ಜಮೀರ್ ಅಹಮದ್ ಗೆ ನಿಖಿಲ್ ಕುಮಾರಸ್ವಾಮಿ ತಿರುಗೇಟು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.10- ಅವರ ವಸ್ತುವನ್ನು ಅವರು ವಾಪಸ್ ಕೇಳುವುದರಲ್ಲಿ ತಪ್ಪೇನಿಲ್ಲ. ಈಗ ನಾವು ಅದನ್ನು ಖುಷಿ ಖುಷಿಯಾಗಿ ಕೊಡುತ್ತಿದ್ದೇವೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು, ಮೇಖ್ರಿ ವೃತ್ತದ ಬಳಿಯ ಗೆಸ್ಟ್ ಹೌಸ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ತುಮಕೂರು ತಾಲ್ಲೂಕಿನ ಬಳಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಕಾಲದಲ್ಲಿ ಅವರು ನಮ್ಮ ನಾಯಕರ ಜೊತೆ ಬಹಳ ಆತ್ಮೀಯವಾಗಿ‌ ಇದ್ದರು ಎಂದು ಮಾಜಿ ಸಚಿವ ಜಮೀರ್ ಅಹಮದ್ ಹೆಸರು ಪ್ರಸ್ತಾಪಿಸಿದೇ ತಿಳಿಸಿದ್ದಾರೆ.

ರಾಜಕಾರಣದಲ್ಲಿ ಅವರು ಬೆಳೆಯೋದಕ್ಕೆ ನಮ್ಮ ನಾಯಕರದ್ದೂ ಕೂಡ ಕೊಡುಗೆ ಇದೆ. ಹೌದು ನಾನಿನ್ನೂ ಹುಡುಗನೇ, ನನಗೇನು ವಯಸ್ಸಾಗಿಲ್ಲ. ನಾನು ಇನ್ನೂ ಚಿಕ್ಕಹುಡುಗನೇ. ನಾವು ಮಾತಾಡಬೇಕಾದರೆ ಸಮಾಜಕ್ಕೆ ಏನು ಸಂದೇಶ ಕೊಡುತ್ತೇವೆ ಅನ್ನೋದನ್ನು ಅವರು ಯೋಚನೆ ಮಾಡಬೇಕು ಎಂದು ನಿಖಿಲ್ ಹೇಳಿದ್ದಾರೆ.

ಏಕವಚನದಲ್ಲಿ ಮಾತಾಡೋದು ಎಷ್ಟರಮಟ್ಟಿಗೆ ಸರಿ ಅನ್ನೋದು ಯೋಚನೆ ಮಾಡಬೇಕು. ಒಬ್ಬ ಜನಪ್ರತಿನಿಧಿಯಾಗಿ ಮಾತಾಡಬೇಕಾದರೆ, ತೂಕವಾಗಿ ಮಾತಾಡಬೇಕು. ರಾಜಕೀಯವಾಗಿ ಯಾವ ಥರ ಬೇಕಾದರೂ ಮಾತಾಡಿ. ಹೆಚ್.ಡಿ‌.ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರೂ ಅನ್ನೋದನ್ನು ಬೇಕಾದರೆ ಬದಿಗಿಟ್ಟು ಮಾತಾಡೋಣ. ಮನುಷ್ಯ, ಮನುಷ್ಯನಿಗೆ ಬೆಲೆ ಕೊಡೋದನ್ನು ಮೊದಲು ಕಲಿಯಬೇಕು ಎಂದು ಅವರು ತಿರುಗೇಟು ನೀಡಿದ್ದಾರೆ.

ನಿನ್ನೆ ಅವರು ಮಾಧ್ಯಮಗಳಲ್ಲಿ ಮಾತನಾಡಿದ್ದನ್ನು ಸೂಕ್ಷ್ಮವಾಗಿ ಗಮನಿಸಿದೆ. ಅವರ ಸಂಸ್ಕೃತಿ ಏನು ಅನ್ನೋದನ್ನು ಅರ್ಥ ಮಾಡಿಕೊಳ್ಳಬಹುದು. ನಮ್ಮ ನಾಯಕರು ಆ ಮನೆಗೆ ಕಾಲಿಟ್ಟು ಸುಮಾರು ಏಳೆಂಟು ವರ್ಷಗಳಾಗಿದೆ. ಮೇಖ್ರಿ ಸರ್ಕಲ್ ನಲ್ಲಿರೋ ಮನೆಯನ್ನು ಕುಮಾರಣ್ಣ ಗೆಸ್ಟ್ ಹೌಸ್ ತರ ಉಪಯೋಗಿಸುತ್ತಿದ್ದರು.

ಮೂರ್ನಾಲ್ಕು ದಿನಗಳ ಹಿಂದಷ್ಟೆ ಆ ಮನೆಯನ್ನು ಕ್ಲಿಯರ್ ಮಾಡಿಸಿಕೊಡಿ ಎಂದಿದ್ದರು. ಖಾಲಿ ಇದ್ದದ್ದರಿಂದ ನನ್ನ ಸುತ್ತಮುತ್ತ ಕೆಲಸ ಮಾಡುವ ಹುಡುಗರು ಅಲ್ಲಿ ವಾಸ ಇದ್ದರು ಎಂದಿದ್ದಾರೆ.

ನನ್ನ ಕೆಲವೊಂದಷ್ಟು ಶೂಟಿಂಗ್ ಮೆಟಿರಿಯಲ್‌ಗಳು ಅಲ್ಲಿ ಇದ್ದವು. ಕೋವಿಡ್ ಇರೋ ಕಾರಣ ಎಲ್ಲಾ ಹುಡುಗರು ಬೀಗ ಹಾಕಿ ಊರಿಗೆ ಹೋಗಿದ್ದರು. ಬೀಗ ಹೊಡೆದು ಎಲ್ಲವನ್ನೂ ಚೆಲ್ಲಾಪಿಲ್ಲಿ ಮಾಡಿರೋದನ್ನು ನಿನ್ನೆ ನೋಡಿದ್ದೆವು. ಹುಡುಗರು ಬಂದು ಕೇಳಿದ್ದಕ್ಕೆ ಮಾತುಕತೆ ಆಗಿದೆ. ದೊಡ್ಡಮಟ್ಟದ ರಂಪಾಟ ಏನು ಆಗಿಲ್ಲ. ಅವರು ದೊಡ್ಡವರಿದ್ದಾರೆ, ಅವರ ಬಗ್ಗೆ ಮಾತಾಡೋಕೆ ನಾನು ಇಷ್ಟಪಡಲ್ಲ ಎಂದು ಅವರು ಹೇಳಿದರು‌.

Facebook Comments

Sri Raghav

Admin