ನಿರ್ಭಯಾ ಪೈಶಾಚಿಕ ಕೃತ್ಯಕ್ಕೆ ನಾಳೆಗೆ 7 ವರ್ಷ, ಪೋಷಕರಲ್ಲಿ ಮಡುಗಟ್ಟಿದ ದುಃಖ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಡಿ.15-ದೇಶಾದ್ಯಂತ ಭಾರೀ ಆಕ್ರೋಶ ಮತ್ತು ಪ್ರತಿಭಟನೆಗೆ ಕಾರಣವಾಗಿದ್ದ ನಿರ್ಭಯಾ ಮೇಲಿನ ಪೈಶಾಚಿಕ ಅತ್ಯಾಚಾರ ಮತ್ತು ಭೀಕರ ಕಗ್ಗೊಲೆ ನಡೆದು ನಾಳೆಗೆ ಏಳು ವರ್ಷ ತುಂಬಲಿದೆ.

ಇದೇ ಸಂದರ್ಭದಲ್ಲಿ ನಿರ್ಭಯಾ ಪೋಷಕರು ಮತ್ತು ಬಂಧುಮಿತ್ರರಲ್ಲಿ ದುಃಖ ಮಡುಗಟ್ಟಿದ್ದು, ಕಾಮುಕ ಹಂತಕರಿಗೆ ಗಲ್ಲು ಶಿಕ್ಷೆಯಾಗುವುದನ್ನು ಎದುರು ನೋಡುತ್ತಿದ್ದಾರೆ. ಇದೇ ವೇಳೆ ಅತ್ತ ನೇಣುಗಂಬದ ನೆರಳಿನಲ್ಲಿರುವ ನಾಲ್ವರು ಅತ್ಯಾಚಾರಿಗಳ ಪೋಷಕರಲ್ಲೂ ಆತಂಕ ಮನೆ ಮಾಡಿದ್ದು, ತಮ್ಮ ಮಕ್ಕಳಿಗೆ ಮರಣದಂಡನೆ ಜಾರಿ ಸನಿಹಿತವಾಗಿದೆ ಎಂಬ ದುಃಖ ಆವರಿಸಿದೆ.

ಏಳು ವರ್ಷಗಳ ಹಿಂದೆ ಅಂದರೆ ಡಿ.16, 2012ರಂದು ರಾತ್ರಿ ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್‍ನಲ್ಲಿ ಅರೆವೈದ್ಯಕೀಯ ವಿದ್ಯಾರ್ಥಿನಿ ನಿರ್ಭಯಾ ಮೇಲೆ ಮುಕೇಶ್ ಸಿಂಗ್, ಪವನ್ ಗುಪ್ತ, ವಿನಯ್ ಶರ್ಮ ಮತ್ತು ಅಕ್ಷಯ್ ಕುಮಾರ್ ಎಂಬ ಕೀಚಕರು ಪೈಶಾಚಿಕ ಅತ್ಯಾಚಾರ ನಡೆಸಿ ಚಿತ್ರಹಿಂಸೆ ನೀಡಿದ್ದರು.

ನಂತರ ಚಲಿಸುವ ಬಸ್‍ನಿಂದಲೇ ಆಕೆಯನ್ನು ಹೊರಗೆ ತಳ್ಳಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಆಕೆಯನ್ನು ದೆಹಲಿಯ ಆಸ್ಪತ್ರೆಗೆ ಸೇರಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ವಿಮಾನದಲ್ಲಿ ಕಳುಹಿಸಲಾಗಿತ್ತು.

ಜೀವನ್ಮರಣ ಹೋರಾಟ ನಡೆಸಿದ ನಿರ್ಭಯಾ ಕೊನೆಯುಸಿರೆಳೆದಿದ್ದರು. ಈ ಘಟನೆ ದೇಶಾದ್ಯಂತ ಭಾರೀ ಪ್ರತಿಭಟನೆಯ ಕಿಚ್ಚು ಹಬ್ಬಿಸಿತ್ತು. ಈಗ ಈ ಪ್ರಕರಣಕ್ಕೆ 7 ವರ್ಷ ಸಂದಿದೆ. ಇದೇ ಸಂದರ್ಭದಲ್ಲಿ ಅತ್ಯಾಚಾರಿ ಹಂತಕರಿಗೆ ನೇಣು ಶಿಕ್ಷೆಯು ಸನಿಹಿತವಾಗಿದೆ. ಡಿ.21ರಂದು ಈ ನಾಲ್ವರಿಗೆ ದೆಹಲಿಯ ತಿಹಾರ್ ಜೈಲಿನಲ್ಲಿ ಗಲ್ಲುಗೇರಿಸುವ ಸಾಧ್ಯತೆ ಇದೆ.

Facebook Comments

Sri Raghav

Admin