ನಿರ್ಮಾಪಕ ಮುನಿರತ್ನ ಅವರಿಗೆ ಒಬ್ಬ ನಟನಾಗಿ ಶುಭಕೋರಿದ್ದೇನೇ ಅಷ್ಟೇ : ನಿಖಿಲ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.25-ನಿರ್ಮಾಪಕನಿಗೆ ನಟನಾಗಿ ನಾನು ಶುಭಕೋರಿದ್ದೇನೇ ಹೊರತು ಯುವ ಜನತಾದಳ ನಾಯಕನಾಗಿ ಅಲ್ಲ ಎಂದು ಜೆಡಿಎಸ್ ಯುವ ಜನತಾದಳದ ರಾಜ್ಯಾಧ್ಯಕ್ಷ ಹಾಗೂ ನಟ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ನಿರ್ಮಾಪಕ ಮುನಿರತ್ನ ಅವರ ಹುಟ್ಟಹಬ್ಬಕ್ಕೆ ಶುಭ ಕೋರಿದ್ದಕ್ಕೆ ಹಲವರು ಆಕ್ಷೇಪಿಸಿರುವುದು ನನ್ನ ಗಮನಕ್ಕೆ ಬಂತು. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ದ್ರೋಹ ಬಗೆದವರಿಗೆ ನೀವು ಶುಭಕೋರಬಾರದಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಎಲ್ಲರ ಅಭಿಪ್ರಾಯಗಳನ್ನೂ ಗೌರವಿಸುತ್ತೇನೆ.

ರಾಜಕೀಯ ಸಂಘರ್ಷಗಳನ್ನು ಮೀರಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮೋದಿ ಅವರಿಗೆ ಶುಭ ಕೋರುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ದೇವೇಗೌಡರಿಗೆ ಶುಭ ಕೋರುತ್ತಾರೆ. ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪನವರು ಕುಮಾರಸ್ವಾಮಿ ಅವರಿಗೆ ಶುಭ ಕೋರುತ್ತಾರೆ.

ಕುಮಾರಸ್ವಾಮಿ ಅವರೂ ಶುಭಾರೈಕೆಗಳನ್ನು ತಿಳಿಸುತ್ತಾರೆ. ಇದು ಕರ್ನಾಟಕದ ರಾಜಕೀಯದ ಸತ್ಸಂಪ್ರದಾಯ. ಹೀಗಾಗಿ ನನ್ನ ಶುಭಕೋರಿಕೆಯಲ್ಲಿ ತಪ್ಪಿರದು ಎಂದು ಭಾವಿಸುತ್ತೇನೆ ಎಂದು ನಿಖಿಲ್ ಫೇಸ್ ಬುಕ್ ನಲ್ಲಿ ತಿಳಿಸಿದ್ದಾರೆ.

ಮುನಿರತ್ನ ರಾಜಕೀಯವಾಗಿ ಕುಮಾರಸ್ವಾಮಿ ಅವರಿಗೆ ಏನೇ ಮಾಡಿರಬಹುದು. ಅವುಗಳಿಗೆ ಕಣದಲ್ಲಿ ಉತ್ತರಿಸುವ ಪ್ರಯತ್ನ ಮಾಡೋಣ. ಅದರಲ್ಲಿ ಎರಡು ಮಾತಿಲ್ಲ. ಕಾರ್ಯಕರ್ತನಾಗಿ, ಯುವ ಜನತಾದಳದ ಮುಂದಾಳುವಾಗಿ ನನ್ನ ದುಡಿಮೆ ಪಕ್ಷಕ್ಕೆ ಮಾತ್ರ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Facebook Comments

Sri Raghav

Admin