ಬಿಗ್ ನ್ಯೂಸ್ : ಎನ್‍ಜಿಟಿ ವಿಧಿಸಿದ್ದ 100 ಕೋಟಿ ದಂಡ ಪ್ರಶ್ನಿಸಿದ್ದ ರಾಜ್ಯ ಸರ್ಕಾರಕ್ಕೆ ಹಿನ್ನಡೆ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ನ.22-ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಬೆಂಗಳೂರಿನ ಬೆಳಂದೂರು ಕೆರೆ ಮಾಲಿನ್ಯ ಮತ್ತು ಬೆಂಕಿ ಕಾಣಿಸಿಕೊಂಡ ಪ್ರಕರಣದ ಸಂಬಂಧ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ(ಎನ್‍ಜಿಟಿ)ವಿಧಿಸಿದ್ದ 100 ಕೋಟಿ ರೂ.ಗಳ ದಂಡ ವಿಧಿಸಿದ ಅಧಿಕಾರದ ವ್ಯಾಪ್ತಿಯನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ.

ಈ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ದ್ವಿಸದಸ್ಯನ್ಯಾಯಪೀಠವು ಅರ್ಜಿಯನ್ನು ವಜಾಗೊಳಿಸಿದೆಯಲ್ಲದೆ ರಾಜ್ಯವನ್ನು ತರಾಟೆಗೆ ತೆಗೆದುಕೊಂಡಿದೆ. ಆತಂಕಕಾರಿ ಪರಿಸರ ಮಾಲಿನ್ಯಕ್ಕೆ ಕಾರಣವಾದ ಬೆಳ್ಳಂದೂರು ಕೆರೆ ಪ್ರಕರಣದಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷಕ್ಕೆ ಎನ್‍ಜಿಟಿ 100 ಕೋಟಿ ರೂ. ದಂಡ ವಿಧಿಸಿದೆ.

ಈ ಜುಲ್ಮಾನೆ ಮೊತ್ತವನ್ನು ಏಕೆ ಪಾವತಿಸಿಲ್ಲ ಎಂದು ಪೀಠವು ರಾಜ್ಯ ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿತು. ಪರಿಸರ ರಕ್ಷಣೆಗೆ ಸರಿಯಾಗಿ ಕೆಲಸ ಮಾಡದ ಕಾರಣ ದಂಡ ವಿಧಿಸಲಾಗಿದೆ. ಆದರೆ ಈ ಮೊತ್ತವನ್ನು ಪಾವತಿಸಲು ಏನು ಸಮಸ್ಯೆ ಎಂದು ಪ್ರಶ್ನಿಸಿದ ನ್ಯಾಯಪೀಠವರು ಹಸಿರು ನ್ಯಾಯಮಂಡಳಿಯ ಕಾರ್ಯ ವ್ಯಾಪ್ತಿಯನ್ನು ಪ್ರಶ್ನಿಸುವುದು ಸರಿಯಲ್ಲ ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

ಎನ್‍ಜಿಟಿ ಈ ಪ್ರಕರಣದ ಸಂಬಂಧ ಮುಂದೆ ನಡೆಸುವ ಎಲ್ಲಾ ವಿಚಾರಣೆಗಳು ರಾಜ್ಯ ಸರ್ಕಾರ ಕಡ್ಡಾಯವಾಗಿ ಹಾಜರಾಗಬೇಕೆಂದು ಕೂಡ ಸರ್ವೋನ್ನತ ನ್ಯಾಯಾಲಯ ಸೂಚನೆ ನೀಡಿತು.

Facebook Comments