ಆ.11ರಿಂದ ಮುರುಗೇಶ್ ನಿರಾಣಿ ಮಾಲೀಕತ್ವದ ಪಾಂಡವಪುರ ಸಕ್ಕರೆ ಕಾರ್ಖಾನೆ ಕಾರ್ಯಾರಂಭ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.10- ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಕಬ್ಬು ಅರೆಯುವಿಕೆ ಸ್ಥಗಿತಗೊಳಿಸಿದ್ದ ಸಹಕಾರಿ ಕ್ಷೇತ್ರದ ರಾಜ್ಯದ ಏಕೈಕ ಸಕ್ಕರೆ ಕಾರ್ಖಾನೆ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್‍ಎಸ್‍ಕೆ) ಪುನರಾರಂಭಗೊಳ್ಳುವ ಕಾಲ ಸನ್ನಿಹಿತವಾಗಿದ್ದು, ಆ.11ರಂದು ವಿದ್ಯುಕ್ತವಾಗಿ ಕಬ್ಬು ಅರೆಯುವ ಕೆಲಸಕ್ಕೆ ಚಾಲನೆ ಸಿಗಲಿದೆ.

ಕಾರ್ಖಾನೆಯನ್ನು 40 ವರ್ಷಗಳ ಕಾಲ ಗುತ್ತಿಗೆಗೆ ಪಡೆದಿರುವ ಮುರುಗೇಶ್ ನಿರಾಣಿ ಮಾಲೀಕತ್ವದ ನಿರಾಣಿ ಶುಗರ್ಸ್ ಕಂಪನಿಯು ಪಿಎಸ್‍ಎಸ್‍ಕೆ ಆರಂಭಕ್ಕೆ ಸಿದ್ಧತೆ ನಡೆಸಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಆ.11ರಿಂದ ಕಾರ್ಖಾನೆಯಲ್ಲಿ ಕಬ್ಬು ಆರೆಯಲು ಮುಹೂರ್ತ ನಿಗಧಿಯಾಗಲಿದೆ.

ಮಂಡ್ಯ ಜಿಲ್ಲೆಯ ಪಾಂಡವಪುರ ಮತ್ತು ಶ್ರೀರಂಗಪಟ್ಟಣ ವ್ಯಾಪ್ತಿಯ ರೈತರ ಜೀವನಾಡಿಯಾದ ಪಾಂಡವಪುರ ಪಿಎಸ್‍ಎಸ್‍ಕೆ ಕಾರ್ಖಾನೆಯನ್ನು ಗುತ್ತಿಗೆ ನೀಡಲಾಗಿದ್ದು, ಟೆಂಡರ್‍ನಲ್ಲಿ ಮಾಜಿ ಸಚಿವ ಮುರುಗೇಶ್ ನಿರಾಣಿ ಮಾಲೀಕತ್ವದ ಶುಗರ್ಸ್ 40 ವರ್ಷಗಳ ಕಾಲ ಗುತ್ತಿಗೆ ಪಡೆದಿದೆ.

ಕಳೆದ ನಾಲ್ಕೈದು ವರ್ಷಗಳ ಹಿಂದೆ ನಷ್ಟದ ಸುಳಿಗೆ ಸಿಲುಕಿದ್ದ ಕಾರಣ ನೀಡಿ ಈ ಕಾರ್ಖಾನೆಯನ್ನು ಮುಚ್ಚಲಾಗಿತ್ತು. ಇದೀಗ ಕಾರ್ಖಾನೆಯನ್ನು ಪುನಶಚೇತನಗೊಳಿಸಲು ಮುಂದಾಗಿದೆ.

ಸಕ್ಕರೆ ಉತ್ಪಾದನೆಯ ಜೊತೆ ಜೊತೆಗೆ ವಿದ್ಯುತ್, ಈಥನಾಲ್, ರೆಕ್ಟಿಪೈಡ್, ಸಿಒ2, ಸಿಎನ್‍ಐ, ಸ್ಯಾನಿಟೈಸರ್, ರಸಗೊಬ್ಬರ ಸೇರಿದಂತೆ ಹಲವು ಉಪ ಉತ್ಪನ್ನಗಳ ತಯಾರಿಕೆಗೂ ಒತ್ತು ನೀಡುವ ಉದ್ದೇಶ ಹೊಂದಲಾಗಿದೆ. ರೈತರಿಗೆ ಉಚಿತ ಆರೋಗ್ಯ ತಪಾಸಣೆ, ಜೀವ ವಿಮೆ, ಗ್ರಾಮೀಣ ಕ್ರೀಡಾಕೂಟ, ಉದ್ಯೋಗ ಮೇಳ, ರಿಯಾಯ್ತಿ ದರದಲ್ಲಿ ಅಗತ್ಯ ವಸ್ತುಗಳ ಮಾರಾಟದಂತಹ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದೆ.

ಪಿಎಸ್‍ಎಸ್‍ಕೆ ವ್ಯಾಪ್ತಿಯಲ್ಲಿ ಬ್ಯಾಂಕ್ ಪ್ರಾರಂಭಿಸುವ ಮೂಲಕ ರೈತರ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತೇವೆ. ಪಿಎಸ್‍ಎಸ್‍ಕೆ ಮುನ್ನಡೆಸಿ ಸಕ್ಕರೆ ನಾಡು ಎಂಬ ಹೆಗ್ಗಳಿಕೆಯನ್ನು ಮತ್ತಷ್ಟು ಉತ್ತುಂಗಕ್ಕೆ ಕೊಂಡೊಯ್ಯುವ ಗುರಿ ಇಟ್ಟುಕೊಳ್ಳಲಾಗಿದೆ. ಪಾಂಡವಪುರ ಸಕ್ಕರೆ ಕಾರ್ಖಾನೆಯ ಕಬ್ಬು ಅರೆಯುವಿಕೆ ಸಾಮಥ್ರ್ಯವನ್ನು ಮುಂದಿನ ಐದು ವರ್ಷಗಳಲ್ಲಿ ಈಗಿರುವ 3500 ಟನ್‍ನಿಂದ 5000 ಟನ್‍ಗೆ ಹೆಚ್ಚಿಸಲಾಗುವುದು.

5 ಮೆಗಾವ್ಯಾಟ್‍ನಿಂದ 20 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಕ್ರಿಯಾಯೋಜನೆ ರೂಪಿಸಲಾಗಿದ್ದು, ನಿತ್ಯ 60 ಸಾವಿರ ಲೀಟರ್ ಎಥೆನಾಲ್ ಉತ್ಪಾದಿಸುವ ಡಿಸ್ಟಿಲರಿಯನ್ನು ಆರಂಭಿಸುವುದು, ರೈತರಿಗೆ ಕಾಲ ಕಾಲಕ್ಕೆ ಹಣ ಸಂದಾಯ ಮಾಡುವುದರ ಜೊತೆಗೆ ನಿರುದ್ಯೋಗಿ ಯುವಕ-ಯುವತಿಯರಿಗೆ ತರಬೇತಿ ನೀಡಿ ಉದ್ಯೋಗ ನೀಡುವ ಮೂಲಕ ಆರ್ಥಿಕ ಮಟ್ಟವನ್ನು ಹೆಚ್ಚಿಸುವುದು.

ಕಬ್ಬು ಬೆಳೆಗಾರರಿಗೆ ವಿಮೆ, ಸಾಮಾಜಿಕ ಭದ್ರತೆ ಒದಗಿಸುವ ಜೊತೆಗೆ ಸೂಪರ್ ಮಾರುಕಟ್ಟೆ ಸ್ಥಾಪಿಸಿ ರೈತರಿಗೆ ಹಾಗೂ ಕಾರ್ಮಿಕರಿಗೆ ಅಗ್ಗದ ದರದಲ್ಲಿ ಜೀವನಾವಶ್ಯಕ ವಸ್ತುಗಳನ್ನು ನೀಡುವ ಯೋಜನೆಯನ್ನು ನಿರಾಣಿ ಶುಗರ್ಸ್ ಕಂಪನಿಯು ಹಾಕಿಕೊಂಡಿದೆ.

ಪಿಎಸ್‍ಎಸ್‍ಕೆ ಕಾರ್ಖಾನೆ ವ್ಯಾಪ್ತಿಯ ಸುಮಾರು 4 ಲಕ್ಷ ಹೆಕ್ಟೇ ರ್ ಭೂಮಿಯಲ್ಲಿ ರೈತರು ಕಬ್ಬು ಬೆಳೆಯುತ್ತಿದ್ದರು. ಆದರೆ ಕಳೆದ ನಾಲ್ಕೈದು ಸಕ್ಕರೆ ಕಾರ್ಖಾನೆ ಮುಚ್ಚಲ್ಪಟ್ಟಿದ್ದರಿಂದ ರೈತರು ವಿಧಿ ಇಲ್ಲದೆ ತಾವು ಬೆಳೆದ ಕಬ್ಬನ್ನು ಬೇರೆ ಬೇರೆ ಕಾರ್ಖಾನೆಗೆ ಸಾಗಿಸಲು ಪರದಾಡಿ ನಷ್ಟ ಅನುಭವಿಸುತ್ತಿದ್ದರು. ಹೀಗಾಗಿ ಈ ಕಾರ್ಖಾನೆಯ ಅಭಿವೃದ್ದಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂಬ ಕೂಗು ಕೇಳಿ ಬಂದಿತ್ತು.

ಆದರೆ ವಿಶೇಷ ಪ್ಯಾಕೇಜ್ ಘೋಷಣೆಗೆ ಮುಂದಾಗದ ಸರ್ಕಾರ ಇದೀಗ ಈ ಕಾರ್ಖಾನೆಯನ್ನೇ ಖಾಸಗಿ ವಲಯಕ್ಕೆ 40 ವರ್ಷಗಳ ಕಾಲ ಗುತ್ತಿಗೆ ನೀಡಿದೆ. ಸಕ್ಕರೆ ಉತ್ಪಾದನೆಯಲ್ಲಿ ರಾಜ್ಯದಲ್ಲಿಯೇ ಹೆಸರು ಮಾಡಿದ್ದ ಪಿಎಸ್‍ಎಸ್‍ಕೆಯನ್ನು 2006ರಲ್ಲಿ ಕೊಠಾರಿ ಶುಗರ್ಸ್ ಗೆ ವಹಿಸಲಾಗಿತ್ತು.

ಒಂದೆರಡು ವರ್ಷದ ನಂತರ ಸ್ಥಗಿತಗೊಂಡಿತು. 2010ರಲ್ಲಿ ಕಾರ್ಖಾನೆಯನ್ನು ಮಂಡ್ಯದ ಮೈಷಗರ್ ಕಂಪನಿಗೆ ವಹಿಸಲಾಗಿತ್ತು. ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಖಾನೆಯ ಪುನಶ್ವೇತನಕ್ಕೆ 50 ಕೋಟಿ ಹಣ ನೀಡಿದ್ದರು. ಮೂರು ವರ್ಷ ನಡೆದ ಕಾರ್ಖಾನೆ ಮತ್ತೆ ಸ್ಥಗಿತೊಂಡಿತು.

2014ರಲ್ಲಿ ಪಿಎಸ್‍ಎಸ್‍ಕೆ ಮತ್ತೆ ಸಹಕಾರಿ ಆಡಳಿತ ಮಂಡಳಿಗೆ ಒಳಪಟ್ಟಿತು. ಮೂರು ವರ್ಷ ನಡೆದ ಕಾರ್ಖಾನೆ ಸಾಲದ ಸುಳಿಯಲ್ಲಿ ಸಿಲುಕಿ ಬಂದ್ ಆಯಿತು. 2019ರ ಜನವರಿಯಲ್ಲಿ ನಡೆದ ಷೇರುದಾರರ ಸಭೆಯಲ್ಲಿ ಕಾರ್ಖಾನೆಯನ್ನು ಖಾಸಗಿ ಮಾಲೀಕತ್ವಕ್ಕೆ ನೀಡಲು ನಿರ್ಧಾರ ಕೈಗೊಳ್ಳಲಾಗಿತ್ತು.

ಒಂದು ಕಾಲಕ್ಕೆ ರಾಜ್ಯದಲ್ಲಿಯೇ ಅತ್ಯುತ್ತಮ ಸಕ್ಕರೆ ಕಾರ್ಖಾನೆ ಎಂಬ ಹೆಗ್ಗಳಿಕೆಗೆ ಪಿಎಸ್‍ಎಸ್‍ಕೆ ಪಾತ್ರವಾಗಿತ್ತು. ಕಾರ್ಖಾನೆಯ ವಿಸ್ತರಣೆಗೆ ಕೈಹಾಕಿದ್ದರಿಂದ ಒಂದಷ್ಟು ವರ್ಷಗಳು ಕಾರ್ಖಾನೆಗೆ ಬೀಗ ಹಾಕಲಾಗಿತ್ತು. ನಂತರ 2007ನೇ ಸಾಲಿನಲ್ಲಿ ಅಂದಿನ ಎಚ್.ಡಿ.ಕುಮಾರಸ್ವಾಮಿ ಸರ್ಕಾರವು ಖಾಸಗಿ ಕೊಠಾರಿ ಷುಗರ್‍ಗೆ ವಹಿಸಿತು. ಈ ಕಂಪನಿ ಕಾರ್ಖಾನೆ ನಡೆಸದೇ ನಷ್ಟವುಂಟು ಮಾಡಿ ಪಲಾಯನ ಮಾಡಿತ್ತು.

ಇದಾದ ಬಳಿಕ 2010 ರಲ್ಲಿ ಸರ್ಕಾರವೇ ಮೈಶುಗರ್ ಆಡಳಿತ ಮಂಡಳಿಯೊಂದಿಗೆ ವಿಲೀನ ಗೊಳಿಸುವ ಮೂಲಕ ಅಂದಿನ ಮೈಷುಗರ್ ಅಧ್ಯಕ್ಷ ನಾಗರಾಜಪ್ಪ ಅವರ ಕೈಗೆ ವಹಿಸುವ ಮೂಲಕ ಕಾರ್ಖಾನೆಯನ್ನು ಪುನಃ ಪ್ರಾರಂಭಿಸಲಾಗಿತ್ತು,ಸುಮಾರು 3 ವರ್ಷಗಳವರೆಗೆ ನಡೆದ ಕಾರ್ಖಾನೆಯನ್ನು ಮತ್ತೆ ಸಹಕಾರಿ ಭಾಗಿತ್ವದಲ್ಲಿಯೇ ಕಾರ್ಖಾನೆ ನಡೆಯುವಂತೆ ಮಾಡಲಾಗಿತ್ತು.

ಆದರೆ 2014 ರಿಂದ 2017ರವರೆಗೆ ಕಾರ್ಖಾನೆಯನ್ನು ನಡೆಸಿದ ಪಿಎಸ್‍ಎಸ್‍ಕೆ ಆಡಳಿತಮಂಡಳಿ ಸಮರ್ಪಕವಾಗಿ ನಿರ್ವಹಿಸದೆ ನಷ್ಠದ ಕಾರಣದಿಂದ ಸ್ಥಗಿತಗೊಳಿಸಲಾಗಿತ್ತು. ಅಂದಿನಿಂದ ಇಲ್ಲಿಯವರೆಗೂ ರೋಗಗ್ರಸ್ಥ ಕಾರ್ಖಾನೆಯಾಗಿ ನಿಂತಿದ್ದ ಕಾರ್ಖಾನೆಯನ್ನು ಇದೀಗ ರಾಜ್ಯ ಸರ್ಕಾರ ಖಾಸಗಿಗೆ ವಹಿಸಿದೆ.

Facebook Comments