ವಿಚಾರಣೆಗೆ ಬಾಕಿ ಉಳಿದಿಲ್ಲ, ನಿರ್ಭಯಾ ದೋಷಿಗಳಿಗೆ ಶೀಘ್ರ ಮರಣ ದಂಡನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಫೆ.15- ನಿರ್ಭಯಾ ಗ್ಯಾಂಗ್‍ರೇಪ್ ಮತ್ತು ಹತ್ಯೆ ಪ್ರಕರಣದಲ್ಲಿ ನಾಲ್ವರು ದೋಷಿಗಳಿಗೆ ಅತಿ ಶೀಘ್ರದಲ್ಲೇ ಮರಣದಂಡನೆ ದಿನಾಂಕ ಪ್ರಕಟವಾಗಲಿದೆ. ವಿಚಾರಣಾಧೀನ ನ್ಯಾಯಾಲಯ ಗಲ್ಲು ಶಿಕ್ಷೆಗೆ ಹೊಸ ದಿನಾಂಕ ನಿಗದಿಗೊಳಿಸಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ. ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಪ್ರತ್ಯೇಕವಾಗಿ ಗಲ್ಲಿಗೇರಿಸುವ ಕುರಿತು ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಅಪರಾಧಿಗಳ ಯಾವುದೇ ಮನವಿಗಳು ಸರ್ವೋಚ್ಛ ನ್ಯಾಯಾಲಯದ ಮುಂದೆ ವಿಚಾರಣೆಗೆ ಬಾಕಿ ಉಳಿದಿಲ್ಲ.

ಹಾಗೂ ನಾಲ್ವರಲ್ಲಿ ಮೂವರ ಕ್ಷಮಾದಾನ ಅರ್ಜಿಗಳನ್ನು ರಾಷ್ಟ್ರಪತಿಗಳು ಈಗಾಗಲೇ ತಿರಸ್ಕರಿಸಿರುವುದರಿಂದ ನಾಲ್ಕನೆ ಅಪರಾಧಿ ಕ್ಷಮಾದಾನ ಅರ್ಜಿಯನ್ನು ಇನ್ನೂ ಸಲ್ಲಿಸದಿರುವುದರಿಂದ ಗಲ್ಲುಶಿಕ್ಷೆಗೆ ವಿಚಾರಣಾಧೀನ ನ್ಯಾಯಾಲಯ ಹೊಸ ದಿನಾಂಕ ನಿಗದಿಪಡಿಸಬಹುದು ಎಂದು ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿಗಳಾದ ಆರ್.ಭಾನುಮತಿ, ಅಶೋಕ್ ಭೂಷಣ್, ಎ.ಎಸ್.ಬೋಪಣ್ಣ ಅವರನ್ನೊಳಗೊಂಡ ನ್ಯಾಯಪೀಠ, ದೆಹಲಿ ಸರ್ಕಾರದ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಸಲ್ಲಿಸಿದ ಮನವಿಯನ್ನು ಪಟ್ಟಿ ಮಾಡಿತು.

ದೆಹಲಿ ಹೈಕೋರ್ಟ್ ಫೆ.17ರಂದು ನಾಲ್ವರು ಅಪರಾಧಿಗಳಿಗೆ ನೀಡಲಾಗಿದ್ದ ಗಲ್ಲುಶಿಕ್ಷೆ ದಿನಾಂಕಕ್ಕೆ ತಡೆನೀಡಲು ನಿರಾಕರಿಸಿತ್ತು. ಅಪರಾಧಿಗಳ ಕ್ಷಮಾದಾನ ಅರ್ಜಿ ವಿಚಾರಣೆ ಬಾಕಿ ಉಳಿದಿರುವುದನ್ನು ವಿಚಾರಣಾ ನ್ಯಾಯಾಲಯ ತನ್ನ ಪ್ರಕ್ರಿಯೆಗೆ ಅಡಚಣೆ ಎಂದು ಭಾವಿಸಬೇಕಾಗಿಲ್ಲ ಎಂದು ಕೂಡ ಕೋರ್ಟ್ ಹೇಳಿತು.

ಮುಖೇಶ್‍ಸಿಂಗ್, ಅಕ್ಷಯ್‍ಕುಮಾರ್, ವಿನಯ್ ಶರ್ಮ ಮತ್ತು ಪವನ್‍ಗುಪ್ತ ಈ ನಾಲ್ವರು ದೋಷಿಗಳಿಗೆ ಅತಿ ಶೀಘ್ರದಲ್ಲೇ ಮರಣದಂಡನೆ ಶಿಕ್ಷೆ ದಿನಾಂಕ ನಿಗದಿಯಾಗುವುದಕ್ಕೆ ಈಗ ಹಾದಿ ಸುಗಮವಾದಂತಾಗಿದೆ.

Facebook Comments