2.35 ಲಕ್ಷ ಕೋಟಿ ರೂ. ಹೆಚ್ಚುವರಿ ಖರ್ಚು : ಸಂಸತ್ ಒಪ್ಪಿಗೆಗೆ ನಿರ್ಮಲ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಸೆ.14- ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2.35 ಲಕ್ಷ ಕೋಟಿ ರೂ.ಗಳ ಖರ್ಚಿನ ಅಗತ್ಯತೆಯ ಹೆಚ್ಚುವರಿ ಬೇಡಿಕೆಗಾಗಿ ಸಂಸತ್‍ನ ಒಪ್ಪಿಗೆ ಕೋರಿದ್ದಾರೆ. ಇಂದಿನಿಂದ ಆರಂಭವಾಗಿರುವ ಸಂಸತ್ ಅಧಿವೇಶನದ ಮೊದಲ ದಿನದ ಕಲಾಪದ ವೇಳೆ ಲೋಕಸಭೆಯಲ್ಲಿ ಈ ಮನವಿ ಮಾಡಿದ ಅವರು, 2,35,853,87 ಕೋಟಿ ರೂ.ಗಳ ಖರ್ಚಿನ ಬೇಡಿಕೆಗೆ ಸಮ್ಮತಿ ನೀಡುವಂತೆ ಮನವಿ ಮಾಡಿದರು.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 40 ಸಾವಿರ ಕೋಟಿ ರೂ.ಗಳು ಸೇರಿದಂತೆ 2.35 ಲಕ್ಷ ಕೋಟಿ ರೂ.ಗಳ ಖರ್ಚಿನ ಅಗತ್ಯವಿದೆ. ಇದರ ಬಿಡುಗಡೆ ಬೇಡಿಕೆಗಾಗಿ ಹಣಕಾಸು ಸಚಿವರು ಮನವಿ ಮಾಡಿದರು.

ಪ್ರವಾಸೋದ್ಯಮಕ್ಕೆ ಅಪಾರ ನಷ್ಟ: ಕೋವಿಡ್ 19 ವೈರಾಣು ಹಾವಳಿಯಿಂದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಆಗಿರುವ ನಷ್ಟದ ಬಗ್ಗೆ ಈವರೆಗೆ ಯಾವುದೇ ಔಪಚಾರಿಕ ಅಧ್ಯಯನ ನಡೆಸಿಲ್ಲ ಎಂದು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಪಟೇಲ್ ತಿಳಿಸಿದ್ದಾರೆ.  ಲೋಕಸಭೆಯಲ್ಲಿಂದು ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರ ನೀಡಿರುವ ಅವರು, ಪ್ರವಾಸೋದ್ಯಮ ಕ್ಷೇತ್ರಕ್ಕೆ ಕೊರನಾ ಪಿಡುಗಿನಿಂದ ಅಪಾರ ನಷ್ಟ ಸಂಭವಿಸಿದೆ. ಇದರ ಅಂಕಿ ಅಂಶಗಳಿಗಾಗಿ ಅಧ್ಯಯನ ನಡೆಸಲಾಗುತ್ತದೆ ಎಂದರು.

ಸ್ಪೀಕರ್ ಮನವಿ:  ಸಂಸದರು ಕಲಾಪದ ವೇಳೆ ತಮ್ಮ ಆಸನಗಳನ್ನು ಬಿಟ್ಟು ಏಳದಂತೆ ಮತ್ತು ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳಬೇಕೆಂದು ಲೋಕಸಭಾ ಅಧ್ಯಕ್ಷ ಹೋಂ ಬಿರ್ಲಾ ಮನವಿ ಮಾಡಿದ್ದಾರೆ.

ಕಲಾಪದ ವೇಳೆ ಅನಗತ್ಯವಾಗಿ ತಮ್ಮ ಆಸನಗಳಿಂದ ಎದ್ದು ಓಡಾಡುವುದು ಬೇಡ. ಸಾಧ್ಯವಾದಷ್ಟು ಸಾಮಾಜಿಕ ಅಂತರ ಕಾಯ್ದುಕೊಂಡು ಈ ಅಧಿವೇಶನವನ್ನು ಯಶಸ್ವಿಗೊಳಿಸುವಂತೆ ಅವರು ಸದಸ್ಯರಲ್ಲಿ ಕೋರಿದರು.

Facebook Comments