‘ಕುರುಕ್ಷೇತ್ರ’ ಡಬ್ಬಿಂಗ್ ಮುಗಿಸಿದ ನಿಖಿಲ್ ಕುಮಾರಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

ಭಾರತೀಯ ಚಿತ್ರರಂಗದಲ್ಲಿ ಬಹಳಷ್ಟು ಕುತೂಹಲ ಹುಟ್ಟುಹಾಕಿರುವ ಮುನಿರತ್ನ ಕುರುಕ್ಷೇತ್ರ ಚಿತ್ರ ಇದೇ ತಿಂಗಳು 9ರಂದು ಐದು ಭಾಷೆಗಳಲ್ಲಿ ಬಿಡುಗಡೆಗೊಳ್ಳುತ್ತಿದೆ. ಆದರೆ, ಚಿತ್ರದಲ್ಲಿ ನಿಖಿಲ್ ಅವರ ಡಬ್ಬಿಂಗ್ ಕಾರ್ಯ ಬಾಕಿ ಇತ್ತು. ಇದಕ್ಕೆಲ್ಲ ತೆರೆ ಎಳೆಯಲು ಸ್ವತಃ ನಿಖಿಲ್ ಆಕಾಶ್ ರೆಕಾರ್ಡಿಂಗ್ ಸ್ಟುಡಿಯೋಗೆ ಆಗಮಿಸಿ ತಾವು ನಟಿಸಿದಂತಹ ಅಭಿಮನ್ಯು ಪಾತ್ರಕ್ಕೆ ಸಂಪೂರ್ಣವಾಗಿ ಡಬ್ಬಿಂಗ್ ಕೆಲಸ ಮುಗಿಸಿಕೊಟ್ಟಿದ್ದಾರೆ.

ಈ ವಿಚಾರವಾಗಿ ಮಾತ ನಾಡುತ್ತ, ರಾಜಕೀಯ ಒತ್ತಡ ಹಾಗೂ ಕೆಲವು ಬೇರೆ ಕಾರಣಗಳಿಂದ ಡಬ್ಬಿಂಗ್‍ಗೆ ಬರಲು ತಡವಾಗಿತ್ತು. ಈಗ ಎಲ್ಲವೂ ಮುಗಿದಿದೆ. ಸಿನಿಮಾ ಉತ್ತಮವಾಗಿ ಮೂಡಿ ಬಂದಿದೆ. ನಿರ್ಮಾಪಕ ಮುನಿರತ್ನ ಅವರು ಬಹಳ ಅದ್ಧೂರಿಯಾಗಿ ಚಿತ್ರ ನಿರ್ಮಿಸಿದ್ದಾರೆ.

2ಡಿ ಹಾಗೂ 3ಡಿಯಲ್ಲಿ ಚಿತ್ರ ಹೊರಬರುತ್ತಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೆ ಚಿತ್ರದಲ್ಲಿ ನಾನೂ ಕೂಡ ಅಭಿನಯಿಸಿರುವುದು ಸಂತಸ ತಂದಿದೆ. ಅದೇ ರೀತಿ ಹಿರಿಯ ನಟ ಅಂಬರೀಷ್‍ರೊಂದಿಗೆ ಅಭಿನಯಿಸಿದ ಕ್ಷಣಗಳು ಮರೆಯಲು ಸಾಧ್ಯವಿಲ್ಲ. ಒಟ್ಟಾರೆ ಘಟಾನುಘಟಿಗಳು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ನಿರ್ದೇಶಕ ನಾಗಣ್ಣ ನಮ್ಮಿಂದ ಉತ್ತಮ ರೀತಿಯಲ್ಲಿ ಕೆಲಸ ತೆಗೆಸಿದ್ದಾರೆ. ನನ್ನ ಸಂಪೂರ್ಣ ಶ್ರಮವನ್ನು ಈ ಚಿತ್ರದಲ್ಲಿ ಹಾಕಿದ್ದೇನೆ. ನಾನು ಒಬ್ಬ ಕಲಾವಿದ. ನಮ್ಮ ತಂದೆಯವರು ಕೂಡ ಚಿತ್ರ ನಿರ್ಮಾಪಕರು, ವಿತರಕರು, ಹಂಚಿಕೆದಾರರು. ಒಂದು ಸಿನಿಮಾ ಮಾಡಬೇಕಾದರೆ ಎಷ್ಟೆಲ್ಲ ಸಮಸ್ಯೆಗಳು ಬರುತ್ತವೆ ಎಂಬುದು ನನಗೆ ತಿಳಿದಿದೆ. ಮುಂದೆಯೂ ಕೂಡ ಉತ್ತಮ ಚಿತ್ರಗಳನ್ನು ನೀಡುವ ಬಯಕೆ ನನಗಿದೆ. ಈಗಾಗಲೇ ಪರಭಾಷಾ ನಿರ್ಮಾಪಕರು ಬಂದಿದ್ದಾರೆ.

ಮಾತುಕತೆ ನಡೆಯುತ್ತಿದೆ. ಶೀಘ್ರದಲ್ಲೇ ಸಿಹಿಸುದ್ದಿ ನೀಡುತ್ತೇನೆ. ಈ ನಮ್ಮ ಮುನಿರತ್ನ ಕುರುಕ್ಷೇತ್ರ ಚಿತ್ರವನ್ನು ಎಲ್ಲಾ ಸಿನಿಪ್ರಿಯರು ನೋಡಿ ಚಿತ್ರವನ್ನು ಗೆಲ್ಲಿಸಬೇಕೆಂದು ಕೇಳಿಕೊಂಡರು.

ವಿಶ್ವದ ಮೊದಲ ಪೌರಾಣಿಕ 3ಡಿ ಚಿತ್ರ ಮುನಿರತ್ನ ಕುರುಕ್ಷೇತ್ರ ಏಕಕಾಲದಲ್ಲಿ ಕನ್ನಡ , ತಮಿಳು , ತೆಲುಗು , ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗುತ್ತಿದ್ದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಈ ಚಿತ್ರವನ್ನು ಅದ್ದೂರಿಯಾಗಿ ಇದೇ ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆ ಮಾಡುತ್ತಿದ್ದಾರೆ.

Facebook Comments