BIG NEWS : ಕೇರಳದಲ್ಲಿ ಮಾರಣಾಂತಿಕ ನಿಫಾ ವೈರಸ್ ಪತ್ತೆ, ಬಾಲಕ ಬಲಿ, ಹೆಚ್ಚಿದ ಆತಂಕ..!

ಈ ಸುದ್ದಿಯನ್ನು ಶೇರ್ ಮಾಡಿ

ಕಾಚಿಕೋಡಾ, ಸೆ.5- ಕೊರೊನಾ ಆತಂಕದ ನಡುವೆಯೇ ಮತ್ತೊಂದು ಮಾರಣಾಂತಿಕ ಸಾಂಕ್ರಾಮಿಕ ರೋಗವಾಗಿರುವ ನಿಫಾ ಕೇರಳದಲ್ಲಿ ಪತ್ತೆಯಾಗಿದ್ದು, ಬಾಲಕನೊಬ್ಬ ಮೃತಪಟ್ಟಿದ್ದಾರೆ. ದೇಶದಲ್ಲೇ ಇದು ಆತಂಕ ಸೃಷ್ಟಿಸಿದ್ದು, ಕೇಂದ್ರ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ತಂಡ ರವಾನೆ ಮಾಡಿ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಕೇರಳದಲ್ಲಿ 12 ವರ್ಷದ ಬಾಲಕ ಇಂದು ಮುಂಜಾನೆ 5 ಗಂಟೆ ಸುಮಾರಿನಲ್ಲಿ ಮೃತಪಟ್ಟಿದ್ದು, ಅದಕ್ಕೆ ನಿಫಾ ಸೋಂಕು ಕಾರಣ ಎಂದು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆ ದೃಢಪಡಿಸಿದೆ.

ಕಳೆದ ನಾಲ್ಕು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಬಾಲಕನ ಸ್ಥಿತಿ ಶನಿವಾರ ರಾತ್ರಿ ಗಂಭೀರ ಸ್ವರೂಪಕ್ಕೆ ತಿರುಗಿತ್ತು. ಮೊದಲು ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ಸೇರಿಸಲಾಗಿತ್ತು. ನಂತರ ಮತ್ತೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕನಿಂದ ಸಂಗ್ರಹಿಸಲಾಗಿದ್ದ ಪ್ಲಾಸ್ಮಾ, ಸಿಎಸ್‍ಎಫ್, ಸೆರಮ್ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಒಂದು ದಿನ ಮೊದಲು ಪುಣೆಗೆ ಕಳುಹಿಸಲಾಗಿತ್ತು. ಅಲ್ಲಿ ಆತನಿಗೆ ನಿಫಾ ಸೋಂಕು ಇರುವುದು ಖಚಿತವಾಗಿದೆ.

ನಿಫಾ ವೈರಸ್ ಹಣ್ಣಿನ ಬಾವಲಿಗಳು, ಹಂದಿ ಹಾಗೂ ಇತರ ಪ್ರಾಣಿಗಳ ಜೊಲ್ಲಿನ ಮೂಲಕ ಹರಡುತ್ತದೆ. ಮನುಷ್ಯರಿಂದ ಮನುಷ್ಯರಿಗೆ ಸಾಂಕ್ರಾಮಿಕವಾಗಿ ಹರಡುವುದು ಖಚಿತವಾಗಿದೆ. ಈ ಸೋಂಕಿನಿಂದ ಮರಣದ ಪ್ರಮಾಣ ಶೇ.40 ರಿಂದ 75ರಷ್ಟಿದ್ದು, ಈವರೆಗೂ ಯಾವುದೇ ಲಸಿಕೆ ಅಥವಾ ಚಿಕಿತ್ಸೆ ಲಭ್ಯವಿಲ್ಲ. ಜೀವರಕ್ಷಕ ಔಷಧಗಳ ಮೂಲಕವೇ ಚಿಕಿತ್ಸೆ ನೀಡುವ ಪ್ರಯತ್ನಗಳು ನಡೆಯತ್ತಿವೆ.

2018ರಲ್ಲಿ ಕಾಜಿಕೋಡಾ ಜಿಲ್ಲೆಯಲ್ಲಿ ಈ ಸೋಂಕು ಪತ್ತೆಯಾಗಿದ್ದು, 17 ಜನ ಮೃತಪಟ್ಟು, 18 ಜನರಿಗೆ ಸೋಂಕು ಇರುವುದು ಖಚಿತವಾಗಿತ್ತು. ನಂತರ ಸೋಂಕು ನಿವಾರಣೆಯಾಗಿತ್ತು. ಈಗ ಮತ್ತೆ ಕಾಜಿಕೋಡಾ ಜಿಲ್ಲೆಯ ಮಣಪ್ಪುರದ ಬಾಲಕನಲ್ಲಿ ಪತ್ತೆಯಾಗಿರುವುದು ದೇಶಾದ್ಯಂತ ಆತಂಕ ಸೃಷ್ಟಿಸಿದೆ. ಕೇರಳ ರಾಜ್ಯದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಈ ಬಗ್ಗೆ ಮಾಹಿತಿ ನೀಡಿದ್ದು, ರಾಜ್ಯ ಸರ್ಕಾರ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಬಾಲಕನ ಮನೆಯ ಸುತ್ತಮುತ್ತ 3 ಕಿಲೋ ಮೀಟರ್‍ವರೆಗೂ ಜನಸಂಚಾರ ನಿಷೇಧಿಸಲಾಗಿದೆ. ಆರೋಗ್ಯ ಇಲಾಖೆಯ ಪ್ರಮಾಣೀಕೃತ ಮಾರ್ಗಸೂಚಿಗಳನ್ನು ಪಾಲನೆ ಮಾಡಿ ಶವ ಸಂಸ್ಕಾರ ಮಾಡಲಾಗಿದೆ.

ಕಳೆದ 12 ದಿನಗಳಿಂದ ಬಾಲಕನ ಸಂಪರ್ಕದಲ್ಲಿದ್ದವರನ್ನು ಪತ್ತೆಹಚ್ಚಿ ಪರೀಕ್ಷೆಗೊಳಪಡಿಸಲಾಗುತ್ತಿದೆ. ಆತನ ಕುಟುಂಬದ ಸದಸ್ಯರು, ಆತನೊಂದಿಗೆ ಆಟವಾಡಿದ ಮಕ್ಕಳು, ನೆರೆಹೊರೆಯವರನ್ನು ಪರೀಕ್ಷೆಗೆ ಒಳಪಡಿಸಿರುವುದಾಗಿ ಸಚಿವರು ತಿಳಿಸಿದ್ದಾರೆ. ಸೋಂಕನ್ನು ಪತ್ತೆಹಚ್ಚಿ ನಿಯಂತ್ರಿಸಲು, ಕಠಿಣವಾದ ಕ್ವಾರಂಟೈನ್ ಮಾಡಲು, ಅಗತ್ಯವಿದ್ದವರನ್ನು ಪ್ರತ್ಯೇಕವಾಗಿರಿಸಿ ನಿಗಾವಣೆ ಮಾಡಲು ಕ್ರಮ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ಈ ನಡುವೆ ಕೇಂದ್ರ ಸರ್ಕಾರ ಕೂಡ ವಿಶೇಷ ತಂಡವನ್ನು ತಕ್ಷಣವೇ ರವಾನೆ ಮಾಡಿದೆ. ರಾಜ್ಯ ಸರ್ಕಾರಕ್ಕೆ ಅಗತ್ಯವಾದ ಎಲ್ಲ ರೀತಿಯ ತಾಂತ್ರಿಕ ನೆರವು ನೀಡಲು ಈ ತಂಡ ಸಹಕರಿಸಲಿದೆ. ರೋಗ ಪತ್ತೆ, ಪರೀಕ್ಷೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಹೆಚ್ಚಿನ ಅಧ್ಯಯನ ನಡೆಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಕೊರೊನಾ ಮೂರನೆ ಅಲೆ ಮಕ್ಕಳನ್ನು ಬಾಧಿಸಲಿದೆ ಎಂಬ ಆತಂಕದ ನಡುವೆಯೇ ನಿಫಾ ವೈರಸ್ ಪತ್ತೆಯಾಗಿರುವುದು ಆತಂಕ ಹೆಚ್ಚಿಸಿದೆ. ಈ ಮೊದಲು 2019ರಲ್ಲಿ ಮೊದಲ ಬಾರಿಗೆ ಕೊರೊನಾ ಸೋಂಕು ಕೇರಳದಿಂದಲೇ ಪತ್ತೆಯಾಗಿತ್ತು. ಈಗ ನಿಫಾ ಕೂಡ ಅಲ್ಲಿಯೇ ಪತ್ತೆಯಾಗಿರುವುದು ಗಮನಾರ್ಹ.

Facebook Comments