ಮಾಜಿ ಶಾಸಕನ ಪುತ್ರನ ಮನೆಯ ಮೇಲೆ NIA ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು, ಆ.4- ಸಿರಿಯಾ ಮೂಲದ ಭಯೋತ್ಪಾದಕ ಸಂಘಟನೆಯ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ಶಂಕೆಯ ಮೇಲೆ ಮಾಜಿ ಶಾಸಕರ ಪುತ್ರನ ಮನೆಯ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ಅಧಿಕಾರಿಗಳು ದಾಳಿ ನಡೆಸಿದ್ದು, ವಿಚಾರಣೆ ಮುಂದುವರೆಸಿದ್ದಾರೆ. ಮಂಗಳೂರಿನ ಮಸ್ತಿಕಟ್ಟೆಯಲ್ಲಿರುವ ಮಾಜಿ ಶಾಸಕರ ಪುತ್ರ ಬಿ.ಎಂ.ಬಾಷಾ ಅವರ ಮನೆಯ ಮೇಲೆ ಎನ್‍ಐಎ ಐಜಿಪಿ ಉಮಾ ಅವರ ನೇತೃತ್ವದಲ್ಲಿ 25 ಮಂದಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ಸ್ಥಳೀಯ ಪೊಲೀಸರ ರಕ್ಷಣೆಯಲ್ಲಿ ದಾಳಿ ನಡೆದಿದ್ದು, ನಾನಾ ರೀತಿಯಲ್ಲಿ ತನಿಖೆ ಮುಂದುವರೆದಿದೆ. ಬಿ.ಎಂ.ಬಾಷಾ ಅವರು ರಿಯಲ್‍ಎಸ್ಟೇಟ್ ಉದ್ಯಮ ನಡೆಸುತ್ತಿದ್ದು, ಅವರ ಇಬ್ಬರು ಮಕ್ಕಳು ವಿದೇಶದಲ್ಲಿ ನೆಲೆಸಿದ್ದಾರೆ. ಅವರ ಪುತ್ರಿ ಕೆಲ ವರ್ಷಗಳ ಹಿಂದೆ ಕೇರಳದಿಂದ ನಾಪತ್ತೆಯಾಗಿದ್ದು, ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಸ್ಸಿಸ್) ಸೇರಿದ್ದಾರೆ ಎಂದು ಶಂಕಿಸಲಾಗಿದೆ.

ಬಿ.ಎಂ.ಬಾಷಾರ ಕುಟುಂಬದ ಸದಸ್ಯರು ಉಗ್ರ ಸಂಘಟನೆ ಐಸ್ಸಿಸ್ ನಡೆಸುವ ಯುಟ್ಯೂಬ್ ಚಾನೆಲ್‍ನ ಸಬ್‍ಸ್ಕ್ರೈಬ್ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಉಗ್ರ ಸಂಘಟನೆಯ ಬಗ್ಗೆ ಮೃದು ದೋರಣೆ ಹೊಂದಿರಬಹುದು ಎಂಬ ಶಂಕೆಯಿದೆ.  ಜೊತೆಗೆ ಜಮ್ಮು ಕಾಶ್ಮಿರದಲ್ಲಿ ಉಗ್ರ ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಯುವಕರ ಜೊತೆ ದೂರವಾಣಿ ಸಂಭಾಷಣೆ ನಡೆಸಿರುವ ದಾಖಲೆಗಳನ್ನು ಆಧರಿಸಿ ಎನ್‍ಐಎ ವಿಚಾರಣೆ ನಡೆಸಿದೆ ಎಂದು ಹೇಳಲಾಗಿದೆ.

ಬಿ.ಎಂ.ಬಾಷಾ ಅವರು ಮಾಜಿ ಶಾಸಕ ಬಿ.ಎಂ.ಇದಿನಬ್ಬ ಅವರ ಪುತ್ರರಾಗಿದ್ದಾರೆ. ಉಳ್ಳಾಲ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿದ್ದ ಇದಿನಬ್ಬ ಅವರು ಸಾಹಿತಿ, ಹೋರಾಟ ಹಾಗೂ ರಾಜಕೀಯದಲ್ಲಿ ತೊಡಗಿಸಿಕೊಂಡು ಒಳ್ಳೆಯ ಹೆಸರು ಪಡೆದಿದ್ದರು. ಈಗ ಅವರ ಪುತ್ರನ ಮೇಲೆ ಉಗ್ರ ಚಟುವಟಿಕೆಯ ಕರಿನೆರಳಿನ ಆರೋಪ ಕೇಳಿ ಬಂದಿದೆ.

Facebook Comments