ಸಿಂಪಲ್ಲಾಗಿ ನಡೀತು ನಿಖಿಲ್-ರೇವತಿ ಕಲ್ಯಾಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.17- ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಪುತ್ರ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ಹಾಗೂ ನಟ ನಿಖಿಲ್ ಗೌಡ ಮತ್ತು ರೇವತಿ ಅವರ ವಿವಾಹ ಇಂದು ರಾಮನಗರ ತಾಲ್ಲೂಕಿನ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ಸರಳವಾಗಿ ನಡೆಯಿತು.

ಕೊರೊನಾ ಸೋಂಕು ಹರಡುವುದನ್ನು ತಡೆಯಲು ಲಾಕ್ ಡೌನ್ ಮುಂದುವರೆಸಿರುವುದರಿಂದ ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ ಎರಡೂ ಕುಟುಂಬದವರ ಸಮ್ಮುಖದಲ್ಲಿ ಮದುವೆಯು ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ನಡೆಸಲಾಯಿತು.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಚೆನ್ನಮ್ಮ ದೇವೇಗೌಡ, ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ವಧುವಿನ ತಾಯಿ ಶ್ರೀದೇವಿ, ತಂದೆ ಮಂಜುನಾಥ್ ಸೇರಿದಂತೆ ಎರಡೂ ಕುಟುಂಬದವರು ಭಾಗವಹಿಸಿದ್ದರು.ದೇವೇಗೌಡ ದಂಪತಿ ಸೇರಿದಂತೆ ಮದುವೆಯಲ್ಲಿ ಭಾಗವಹಿಸಿದ್ದವರು ನೂತನ ವಧು-ವರರಿಗೆ ಶುಭ ಕೋರಿದರು.

ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಗಣ್ಯರು, ಜೆಡಿಎಸ್ ಮುಖಂಡರು, ಜನಪ್ರತಿನಿಧಿಗಳಿಗೂ ಪ್ರವೇಶ ನಿರಾಕರಿಸಲಾಗಿತ್ತು. ಎರಡೂ ಕುಟುಂಬಗಳ ಸೀಮಿತ ಮಂದಿ ಮಾತ್ರ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ರಾಮನಗರ- ಮಂಡ್ಯ, ರಾಮನಗರ- ಬೆಂಗಳೂರು ಗಡಿಗಳಲ್ಲಿ ವಾಹನ ಸಂಚಾರದ ಮೇಲೆ ಪೊಲೀಸರು ಕಟ್ಟೆಚ್ಚರವಹಿಸಿದ್ದರು.

ಬೆಂಗಳೂರಿನ ಮನೆಯಲ್ಲಿ ಸರಳವಾಗಿ ಮದುವೆ ನಡೆಸಲು ಎರಡೂ ಕುಟುಂಬದವರು ತೀರ್ಮಾನಿಸಿದ್ದರು. ಆದರೆ, ಬೆಂಗಳೂರು ರೆಡ್ ಝೋನ್ ಆಗಿರುವುದರಿಂದ ಮದುವೆಯನ್ನು ತೋಟದ ಮನೆಗೆ ಸ್ಥಳಾಂತರಿಸಲಾಗಿತ್ತು. ವಿವಾಹಕ್ಕೆ ಎಲ್ಲರೂ ಭಾಗವಹಿಸಲು ಅವಕಾಶವಿಲ್ಲ.

ತಾವೆಲ್ಲರೂ ತಾವಿದ್ದ ಸ್ಥಳದಿಂದಲೇ ವಧು- ವರರಿಗೆ ಆಶೀರ್ವಾದ ಮಾಡಬೇಕು. ಕೊರೋನಾ ಪಿಡುಗು ಮರೆಯಾದ ಮೇಲೆ ತಮ್ಮೆಲ್ಲರ ಆಶೀರ್ವಾದಕ್ಕಾಗಿ ದಂಪತಿಗಳು ಬರಲಿದ್ದಾರೆ. ಅಭಿಮಾನದಿಂದ ಹೆಚ್ಚು ಜನರು ಮದುವೆಗೆ ಆಗಮಿಸಿ, ನಮ್ಮಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುವುದು ಬೇಡ ಎಂದು ಕುಮಾರಸ್ವಾಮಿ ಅವರು ಮನವಿ ಮಾಡಿಕೊಂಡಿದ್ದರು.

 

 

Facebook Comments

Sri Raghav

Admin