ರೇವತಿ ಜೊತೆ ನಿಖಿಲ್‍ ಕುಮಾರಸ್ವಾಮಿ ಎಂಗೇಜ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.10-ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಶಾಸಕಿ ಅನಿತಾ ಕುಮಾರಸ್ವಾಮಿಯವರ ಪುತ್ರ, ನಟ ನಿಖಿಲ್‍ಕುಮಾರಸ್ವಾಮಿ ಅವರ ವಿವಾಹದ ನಿಶ್ಚಿತಾರ್ಥ ಇಂದು ಖಾಸಗಿ ಹೊಟೇಲ್‍ನಲ್ಲಿ ಅದ್ಧೂರಿಯಾಗಿ ನೆರವೇರಿತು. ಮಾಜಿ ಸಚಿವ ಎಂ.ಕೃಷ್ಣಪ್ಪ ಅವರ ಸಹೋದರನ ಮೊಮ್ಮಗಳಾದ ರೇವತಿ ಅವರೊಂದಿಗೆ ನಿಖಿಲ್‍ಕುಮಾರಸ್ವಾಮಿ ವಿವಾಹದ ನಿಶ್ಚಿತಾರ್ಥವು ಎರಡೂ ಕುಟುಂಬಗಳ ಬಂಧು-ಬಳಗ ಹಾಗೂ ಹಿರಿಯರ ಸಮ್ಮುಖದಲ್ಲಿ ನೆರವೇರಿತು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಚಿವ ಎಚ್.ಡಿ.ರೇವಣ್ಣ ಸೇರಿದಂತ ಕುಟುಂಬದ ಸದಸ್ಯರು ನಿಶ್ಚಿತಾರ್ಥದಲ್ಲಿ ಭಾಗವಹಿಸಿದ್ದರು. ವಿವಿಧ ಪಕ್ಷಗಳ ರಾಜಕೀಯ ನಾಯಕರು, ಮುಖಂಡರು, ಚಲನಚಿತ್ರರಂಗದ ಗಣ್ಯರು, ಉಭಯ ಕುಟುಂಬಗಳ ಬಂಧುಗಳು, ಹಿತೈಷಿಗಳು ನಿಶ್ಚಿತಾರ್ಥಕ್ಕೆ ಆಗಮಿಸಿ ನಿಖಿಲ್ ಹಾಗೂ ರೇವತಿ ಅವರಿಗೆ ಶುಭ ಹಾರೈಸಿದರು.

ಖಾಸಗಿ ಹೊಟೇಲ್‍ನಲ್ಲಿ ವಿಶೇಷವಾಗಿ ಬಿಳಿ ಹಾಗೂ ಅಲಂಕಾರಿಕ ಹೂವುಗಳಿಂದ ಸಜ್ಜುಗೊಳಿಸಿದ್ದ ವೇದಿಕಯಲ್ಲಿ ನಿಖಿಲ್ -ರೇವತಿಗೆ ಉಂಗುರ ತೊಡಿಸಿದರು. ಬಾದಾಮಿ ಶೇರ್ವಾನಿಯಲ್ಲಿ ಮಧುಮಗನಾಗಿ ಮಿಂಚುತ್ತಿದ್ದ ನಿಖಿಲ್ ಮಿಂಚಿದರೆ, ಮಧುಮಗಳು ತಿಳಿ ಗುಲಾಬಿ ಬಣ್ಣದ ರೇಷ್ಮೆ ಸೀರೆಯಲ್ಲಿ ಕಂಗೊಳ್ಳಿಸುತ್ತಿದ್ದರು. ಎಲ್ಲೆಲ್ಲೂ ಬಿಳಿ ಬಣ್ಣದ ಹೂವು, ವಸ್ತುಗಳಿಂದ ಶೃಂಗಾರಗೊಂಡಿದ್ದರಿಂದ ಎಲ್ಲೆಡೆ ಬಿಳಿಯ ಬಣ್ಣ ಮನಸೆಳೆಯಿತು.

ಸಮಾರಂಭಕ್ಕೆ ಆಗಮಿಸಿದ ಗಣ್ಯರಿಗೆ ನಾದಸ್ವರ ಮತ್ತು ಚಂಡೆ ವಾದ್ಯಗಳ ಮೂಲಕ ಸ್ವಾಗತ ಕೋರಿದ್ದು ವಿಶೇಷವಾಗಿತ್ತು. ಸಮಾರಂಭದಲ್ಲಿ ಪಾಲ್ಗೊಂಡ ಎಲ್ಲಾ ಅತಿಥಿಗಳಿಗೂ ಕರ್ನಾಟಕ ಶೈಲಿಯ ಭೂರಿಭೋಜನ ಸಿದ್ಧಪಡಿಸಲಾಗಿತ್ತು. ಇಂದು ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಿ ಶುಭ ಕೋರಿದರು.

ರಾಮನಗರ-ಚನ್ನಪಟ್ಟಣ ನಡುವಿನ ನೂರಾರು ಎಕರೆ ಪ್ರದೇಶದಲ್ಲಿ ಬೃಹತ್ ವೇದಿಕೆ ನಿರ್ಮಿಸಿ ನಿಖಿಲ್‍ಕುಮಾರಸ್ವಾಮಿಯ ಮದುವೆಯನ್ನು ಅದ್ಧೂರಿಯಾಗಿ ನಡೆಸಲು ಎಚ್.ಡಿ.ಕುಮಾರಸ್ವಾಮಿ ತೀರ್ಮಾನಿಸಿದ್ದಾರೆ. ಜನರಿಗೆ ನಿಶ್ಚಿತಾರ್ಥದ ಬಳಿಕ ಮದುವೆ ಸಿದ್ಧತೆ ಕಾರ್ಯವನ್ನು ಕೈಗೊಳ್ಳಲಿದ್ದಾರೆ. ಏಪ್ರಿಲ್‍ನಲ್ಲಿ ಮದುವೆ ನಿಶ್ಚಯವಾಗಿದೆ.

Facebook Comments

Sri Raghav

Admin