ಬೆಂಗಳೂರಿನಲ್ಲಿ ಎನ್‍ಐಎ ಕಾರ್ಯಾಚರಣೆ, ಉಗ್ರರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ. 28- ಭಯೋತ್ಪಾದನೆ ಚಟುವಟಿಕೆಗಳ ವಿರುದ್ಧ ಸಮರ ಸಾರಿರುವ ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ನಗರದಲ್ಲಿ ಮತ್ತಿಬ್ಬರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸುತ್ತಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆ ವೈದ್ಯ ಡಾ.ಬ್ರೇವ್ ಬಸವನಗುಡಿ ಅಲಿಯಾಸ್ ಅಬ್ದುಲ್ ರೆಹೆಮಾನ್‍ನನ್ನು ಎನ್‍ಎಐ ತಂಡ ಬಂಧಿಸಿತ್ತು.

ಆತನ ವಿಚಾರಣೆ ವೇಳೆ ದೊರೆತ ಮಾಹಿತಿ ಆಧರಿಸಿ ಮತ್ತಷ್ಟು ಕಾರ್ಯಾಚರಣೆ ನಡೆಸಲಾಗಿದ್ದು, ಇಂದು ಥಣೀಸಂದ್ರದಲ್ಲಿ ಎರಡು ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು, ಇಬ್ಬರು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರು ಬೆಂಗಳೂರಿನಲ್ಲಿ ಸಿರಿಯಾದ ಉಗ್ರ ಸಂಘಟನೆ ಐಸಿಸ್‍ಗೆ ಯುವಕರನ್ನು ನೇಮಿಸುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಇದಕ್ಕೂ ಮೊದಲು ಬಂಧಿತ ಅಬ್ದುಲ್ ರೆಹೆಮಾನ್‍ನ ಮಾಹಿತಿ ಆಧರಿಸಿ ಅಬ್ದುಲ್ ಖಾದರ್ ಮತ್ತು ಇರ್ಫಾನ್ ನಾಸೀರ್ ಎಂಬ ಇಬ್ಬರನ್ನು ಎನ್‍ಐಎ ಅಧಿಕಾರಿಗಳು ಬಂಧಿಸಿದ್ದರು. ಬಂಧಿತರು ಸಿರಿಯಾದ ಐಸಿಸ್ ಉಗ್ರ ಸಂಘಟನೆಗೆ ಕರ್ನಾಟಕದಿಂದ 7 ಮಂದಿಯನ್ನು ಕಳುಹಿಸಿದ್ದಾರೆ ಎಂಬ ಮಾಹಿತಿ ತನಿಖೆಯ ವೇಳೆ ತಿಳಿದು ಬಂದಿತ್ತು.

ಭಯೋತ್ಪಾದನೆಯ ಜಾಲದ ಮತ್ತಷ್ಟು ಆಳ-ಅಗಲಗಳನ್ನು ಕೆದಕುತ್ತಿರುವ ಎನ್‍ಐಎ ಕಾರ್ಯಾಚರಣೆಯನ್ನು ಮುಂದುವರೆಸಿದೆ. ಥಣೀಸಂದ್ರದಲ್ಲಿ ದಿಢೀರ್ ದಾಳಿ ಮಾಡಿ ಇಬ್ಬರನ್ನು ವಶಕ್ಕೆ ಪಡೆಯುತ್ತಿದ್ದಂತೆ ನೆರೆಹೊರೆಗಳಲ್ಲಿ ಬಿಸಿ ಬಿಸಿ ಚರ್ಚೆಗಳು ಆರಂಭವಾದವು.

Facebook Comments