ಐಸಿಸ್ ಜೊತೆ ನಂಟು : ಕೊಯಮತ್ತೂರಿನ 7 ಸ್ಥಳಗಳ ಮೇಲೆ ಎನ್‍ಐಎ ದಾಳಿ..!

ಈ ಸುದ್ದಿಯನ್ನು ಶೇರ್ ಮಾಡಿ

ಕೊಯಮತ್ತೂರು, ಜೂ.12-ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಈಸ್ಟರ್ ಸಂಡೆ ದಿನದಂದು ನಡೆದ ಸರಣಿ ಬಾಂಬ್ ಸ್ಫೋಟಕ್ಕೆ ಕಾರಣವಾದ ಇಸ್ಲಾಮಿಕ್ ಸ್ಟೇಟ್ ಉಗ್ರರೊಂದಿಗೆ ಸಂಪರ್ಕ ಹೊಂದಿದರೆನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ಅಧಿಕಾರಿಗಳು ಇಂದು ಬೆಳಗ್ಗೆ ತಮಿಳುನಾಡಿನ ಚೆನ್ನೈ ಕೊಯಮತ್ತೂರು ಜಿಲ್ಲೆಯ ಏಳು ಸ್ಥಳಗಳ ಮೇಲೆ ದಾಳಿ ನಡೆಸಿದರು.

ದಾಳಿಗಳ ಸಂದರ್ಭದಲ್ಲಿ ಕೆಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿ ಐಎಸ್ ಉಗ್ರರ ಕುರಿತು ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಿದ್ಧಾರೆ.

ಶ್ರೀಲಂಕಾ ರಾಜಧಾನಿ ಕೊಲೊಂಬೋ ಸೇರಿದಂತೆ ಐದು ಚರ್ಚ್‍ಗಳು ಮತ್ತು ಮೂರು ಐಷಾರಾಮಿ ಹೊಟೇಲ್‍ಗಳ ಮೇಲೆ ಮಹಿಳೆ ಸೇರಿದಂತೆ ಒಂಭತ್ತು ಮಾನವ ಬಾಂಬರ್‍ಗಳು ಸರಣಿ ದಾಳಿಗಳನ್ನು ನಡೆಸಿದ್ದರು. ಈ ಭೀಕರ ದಾಳಿಯಲ್ಲಿ ಭಾರತೀಯರೂ ಸೇರಿದಂತೆ 250ಕ್ಕೂ ಹೆಚ್ಚು ಮಂದಿ ಹತರಾಗಿ, 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

ಈ ದಾಳಿಕೋರರು ಈ ವಿಧ್ವಂಸಕ ಕೃತ್ಯಕ್ಕೆ ಮುನ್ನ ತಮಿಳುನಾಡು, ಬೆಂಗಳೂರು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ ದಾಳಿಗೆ ಪೂರ್ವಸಿದ್ಧತೆ ನಡೆಸಿದ್ದರು ಎಂಬ ಮಾಹಿತಿ ಲಭಿಸಿತ್ತು.
ಈ ಹಿನ್ನೆಲೆಯಲ್ಲಿ ಎನ್‍ಐಎ ಅಧಿಕಾರಿಗಳ ತಂಡ ಕೊಲೊಂಬೊಗೆ ತೆರಳಿ ಅಲ್ಲಿನ ಪೊಲೀಸ್ ಮತ್ತು ಸೇನೆಯ ಉನ್ನತಾಧಿಕಾರಿಗಳೊಂದಿಗೆ ಮಹತ್ವದ ಮಾತುಕತೆ ನಡೆಸಿ ಕೆಲವೊಂದದು ಮಾಹಿತಿ ಪಡೆದುಕೊಂಡಿದ್ದರು.

ಅದರ ಬೆನ್ನಲ್ಲೇ ಕೊಯಮತ್ತೂರಿನ ಏಳು ಸ್ಥಳಗಳ ಮೇಲೆ ಎನ್‍ಐಎ ಅಧಿಕಾರಿಗಳು ದಾಳಿ ನಡೆಸಿ ಕೆಲವರನ್ನು ವಶಕ್ಕೆ ಪಡೆದಿದ್ದಾರೆ. ಇವರು ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆ ಜೊತೆ ಸಖ್ಯ ಹೊಂದಿರುವವರೆಂದು ಹೇಳಲಾಗಿದೆ.

ಶ್ರೀಲಂಕಾ ಈಸ್ಟರ್ ಸಂಡೇ ಬಾಂಬ್ ದಾಳಿಗೆ ಸಂಬಂಧಿಸಿದಂತೆ ಇವರ ಪಾತ್ರವೇನು ಎಂಬ ಬಗ್ಗೆ ಮತ್ತಷ್ಟು ವಿವಾರಣೆ ಪ್ರಗತಿಯಲ್ಲಿದೆ ಎಂದು ಉನ್ನತ ಮೂಲಗಳು ಹೇಳಿವೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin