆತಂಕಕಾರಿ ಸಂಗತಿಯೆಂದರೆ ಸೋಂಕು ಪೀಡಿತರಿಗೆ ಶುಶ್ರೂಷೆ ಮಾಡುತ್ತಿರುವ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ ಮತ್ತು ನರ್ಸ್‍ಗಳಿಗೂ ಸಹ ಸಾಂಕ್ರಾಮಿಕ ರೋಗ ತಗುಲಿದ್ದು, ಸಾವು-ನೋವಿನ ವರದಿಯಾಗಿದೆ.

ಹೆಬೀ ಪ್ರಾಂತ್ಯವೊಂದರಲ್ಲಿ 10ಕ್ಕೂ ಹೆಚ್ಚು ಆರೋಗ್ಯ ಆರೈಕೆ ಸಿಬ್ಬಂದಿ ಸಾವಿಗೀಡಾಗಿದ್ದು, 1 ಸಾವಿರಕ್ಕೂ ಅಧಿಕ ವೈದ್ಯರು ಮತ್ತು ನರ್ಸ್‍ಗಳಿಗೆ ಈ ರೋಗ ತಗುಲಿದ್ದು, ಆರೋಗ್ಯವಲಯದಲ್ಲೂ ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ.  ಸಾವಿನ ಮನೆಯಂತಾಗಿರುವ ವುಹಾನ್ ಸೇರಿದಂತೆ ಈ ಪ್ರಾಂತ್ಯದ ವಿವಿಧೆಡೆ ಹೊಸ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗುತ್ತಲೇ ಇದ್ದು, ಮರಣ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ಈ ಪ್ರಾಂತ್ಯದಲ್ಲಿ ನಿನ್ನೆ ಒಂದೇ ದಿನ 2,420 ರೋಗ ಪ್ರಕರಣಗಳು ದೃಢಪಟ್ಟಿದ್ದು, ಇವರಲ್ಲಿ 140ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ರೋಗ ಪೀಡಿತರ ಒಟ್ಟು ಸಂಖ್ಯೆ 65,000 ದಾಟಿರುವುದು ಪರಿಸ್ಥಿತಿಯ ಭೀಕರತೆಗೆ ಸಾಕ್ಷಿಯಾಗಿದೆ.  ಅಲ್ಲದೇ ಸೋಂಕು ಪೀಡಿತರಿಗೆ ಆರೋಗ್ಯ ಆರೈಕೆ ಶುಶ್ರೂಷೆ ನೀಡುತ್ತಿದ್ದ 10 ಆರೋಗ್ಯ ಕಾರ್ಯಕರ್ತರನ್ನು ಈ ಹೆಮ್ಮಾರಿ ಬಲಿ ಪಡೆದಿದೆ. ಸುಮಾರು 1,000 ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ನರ್ಸ್‍ಗಳಿಗೆ ಈ ಸೋಂಕು ತಗುಲಿದೆ.

ಸೋಂಕು ವ್ಯಾಪಿಸುವುದನ್ನು ತಡೆಗಟ್ಟಲು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಚೀನಾ ಆರೋಗ್ಯ ಇಲಾಖೆಯ ಅವಿರತ ಶ್ರಮಗಳ ನಡುವೆಯೂ ಕಿಲ್ಲರ್ ಕೊರೋನಾ ಸೋಂಕಿನ ಕಬಂಧ ಬಾಹುಗಳು ಮತ್ತಷ್ಟು ಬಿಗಿಯಾಗುತ್ತಿದ್ದು, ಚೀನಾದ ಅನೇಕರು ಒಂದಿಲ್ಲೊಂದು ರೀತಿಯಲ್ಲಿ ಇದರ ದುಷ್ಪರಿಣಾಮಕ್ಕೆ ಒಳಗಾಗುತ್ತಲೇ ಇದ್ದಾರೆ. ಹೆಬೀ ಪ್ರಾಂತ್ಯದ ವುಹಾನ್‍ನ ಆಸ್ಪತ್ರೆಗಳು ಕೊರೋನಾ ವೈರಸ್ ರೋಗಿಗಳಿಂದ ತುಂಬಿ ತುಳುಕುತ್ತಿದೆ.

Facebook Comments