ಜೆಡಿಎಸ್‍ಗೆ ಯಾರೊಂದಿಗೂ ಮೈತ್ರಿ ಬೇಕಿಲ್ಲ : ನಿಖಿಲ್ ಕುಮಾರಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.4- ಜೆಡಿಎಸ್‍ಗೆ ಬೇರೆ ಪಕ್ಷದ ಜೊತೆ ವಿಲೀನವಾಗುವ ಅನಿವಾರ್ಯತೆಯಾಗಲಿ, ಆ ರೀತಿಯ ಪರಿಸ್ಥಿತಿಯಾಗಲಿ ಬಂದಿಲ್ಲ. ಬರುವುದೂ ಇಲ್ಲ ಎಂದು ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.  ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಲೀನದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ ಎಂದರು.

ಜೆಡಿಎಸ್ ಕಚೇರಿ ಜೆಪಿಭವನದಲ್ಲಿಂದು ನಡೆದ ಯುವ ಮತ್ತು ವಿದ್ಯಾರ್ಥಿ ಜನತಾದಳ ವಿಭಾಗಗಳ ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರನ್ನು ಒಳಗೊಂಡ ಯುವ ಮುಖಂಡರ ಸಂಘಟನಾ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.  ಸ್ವಂತ ಬಲದ ಮೇಲೆ ನಾವು ಅಧಿಕಾರಕ್ಕೆ ಬರಲು ಪ್ರಯತ್ನ ಮಾಡುತ್ತೇವೆ. ಲಕ್ಷಾಂತರ ಕಾರ್ಯಕರ್ತರು ಈ ಪಕ್ಷವನ್ನು ನಂಬಿಕೊಂಡಿದ್ದಾರೆ. ಅವರ ಬೆಂಬಲದಿಂದ ಮತ್ತಷ್ಟು ಪಕ್ಷವನ್ನು ಬಲಪಡಿಸುತ್ತೇವೆ. 2021ನೇ ವರ್ಷ ಜೆಡಿಎಸ್ ಪಾಲಿಗೆ ಯುವಕರ ವರ್ಷವಾಗಲಿದೆ ಎಂದರು.

ಪಕ್ಷದ ಇತರೆ ಘಟಕಗಳೊಂದಿಗೆ ಸಮನ್ವಯದಿಂದ ಕೆಲಸ ಮಾಡಲಿದೆ. 30 ಜಿಲ್ಲೆಗಳ ಜೆಡಿಎಸ್ ಯುವ ನಾಯಕರ ಜೊತೆ ಮಾತನಾಡಿದ್ದೇವೆ. ಸಾಕಷ್ಟು ವಿಚಾರಗಳನ್ನು ಚರ್ಚೆ ಮಾಡಲು ಸಭೆ ಕರೆಯಲಾಗಿದೆ. ಈಗಷ್ಟೇ ಗ್ರಾಪಂ ಚುನಾವಣೆ ಮುಗಿದಿದೆ. ಮುಂದೆ ತಾಲ್ಲೂಕು, ಜಿಲ್ಲಾ ಪಂಚಾಯತ್ ಚುನಾವಣೆ ಬರಲಿದೆ. ಮುಂಬರುವ 2023ರ ವಿಧಾನಸಭೆ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳಬೇಕಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಆರೋಪಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಈಗಾಗಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ ಎಂದರು.  ಸಂಸದ ಪ್ರಜ್ವಲ್ ರೇವಣ್ಣ ಹಾಗೂ ನಾನು ಸೇರಿ ಒಂದು ಯುವ ಪಡೆಯನ್ನು ಕಟ್ಟಲು ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ನಂತರ ನಡೆದ ಸಭೆಯಲ್ಲಿ ಯುವ ಜನತಾದಳ ಮತ್ತು ವಿದ್ಯಾರ್ಥಿ ಘಟಕವನ್ನು ಬಲಪಡಿಸುವುದು, ಇತ್ತೀಚೆಗೆ ನಡೆದ ಚುನಾವಣೆಗಳ ಹಿನ್ನಡೆ, ಮುಂದಿನ ಚುಣಾವಣೆಗೆ ಕೈಗೊಳ್ಳಬೇಕಾದ ಸಿದ್ದತೆಗಳಗಳ ಸಮಾಲೋಚನೆ ನಡೆಸಲಾಗಿದೆ.

ಸಭೆಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಎಚ್.ಕೆ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮಾಜಿ ಸಚಿವರ ಬಸವರಾಜ ಹೊರಟಿ, ಬಂಡೆಪ್ಪ ಕಾಶಂಪುರ್, ಮಾಜಿ ಶಾಸಕ ಕೋನರೆಡ್ಡಿ ಸೇರಿದಂತೆ ಯುವ ಮುಖಂಡರು ಪಾಲ್ಗೊಂಡಿದ್ದರು.

Facebook Comments