ವಿದೇಶಿ ದೇಣಿಗೆ ನಿಯಂತ್ರಣ (ಎನ್‍ಜಿಒ) ತಿದ್ದುಪಡಿ ಮಸೂದೆಗೆ ಸಂಸತ್ ಅನುಮೋದನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.23-ವಿಶ್ವದ ವಿವಿಧ ರಾಷ್ಟ್ರಗಳಿಂದ ಸರ್ಕಾರೇತರ ಸಂಸ್ಥೆಗಳಿಗೆ (ಎನ್‍ಜಿಒಗಳು) ಬರುವ ಹಣಕಾಸು ನೆರವು ಮತ್ತು ಇದಕ್ಕೆ ಸಂಬಂಧಪಟ್ಟ ವಹಿವಾಟುಗಳ ಕುರಿತು ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ವಿದೇಶಿ ದೇಣಿಗೆಗಳ (ನಿಯಂತ್ರಣ) ತಿದ್ದುಪಡಿ ಮಸೂದೆ-2020ಕ್ಕೆ ಸಂಸತ್ ಇಂದು ಅನುಮೋದನೆ ನೀಡಿದೆ.

ಕೃಷಿ ಮಸೂದೆ ಅಂಗೀಕಾರ ಸಂದರ್ಭದಲ್ಲಿ ಭಾರೀ ಗದ್ದಲ ಮತ್ತು ಅನುಚಿತ ವರ್ತನೆ ಆರೋಪದ ಮೇಲೆ ಅಮಾನತುಗೊಳಿಸಲಾದ ಎಂಟು ಸದಸ್ಯರ ಸಸ್ಪೆಂಡ್ ರದ್ದುಗೊಳಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಕಲಾಪ ಬಹಿಷ್ಕರಿಸಿರುವ ನಡುವೆಯೇ ಸಂಸತ್ತಿನ ಮೇಲ್ಮನೆಯಲ್ಲಿ ಈ ವಿಧೇಯಕವನ್ನು ಅವಿರೋಧವಾಗಿ ಅನುಮೋದಿಸಲಾಯಿತು.

ನೋಂದಣಿ ಸಂದರ್ಭದಲ್ಲಿ ತಮ್ಮ ಆಧಾರ್ ಸಂಖ್ಯೆಗಳ ಎನ್‍ಜಿಒ ಪದಾಧಿಗಳು ಮಾಹಿತಿ ಒದಗಿಸುವುದನ್ನು ಈ ಮಸೂದೆಯ ಅಡಿ ಕಡ್ಡಾಯಗೊಳಿಸಲಾಗಿದ್ದು, ವಿವಿಧ ಇತರ ಮಾರ್ಪಾಡುಗಳನ್ನು ಮಾಡಲಾಗಿದೆ.

ಮಸೂದೆ ಕುರಿತ ಚರ್ಚೆ ವೇಳೆ ಮಾತನಾಡಿದ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್, ಈ ವಿದೇಯಕ ಯಾವುದೇ ಎನ್‍ಜಿಒಗಳ ವಿರುದ್ಧ ಅಲ್ಲ ಎಂದು ಸ್ಪಷ್ಟಪಡಿಸಿದರಲ್ಲದೇ, ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶವನ್ನು ಇದು ಹೊಂದಿದೆ ಎಂದರು. ದೇಶದಲ್ಲಿ ಉತ್ತಮ ಕೆಲಸಗಳನ್ನು ಮಾಡಲು ಬಯಸುವ ಸದುದ್ದೇಶದ ಎನ್‍ಜಿಒಗಳ ಹಿತಾಸಕ್ತಿಗಾಗಿ ಈ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸಲಾಗಿದೆ ಎಂದು ಸಚಿವರು ಹೇಳಿದರು.

ಸೋಮವಾರ ಲೋಕಸಭೆಯಲ್ಲಿ ಈ ವಿಧೇಯಕವನ್ನು ಅನುಮೋದಿಸಲಾಯಿತು. ಈಗ ರಾಜ್ಯಸಭೆಯಲ್ಲಿಯೂ ಅಂಗೀಕಾರ ದೊರೆತಿದ್ದು, ಅಂಕಿತಕ್ಕಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಮಸೂದೆಯನ್ನು ರವಾನಿಸಲಾಗಿದೆ.

Facebook Comments