ನಿಮ್ಹಾನ್ಸ್ ಆಸ್ಪತ್ರೆ ನಿರ್ಮಾಣಕ್ಕೆ ಕ್ಯಾಲಸನಹಳ್ಳಿ ಗ್ರಾಮದ ಬಳಿ 9 ಎಕರೆ ಜಾಗ ಹಸ್ತಾಂತರ

ಈ ಸುದ್ದಿಯನ್ನು ಶೇರ್ ಮಾಡಿ

ಕೆಆರ್ ಪುರ, ಸೆ.9- ನಿಮ್ಹಾನ್ಸ್ ಆಸ್ಪತ್ರೆ ನಿರ್ಮಾಣಕ್ಕೆ ಕ್ಯಾಲಸನಹಳ್ಳಿ ಗ್ರಾಮ ಪೂರ್ವಾಂಕರ ಬಳಿ 9 ಎಕರೆ ಜಮೀನನ್ನು ಗುರುತಿಸಲಾಗಿದ್ದು, ಇಂದು ಸಚಿವ ಆರ್. ಅಶೋಕ್ ಹಾಗೂ ಬೈರತಿ ಬಸವರಾಜ ಆಸ್ಪತ್ರೆ ಆಡಳಿತ ಮಂಡಳಿಗೆ ಭೂಮಿ ಹಸ್ತಾಂತರಿಸಿದರು.

ಈ ವೇಳೆ ಮಾತನಾಡಿದ ಆರ್.ಅಶೋಕ್, ಈ ಭಾಗದಲ್ಲಿ ನಿಮ್ಹಾನ್ಸ್  ಆಸ್ಪತ್ರೆ ನಿರ್ಮಾಣದಿಂದ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗದ ಜೊತೆಗೆ ಸುತ್ತ ಮುತ್ತಲ ಜನರ ಆರೋಗ್ಯ ಕಾಪಾಡಿದಂತಾಗುತ್ತದೆ ಎಂದು ಹೇಳಿದರು.

ಅಪಘಾತಗಳು ಸೇರಿದಂತೆ ಇತರ ಚಿಕಿತ್ಸೆಗಾಗಿ ನಗರದೊಳಗಿರುವ ನಿಮ್ಹಾನ್ಸ್ ಆಸ್ಪತ್ರೆಗೆ ರೋಗಿಗಳನ್ನು ಕರೆತರಬೇಕಿತ್ತು. ಇಲ್ಲೇ ನಿಮ್ಹಾನ್ಸ್ ಆಸ್ಪತ್ರೆ ನಿರ್ಮಾಣವಾಗುವುದರಿಂದ ಈ ಭಾಗದ ಜನರು ಹೆಚ್ಚು ಉಪಯೋಗವಾಗಲಿದೆ ಎಂದರು.

ಈ ಭಾಗದಲ್ಲಿ ವೈದ್ಯಕೀಯ ಕಾಲೇಜು ತರಬೇಕೆಂಬ ಚಿಂತನೆ ಇದೆ. ಇದು ಬಂದರೆ ಸಾವಿರಾರು ಜನರಿಗೆ ಉದ್ಯೋಗ ಸಿಗಲಿದೆ. ಆಸ್ಪತ್ರೆಗಳೇ ದೇವಾಲಯವಿದ್ದಂತೆ ಎಂದರು.

ಇಲ್ಲಿನ ಜನರಿಗೆ ಮೋಸವಾಗದಂತೆ ನೋಡಿಕೊಳ್ಳುತ್ತೇನೆ. ಬಡವರು, ನಿರ್ಗತಿಕರು ಮತ್ತು ಮನೆ ಇಲ್ಲದವರಿಗೆ ನಿವೇಶನ ಕೊಡುವ ಕೆಲಸ ಮಾಡಲಾಗುತ್ತದೆ. ಈ ಕುರಿತು ಈಗಾಗಲೇ ತಹಸೀಲ್ದಾರ್ ತೇಜಸ್ ಅವರಿಗೆ ಸೂಚನೆ ನೀಡಿದ್ದೇನೆ ಎಂದು ಅಶೋಕ್ ಹೇಳಿದರು.

ಸಚಿವ ಬೈರತಿ ಬಸವರಾಜ್ ಮಾತನಾಡಿ, ಈ ಭಾಗ ಹಳ್ಳಕೊಳ್ಳಗಳಿಂದ ಕೂಡಿದ್ದು, ಇದನ್ನು ಸರಿಪಡಿಸಿ ಜನರಿಗೆ ಅನುಕೂಲ ಮಾಡಿಕೊಡಲಾಗಿದೆ. ಇಲ್ಲಿ ಸ್ಮಶಾನ ಇಲ್ಲ. ಹಾಗಾಗಿ ಜಾಗ ಗುರುತಿಸಿ ಸಚಿವ ಅಶೋಕ್ ಅವರ ಗಮನಕ್ಕೆ ತಂದಿದ್ದೇನೆ ಎಂದರು.

ಈ ಭಾಗದ ಜನರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ. ನ್ಯಾಯ ದೊರಕಿಸಿಕೊಡುವಲ್ಲಿ ಕಾರ್ಯನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು. ಬಿಎಂಟಿಸಿ ಅಧ್ಯಕ್ಷ ನಂದೀಶ್‍ರೆಡ್ಡಿ, ಮಾಜಿ ಪಾಲಿಕೆ ಸದಸ್ಯ ವೀರಣ್ಣ, ಸಿದ್ದಲಿಂಗಯ್ಯ, ಮುಖಂಡರಾದ ರಾಮಾಂಜಿ, ಸುಬ್ಬಾರೆಡ್ಡಿ ಮತ್ತಿತರರಿದ್ದರು.

Facebook Comments