ಬೆಂಗಳೂರಿನ 12 ಕಡೆ ಏಕಕಾಲದಲ್ಲಿ ಎನ್‍ಐಎ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.24- ಕೆಜಿಹಳ್ಳಿ ಮತ್ತು ಡಿಜೆಹಳ್ಳಿ ಗಲಭೆ ಪ್ರಕರಣ ಸಂಬಂಧ ಎನ್‍ಐಎ ಬೆಂಗಳೂರು ನಗರದ 12 ಕಡೆ ಏಕಕಾಲದಲ್ಲಿ ದಾಳಿ ಮಾಡಿದೆ. ನಗರದ ಪೂರ್ವ, ಉತ್ತರ, ಈಶಾನ್ಯ ಮುಂತಾದ ಭಾಗಗಳಲ್ಲಿನ ಆರೋಪಿಗಳ ಮನೆಗಳಿಗೆ ಧಾವಿಸಿದ ಎನ್‍ಐಎ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.

ಈ ಗಲಭೆ ಪ್ರಕರಣದಲ್ಲಿ ಭಯೋತ್ಪಾದನೆಯ ನಂಟು ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಎನ್‍ಐಎ ಈ ಶೋಧ ಕಾರ್ಯ ನಡೆಸಿದೆ.ಕೆಜಿಹಳ್ಳಿ ಮತ್ತು ಡಿಜೆಹಳ್ಳಿ ಗಲಭೆ ಪ್ರಕರಣದಲ್ಲಿ ಕೆಲವು ಸಂಘಟನೆ ಮುಖಂಡರು ಭಾಗಿಯಾಗಿದ್ದರು.

ಅವರನ್ನು ಸಿಸಿಬಿ ಪೊಲೀಸರು ಮತ್ತು ಪೂರ್ವ ವಿಭಾಗದ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಭಯೋತ್ಪಾದನೆ ನಂಟು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿರುವ ಎನ್‍ಐಎ ಅಧಿಕಾರಿಗಳು ಇಂದು ವಿವಿಧ ಭಾಗಗಳಲ್ಲಿ ಆರೋಪಿ ಮನೆಗಳಿಗೆ ತೆರಳಿ ಶೋಧ ನಡೆಸಿ ತನಿಖೆ ಮುಂದುವರೆಸಿದ್ದಾರೆ.

ಗಲಭೆ ಸಂದರ್ಭದಲ್ಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮತ್ತು ಅವರ ಸಂಬಂಧಿಕರ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ, ಬೆಂಕಿ ಹಚ್ಚಿ ಹಣ, ಆಭರಣ ದೋಚಿದ್ದರು. ಅಲ್ಲದೆ, ರಸ್ತೆಗಳಲ್ಲಿ ನಿಲ್ಲಿಸಲಾಗಿದ್ದ ಸಾರ್ವಜನಿಕರ ವಾಹನಗಳಿಗೂ ಬೆಂಕಿ ಹಚ್ಚಿದ್ದರು.

ಕೆಜಿಹಳ್ಳಿ ಮತ್ತು ಡಿಜೆಹಳ್ಳಿ ಪೊಲೀಸ್ ಠಾಣೆಗಳ ಮೇಲೂ ಕಲ್ಲು ತೂರಾಟ ನಡೆಸಿ ದಾಂಧಲೆ ನಡೆಸಿದ್ದರು. ದಾಖಲಾಗಿದ್ದ ಪ್ರಕರಣಗಳ ಪೈಕಿ ಮೂರು ಪ್ರಮುಖ ಪ್ರಕರಣಗಳನ್ನು ಸಿಸಿಬಿ ತನಿಖೆ ನಡೆಸುತ್ತಿದ್ದರೆ. ಉಳಿದ ಪ್ರಕರಣಗಳನ್ನು ಪೂರ್ವ ವಿಭಾಗದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Facebook Comments