ಹುಟ್ಟುಹಬ್ಬದ ಸಂಭ್ರಮದಲ್ಲಿ ನಿಖಿಲ್, ರೈಡರ್ ಚಿತ್ರದ ಟೀಸರ್ ರಿಲೀಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.22- ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಜೆಪಿ ನಗರ ನಿವಾಸದಲ್ಲಿ ನಿಖಿಲ್ ಕುಮಾರಸ್ವಾಮಿ ಅವರಿಂದ ಕೇಕ್ ಕಟ್ ಮಾಡಿಸಿ ಅಭಿಮಾನಿಗಳು ಸಂಭ್ರಮಿಸಿದರು. ಹುಟ್ಟುಹಬ್ಬ ಹಿನ್ನೆಲೆ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ ಆಯೋಜನೆ ಮಾಡಲಾಗಿತ್ತು. ಅಭಿಮಾನಿಗಳಿಗೆ ಊಟ ವ್ಯವಸ್ಥೆ ಮಾಡಿರುವ ನಿಖಿಲ್ ಸೈನ್ಯ ಸಮಿತಿ 100 ಕೆಜಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದರು.

ಕೊರೊನಾ ಕಾಲದಲ್ಲಿ ಹುಟ್ಟುಹಬ್ಬ ಆಚರಣೆ ಮಾಡಬಾರದು ಎಂದುಕೊಂಡಿದ್ದೆ. ಆದರೆ ಅಭಿಮಾನಿಗಳು, ಕಾರ್ಯಕರ್ತರು ಆಗಮಿಸಿದ್ದರಿಂದ ಅನಿವಾರ್ಯವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವಂತಾಯಿತು ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು. ಇಲ್ಲಿಗೆ ಬಂದಿರುವ ಪ್ರತಿಯೊಬ್ಬರೂ ಸುರಕ್ಷಿತವಾಗಿ ಮನೆಗೆ ಹಿಂದಿರುಗಬೇಕು. ಆಗಲೇ ನನಗೆ ನೆಮ್ಮದಿ. ಶುಭಾಶಯ ಕೋರಲು ಬಂದಿರುವ ಎಲ್ಲರಿಗೂ ಧನ್ಯವಾದಗಳು ಎಂದು ನಿಖಿಲ್ ಭಾವುಕರಾದರು.

ಜೆಡಿಎಸ್ ಪಕ್ಷ ಅಂದರೆ ರೈತರ ಪಕ್ಷ, ಮುಂದಿನ ದಿನಗಳಲ್ಲಿ ಜೆಡಿಎಸ್ ಅಂದರೆ ಯುವಕರ ಪಕ್ಷವೂ ಆಗುತ್ತದೆ. ನಾವೆಲ್ಲೇ ಸಮಾಜದ ಏಳಿಗೆಗಾಗಿ ಜೊತೆಯಾಗಿ ದುಡಿಯೋಣ. ಇಂದು ರೈಡರ್ ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದೆ. ಅದನ್ನು ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ನಿಖಿಲ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡರು. ಹುಟ್ಟುಹಬ್ಬ ಆಚರಣೆಗೂ ಮುನ್ನ ನಿಖಿಲ್ ತಂದೆ ಕುಮಾರಸ್ವಾಮಿ ಹಾಗೂ ತಾಯಿ ಅನಿತಾ ಕುಮಾರಸ್ವಾಮಿ ಅವರ ಆಶೀರ್ವಾದ ಪಡೆದರು.

Facebook Comments