20 ಲಕ್ಷ ಕೋಟಿ ಪ್ಯಾಕೇಜ್‍ನಲ್ಲಿ ಇಂದು ಯಾರ್ಯಾರಿಗೆ ಏನೇನು ಹಂಚಿಕೆ ಮಾಡ್ತಾರೆ ನಿರ್ಮಲಾ…?

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 16-ಭಾರತವನ್ನು ಕಾಡುತ್ತಿರುವ ವಿನಾಶಕಾರಿ ಕೊರೊನಾ ವೈರಸ್‍ನಿಂದ ಪಾತಾಳಕ್ಕೆ ಕುಸಿದಿರುವ ಆರ್ಥಿಕತೆಗೆ ಪುನಃಶ್ಚೇತನ ನೀಡಲು ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ 20 ಲಕ್ಷ ಕೋಟಿ ರೂ.ಗಳ ವಿಶೇಷ ಆರ್ಥಿಕ ಪ್ಯಾಕೇಜ್‍ನ ನಾಲ್ಕನೇ ಸ್ವರೂಪ ಇಂದು ಸಂಜೆ 4 ಗಂಟೆಗೆ ಅನಾವರಣಗೊಳ್ಳಲಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈಗಾಗಲೇ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳು, ತೆರಿಗೆದಾರರು, ವಲಸೆ ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಮಧ್ಯಮ ವರ್ಗದವರು ಹಾಗೂ ಕೃಷಿಕರಿಗಾಗಿ ಮೂರು ಹಂತಗಳಲ್ಲಿ ವಿಶೇಷ ಪ್ಯಾಕೇಜ್ ಮತ್ತು ಪರಿಹಾರಗಳನ್ನು ಘೋಷಿಸಿದ್ದಾರೆ.

ಇಂದು ಇನ್ನೂ ಕೆಲವು ವಲಯಗಳಿಗೆ ಮಹತ್ವದ ಯೋಜನೆಗಳು ಪ್ರಕಟವಾಗುವ ನಿರೀಕ್ಷೆ ಇದೆ. ನಿನ್ನೆ ಮೂರನೇ ಹಂತದ ಘೋಷಣೆಯಲ್ಲಿ ನಿರ್ಮಲಾ ಅವರು ಕೃಷಿ ಮೂಲ ಸೌಕರ್ಯಾಭಿವೃದ್ದಿಗೆ 1 ಲಕ್ಷ ಕೋಟಿ ರೂ.ಗಳ ವಿಶೇಷ ನಿಧಿ ಸ್ಥಾಪನೆ ಘೋಷಿಸಿದ್ದರು.

ಅಲ್ಲದೇ ಲಾಕ್‍ಡೌನ್ ಅವಧಿಯಲ್ಲಿ ರೈತರು ಮತ್ತು ಬೆಳೆಗಾರರ ಖಾತೆಗಳಿಗೆ 18,730 ಕೋಟಿ ರೂ.ಗಳನ್ನು ಜಮೆ ಮಾಡಲಾಗಿದ್ದು, ಕೃಷಿಕರಿಂದ 73,300 ಕೋಟಿ ರೂ.ಗಳ ಮೊತ್ತದ ಕೃಷಿ ಉತ್ಪನ್ನಗಳನ್ನು ಖರೀದಿಸಿರುವುದಾಗಿ ಪ್ರಕಟಿಸಿದ್ದರು.

ಜೊತೆಗೆ ಮೀನುಗಾರರು, ಪಶುಸಂಗೋಪನೆ ಉದ್ಯಮದಲ್ಲಿ ತೊಡಗಿರುವವರು, ಹೈನುಗಾರರು ಮತ್ತು ಆಹಾರ ಸಂಸ್ಕರಣೆ ಉದ್ಯಮ ಸೇರಿದಂತೆ ಒಟ್ಟು 17 ಯೋಜನೆಗಳನ್ನು ಘೋಷಿಸಿದ್ದರು.  ರಾಷ್ಟ್ರ ಸ್ವಾವಲಂಬನೆ ದೃಷ್ಟಿಯಿಂದ 20 ಲಕ್ಷ ಕೋಟಿ ರೂ.ಗಳ ವಿಶೇಷ ಆರ್ಥಿಕ ಪ್ಯಾಕೇಜ್‍ನಲ್ಲಿ ಉಳಿದ ಹಣದಲ್ಲಿ ಯಾವ ಯಾವ ಕ್ಷೇತ್ರಕ್ಕೆ ಏಷ್ಟೆಷ್ಟು ಮೊತ್ತ ಲಭಿಸಲಿದೆ ಎಂಬ ಪ್ರಶ್ನೆಗೆ ಇಂದು 4 ಗಂಟೆಗೆ ಇನ್ನಷ್ಟು ಮಾಹಿತಿ ಲಭಿಸಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ರಾತ್ರಿ ತಮ್ಮ ಭಾಷಣದಲ್ಲಿ ಘೋಷಿಸಿದ್ದ 20 ಲಕ್ಷ ಕೋಟಿ ರೂ.ಗಳ ವಿಶೇಷ ಆರ್ಥಿಕ ಪ್ಯಾಕೇಜ್‍ನಲ್ಲಿ ಇಂದು ಇನ್ನಷ್ಟು ಪ್ಯಾಕೇಜ್‍ಗಳು ದೇಶವಾಸಿಗಳಿಗೆ ಲಭ್ಯವಾಗಲಿದೆ.

Facebook Comments

Sri Raghav

Admin